ಪರಿಸರ ಕಾನೂನು ಉಲ್ಲಂಘನೆಗೆ ದಂಡ ವಿಧಿಸುವಿಕೆ ಕಂಪೆನಿ ಆದಾಯ ಆಧರಿಸಿರಬಾರದು: ಎನ್‌ಜಿಟಿಗೆ ಸುಪ್ರೀಂ ತರಾಟೆ

ಪ್ರಸ್ತುತ ಪ್ರಕರಣದಲ್ಲಿ ₹ 25 ಕೋಟಿ ದಂಡಕ್ಕೆ ಕಾರಣವಾದ ಇಂತಹ ನಡೆ ಕಾನೂನಿಗೆ ಸಂಪೂರ್ಣ ಹೊರತಾದದ್ದು ಎಂದು ನ್ಯಾಯಮೂರ್ತಿಗಳಾದ ಗವಾಯಿ ಮತ್ತು ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿತು.
Supreme Court, National Green Tribunal
Supreme Court, National Green Tribunal
Published on

ಪರಿಸರ ನಿಯಮ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕಂಪೆನಿ  ವಾದವನ್ನೂ ಆಲಿಸದೆ ಅದರ ಆದಾಯ ಆಧರಿಸಿ ದಂಡ ವಿಧಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ಸುಪ್ರೀಂ ಕೋರ್ಟ್‌ ಈಚೆಗೆ ತರಾಟೆಗೆ ತೆಗೆದುಕೊಂಡಿದೆ [ ಬೆಂಜೊ ಕೆಮ್ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ಮತ್ತು ಅರವಿಂದ್ ಮನೋಹರ್ ಮಹಾಜನ್ ಇನ್ನಿತರರ ನಡುವಣ ಪ್ರಕರಣ].

ಪ್ರಸ್ತುತ ಪ್ರಕರಣದಲ್ಲಿ ₹ 25 ಕೋಟಿ ದಂಡಕ್ಕೆ ಕಾರಣವಾದ ಇಂತಹ ನಡೆ ಕಾನೂನಿಗೆ ಸಂಪೂರ್ಣ ಹೊರತಾದದ್ದು ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿತು.

"ಯಾವುದೇ ಸಂದರ್ಭದಲ್ಲಿ, ಆದಾಯ ಗಳಿಕೆ ಎಂಬುದು ಪರಿಸರ ಹಾನಿಗೆ ವಿಧಿಸುವ ದಂಡದ ಮೊತ್ತದೊಂದಿಗೆ ಸಂಬಂಧ ಹೊಂದಿರುವುದಿಲ್ಲ. ನಿಯಮ ಉಲ್ಲಂಘಿಸಿದ್ದಕ್ಕೆ ಕಂಪೆನಿ ತಪ್ಪಿತಸ್ಥ ಎಂದು ಅರಿತ ಎನ್‌ಜಿಟಿ ಅಷ್ಟು ಭಾರೀ ಮೊತ್ತದ ದಂಡು ವಿಧಿಸುವ ಮುನ್ನ ಮೇಲ್ಮನವಿದಾರ ಕಂಪೆನಿಗೆ ಕನಿಷ್ಠ ಒಂದು ನೋಟಿಸನ್ನಾದರೂ ನೀಡಬಹುದು ಎಂಬ ನಿರೀಕ್ಷೆ ಇರುತ್ತದೆ. ಎನ್‌ಜಿಟಿ ನಡೆ ವಿಷಾದಕರ ಎಂದು ಹೇಳಬೇಕಿದ್ದು ಈ ರೀತಿಯ ದಂಡ ವಿಧಿಸುವಿಕೆ ಕಾನೂನು ತತ್ವಗಳಿಗೆ ಸಂಪೂರ್ಣ ಹೊರತಾದುದು” ಎಂದು ಸುಪ್ರೀಂ ಕೋರ್ಟ್‌ ನವೆಂಬರ್ 27ರಂದು ಕಿಡಿಕಾರಿದೆ.  

ಸ್ವಾಭಾವಿಕ ನ್ಯಾಯದ ತತ್ವಗಳನ್ನು ಸಂಪೂರ್ಣ ಉಲ್ಲಂಘಿಸಿದ ಮತ್ತು ಸೂಕ್ತ ಪರಿಗಣನೆ ಇಲ್ಲದೆ ಎನ್‌ಜಿಟಿ ಜಾರಿಗೊಳಿಸುತ್ತಿರುವ ನಮ್ಮ ಪರಿಗಣನೆಗೆ ಬಂದ ಮೂರನೇ ಪ್ರಕರಣ ಇದಾಗಿದೆ.
ಸುಪ್ರೀಂ ಕೋರ್ಟ್‌

ರಾಸಾಯನಿಕ ಇಂಟರ್ ಮೀಡಿಯೇಟ್ ತಯಾರಿಸುವ ಬೆಂಜೊ ಕೆಮ್ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ  2022ರಲ್ಲಿ ಎನ್‌ಜಿಟಿ ನೀಡಿದ್ದ ತೀರ್ಪನ್ನು ಬದಿಗೆ ಸರಿಸಿದ ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (NEERI- ನೀರಿ) ಯ ವರದಿಗಳು  ತಮ್ಮ ಕಡೆಯಿಂದ ಯಾವುದೇ ನಿಯಮ ಪಾಲಿಸಿಲ್ಲ ಎಂದು ಬೆಂಜೊ ಕೆಮ್ ಅವರ ವಕೀಲರು ವಾದಿಸಿದರೂ  ಎನ್‌ಜಿಟಿ ಇದಕ್ಕೆ ವಿರುದ್ಧವಾಗಿ  ತೀರ್ಪು ನೀಡಿತು. ಇದಲ್ಲದೆ, ಕಂಪನಿಯ  ಆದಾಯ ₹ 100 ಕೋಟಿಯಿಂದ ₹ 500 ಕೋಟಿ ವರೆಗೆ ಇದೆ ಎಂಬ ಆಧಾರದ ಮೇಲೆ ದಂಡದ ಮೊತ್ತ ನಿಗದಿಪಡಿಸಲಾಗಿತ್ತು.

