ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ ಪ್ರಶಸ್ತಿ ವಿವಾದ: ಪಿಐಎಲ್ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಚುನಾವಣೆ ಸಮೀಪಿಸಿರುವ ಹೊತ್ತಿನಲ್ಲಿ ರಾಜಕೀಯ ಲೆಕ್ಕಾಚಾರದ ಮೇಲೆ ಅರ್ಜಿ ಸಲ್ಲಿಸಲಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
Central Institute of Classical Tamil, Chennai
Central Institute of Classical Tamil, ChennaiSource: veethi.com
Published on

ತಮಿಳು ವಿದ್ವಾಂಸರನ್ನು ಪುರಸ್ಕರಿಸುವ ಉದ್ದೇಶದಿಂದ ಕೇಂದ್ರೀಯ ಶಾಸ್ತ್ರೀಯ ತಮಿಳು ಸಂಸ್ಥೆ ಪ್ರಶಸ್ತಿಯನ್ನು ಮುಂದುವರೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮದ್ರಾಸ್‌ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಇದೊಂದು ಸಂಪೂರ್ಣ ರಾಜಕೀಯ ನಿರ್ಧಾರ ಎಂಬುದಾಗಿ ತಿಳಿಸಿರುವ ನ್ಯಾಯಾಲಯ “ಚುನಾವಣೆ ಸಮೀಪಿಸಿರುವ ಹೊತ್ತಿನಲ್ಲಿ ರಾಜಕೀಯ ಲೆಕ್ಕಾಚಾರದ ಮೇಲೆ ಅರ್ಜಿ ಸಲ್ಲಿಸಲಾಗಿದೆ” ಎಂದು ಅಭಿಪ್ರಾಯಪಟ್ಟಿದೆ. ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ಸ್ಥಾಪಿಸಿದ್ದ ನಿಧಿಯಿಂದ ತಮಿಳು ವಿದ್ವಾಂಸರನ್ನು ಪುರಸ್ಕರಿಸಲು ಸಂಸ್ಥೆ ವಾರ್ಷಿಕ ರೂ. 10 ಲಕ್ಷ ಮೊತ್ತದ ನಗದು ಪ್ರಶಸ್ತಿ ನೀಡುತ್ತಿತ್ತು.

Also Read
ಮುರುಗನನ್ನು 'ತಮಿಳು ದೈವʼ ಎಂದು ಘೋಷಿಸಲಾಗದು, ಇದರಿಂದ ದೇಶದ ಒಕ್ಕೂಟ ಸ್ವರೂಪಕ್ಕೆ ಧಕ್ಕೆ: ಮದ್ರಾಸ್ ಹೈಕೋರ್ಟ್

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ಸೆಂಥಿಲ್‌ ಕುಮಾರ್‌ ರಾಮಮೂರ್ತಿ ಅವರಿದ್ದ ಪೀಠ “ಇದು ನ್ಯಾಯಾಲಯಕ್ಕೆ ಅಡಿಯಿಡಬಹುದಾದ ಪ್ರಕರಣವಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದ್ದು ಪ್ರಕರಣಕ್ಕೆ ರಾಜಕೀಯ ಆಯಾಮವಿದೆ" ಎಂದಿತು. ಕರುಣಾನಿಧಿ ಅವರ ಜನ್ಮದಿನದಂದು ಪ್ರಶಸ್ತಿ ನೀಡುವಂತೆ ಸರ್ಕಾರಿ ನಿಯಂತ್ರಿತ ಕೇಂದ್ರವೊಂದಕ್ಕೆ ಮನವಿ ಸಲ್ಲಿಸಿರುವುದನ್ನು ಗಮನಿಸಿದ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿತು.

ನ್ಯಾಯಾಲಯಗಳನ್ನು ಬೆರೆಸಬಾರದಂತಹ ಪ್ರಕರಣಗಳಿರುತ್ತವೆ. ಇದು ಸಂಪೂರ್ಣ ರಾಜಕೀಯ ನಿರ್ಧಾರವಾಗಿದ್ದು ಚುನಾವಣೆ ಸಮೀಪವಿರುವ ಹೊತ್ತಿನಲ್ಲಿ ರಾಜಕೀಯ ಲೆಕ್ಕಾಚಾರದ ಮೇಲೆ ಅರ್ಜಿ ಸಲ್ಲಿಸಲಾಗಿದೆ.

ಮದ್ರಾಸ್ ಹೈಕೋರ್ಟ್

ಅಧಿಕಾರಿಗಳನ್ನು ಸರ್ಕಾರ ನಿಯಂತ್ರಿಸುತ್ತಿದ್ದರೂ ಕೂಡ ಪ್ರಶಸ್ತಿಯೊಂದನ್ನು ಮುಂದುವರೆಸಬೇಕೆ ಅಥವಾ ಬೇಡವೇ, ಅದನ್ನು ಸ್ಥಾಪಿಸಬೇಕೆ ಎಂಬುದು ಅಧಿಕಾರಿಗಳ ವೈಯಕ್ತಿಕ ಪರಿಗಣನೆಗೆ ಸಂಬಂಧಿಸಿದ ವಿಚಾರ ಎಂದು ನ್ಯಾಯಾಲಯ ಹೇಳಿದೆ.

ಪ್ರಶಸ್ತಿ ಪ್ರದಾನ ಸ್ಥಗಿತಗೊಳಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ವಕೀಲರೂ ಆಗಿರುವ ಎಸ್‌ ದೊರೆಸ್ವಾಮಿ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಉತ್ತರಿಸಿಲ್ಲ ಎಂಬುದನ್ನು ಗಮನಿಸಿದ್ದ ಹೈಕೋರ್ಟ್‌ನ ಮತ್ತೊಂದು ಪೀಠ ಡಿಸೆಂಬರ್‌ನಲ್ಲಿ ನೋಟಿಸ್‌ ಜಾರಿ ಮಾಡಿತ್ತು. ವಿಷಯವನ್ನು ವೈಯಕ್ತಿಕವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲು ಅರ್ಜಿದಾರರು ಮುಕ್ತವಾಗಿದ್ದಾರೆ ಎಂದು ಮೊದಲ ನ್ಯಾಯಪೀಠ ನಿನ್ನೆ ತಿಳಿಸಿತ್ತು.

Kannada Bar & Bench
kannada.barandbench.com