ಮದ್ರಾಸ್ ಹೈಕೋರ್ಟ್ ಜನವರಿ 3, 2022 ರಿಂದ ಸಂಪೂರ್ಣ ಭೌತಿಕ ಕಾರ್ಯಚಟುವಟಿಕೆಗೆ ಮರಳಲು ನಿರ್ಧರಿಸಿದೆ. ಅಂದಿನಿಂದ ಜಾರಿಗೆ ಬರುವಂತೆ ಎಲ್ಲಾ ಪ್ರಕರಣಗಳನ್ನು ಅದು ಭೌತಿಕವಾಗಿ ಆಲಿಸಲಿದ್ದು ವಿಡಿಯೊ ಕಾನ್ಫರೆನ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಯುತ್ತಿದ್ದ ವರ್ಚುವಲ್ ಮತ್ತು ಹೈಬ್ರಿಡ್ ವಿಚಾರಣೆಗಳು ಅಂದಿನಿಂದ ಕೊನೆಗೊಳ್ಳಲಿವೆ.
ಮದ್ರಾಸ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಡಿಸೆಂಬರ್ 27 ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ. ಚೆನ್ನೈನಲ್ಲಿರುವ ಹೈಕೋರ್ಟ್‌ನ ಪ್ರಧಾನ ಪೀಠ ಮತ್ತು ಮಧುರೈ ಪೀಠದಲ್ಲಿ ಭೌತಿಕ ವಿಚಾರಣೆ ಆರಂಭವಾಗಲಿದೆ.
ನವೆಂಬರ್ 9 ರ ಅಧಿಸೂಚನೆಯನ್ನು ಬಹುತೇಕ ಮಾರ್ಪಡಿಸಿ ಈ ಆದೇಶ ಹೊರಡಿಸಲಾಗಿದ್ದರೂ ಅಂದಿನ ಅಧಿಸೂಚನೆಯಲ್ಲಿ ಹೊರಡಿಸಲಾಗಿದ್ದ ಇತರ ಷರತ್ತುಗಳು ಹಾಗೆಯೇ ಮುಂದುವರೆಯಲಿವೆ.
ಇತ್ತೀಚೆಗೆ ಹೈಕೋರ್ಟ್ ವರ್ಚುವಲ್ ವಿಚಾರಣೆ ವೇಳೆಯೇ ಮಹಿಳೆಯೊಬ್ಬರ ಜೊತೆ ವಕೀಲರೊಬ್ಬರು ಚಕ್ಕಂದದಲ್ಲಿ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ಪೀಠ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಅಲ್ಲದೆ ವಕೀಲರು ಭೌತಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣೆಗೆ ಹಾಜರಾಗುತ್ತಿರುವುದರಿಂದ ಹಾಗೂ ಮೇಲಿನ ಘಟನೆಯನ್ನು ಗಮನದಲ್ಲಿರಿಸಿಕೊಂಡು ಹೈಬ್ರಿಡ್ ವಿಚಾರಣೆಯನ್ನು ಮರುಪರಿಶೀಲಿಸಬೇಕಿದೆ ಎಂದು ಡಿ.21ರ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿತ್ತು. ಈ ಬೆಳವಣಿಗೆಗಳಿಂದಾಗಿ ಪ್ರಕರಣವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರ ಪರಿಗಣನೆಗೆ ಸಲ್ಲಿಸಲಾಗಿತ್ತು.