Also Read
ಹಲಸೂರು ಕೆರೆಗೆ ತ್ಯಾಜ್ಯ ಪ್ರಕರಣ: ಕೇಂದ್ರಕ್ಕೆ ಎನ್‌ಜಿಟಿ ವಿಧಿಸಿದ್ದ ₹2.94 ಕೋಟಿ ದಂಡ ಬದಿಗೆ ಸರಿಸಿದ ಹೈಕೋರ್ಟ್‌

ನೀರಿ ಪರಿಸರ ವಿಜ್ಞಾನದ ಪ್ರಮುಖ ಸಂಸ್ಥೆಯಾಗಿದ್ದು ಹೀಗಾಗಿ ಒಂದು ದಶಕದಿಂದ ಎನ್‌ಜಿಟಿ ಕಂಡುಕೊಂಡಿರುವ ಪರಿಸರ ನಿಯಮ ಉಲ್ಲಂಘನೆ ವಿಚಾರಗಳು ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

₹ 100 ಕೋಟಿ ಮತ್ತು ₹ 500 ಕೋಟಿಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದು ಸೂಚಿಸುವ ಸಂದರ್ಭದಲ್ಲಿ ಎನ್‌ಜಿಟಿಯ ತರ್ಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅದು "ಎನ್‌ಜಿಟಿ ಸಾರ್ವಜನಿಕ ವಾಗಿ ಲಭ್ಯವಿರುವ ಮಾಹಿತಿಯ ಮೇಲೆ ಅವಲಂಬಿತವಾಗುವುದಾದರೆ ಅದಕ್ಕೆ ನಿಖರವಾದ ಅಂಕಿ ಅಂಶ ಪಡೆಯುವುದು ಕಷ್ಟವಾಗುವುದಿಲ್ಲ ... ಆದ್ದರಿಂದ, ನಾವು ದೋಷಪೂರಿತ ತೀರ್ಪನ್ನು ರದ್ದುಗೊಳಿಸಿ ಬದಿಗೆ ಸರಿಸಲು ಒಲವು ತೋರುತ್ತೇವೆ." ಎಂದು ಬೆಂಜೊ ಕೆಮ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸುವ ವೇಳೆ ನ್ಯಾಯಾಲಯ ನುಡಿಯಿತು.

ಎನ್‌ಜಿಟಿ ಈಚೆಗೆ ಹಲವು ಬಾರಿ ಸುಪ್ರೀಂ ಕೋರ್ಟ್‌ ಆಕ್ರೋಶಕ್ಕೆ ತುತ್ತಾಗಿದೆ. ಕಕ್ಷಿದಾರರ ವಾದ ಆಲಿಸದೆ ಸಮಿತಿ ವರದಿ ಆಧರಿಸಿ ಎನ್‌ಜಿಟಿ ತೀರ್ಪು ನೀಡುತ್ತಿರುವುದಕ್ಕೆ  2023ರಲ್ಲಿ, ನ್ಯಾಯಮಂಡಳಿಯನ್ನು ಅದು ತರಾಟೆಗೆ ತೆಗೆದುಕೊಂಡಿತ್ತು. ಇದೇ ಮಾತನ್ನು ಅದೇ ವರ್ಷ ಜೂನ್‌ನಲ್ಲಿ ಮತ್ತು ಕಳೆದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ಪುನರುಚ್ಚರಿಸಿತ್ತು.

Also Read
ಬೆಂಗಳೂರು ಸಹಿತ 10 ನಗರಗಳಲ್ಲಿ ಗಾಳಿಯ ಗುಣಮಟ್ಟ ಕುಸಿತ, ವಾರ್ಷಿಕ 33,000 ಸಾವು: ಎನ್‌ಜಿಟಿ ಸ್ವಯಂಪ್ರೇರಿತ ವಿಚಾರಣೆ

ದೆಹಲಿಯ ಒಳನಾಡು ಕಂಟೇನರ್‌ ಡಿಪೋಗಳಿಗೆ ತೆರಳುತ್ತಿದ್ದ ಟ್ರಕ್‌ಗಳನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶದ ಹೊರಗಿನ ಒಳನಾಡು ಕಂಟೇನರ್‌ ಡಿಪೋಗಳಿಗೆ ಕಳಿಸುವಂತೆ ಎನ್‌ಜಿಟಿ ಕಳೆದ ಜನವರಿಯಲ್ಲಿ ನೀಡಿದ್ದ ಆದೇಶ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿತ್ತು.

ಅದೇ ತಿಂಗಳು ಪ್ರತ್ಯೇಕ ಪ್ರಕರಣವೊಂದರಲ್ಲಿ ಶಿಮ್ಲಾದ ಕರಡು ಅಭಿವೃದ್ಧಿ ಯೋಜನೆ 2041 ಜಾರಿಗೆ ತಡೆ ನೀಡಿದ್ದಕ್ಕಾಗಿ ಎನ್‌ಜಿಟಿಯನ್ನು ಅದು ಟೀಕಿಸಿತ್ತು.

Kannada Bar & Bench
kannada.barandbench.com