ರಾಜಕೀಯ ಪಕ್ಷಗಳ ಆಂತರಿಕ ವಿದ್ಯಮಾನಗಳಲ್ಲಿ ನ್ಯಾಯಾಲಯಗಳಿಗೆ ಮಧ್ಯಪ್ರವೇಶವಿಲ್ಲ: ಮದ್ರಾಸ್‌ ಹೈಕೋರ್ಟ್‌

ಸದಸ್ಯರ ನಾಮಕರಣ, ನಾಯಕತ್ವದ ಆಯ್ಕೆ, ಬೈಲಾಗಳಿಗೆ ತಿದ್ದುಪಡಿ ಇನ್ನು ಮುಂತಾದ ರಾಜಕೀಯ ಪಕ್ಷಗಳ ಆಂತರಿಕ ವಿದ್ಯಮಾನ ಅಥವಾ ನಿರ್ಣಯಗಳು ನ್ಯಾಯಾಲಯಗಳ ನ್ಯಾಯವ್ಯಾಪ್ತಿಯ ಹೊರಗಿವೆ.
O Panneerselvam
O PanneerselvamFacebook

ಅಖಿಲ ಭಾರತ ದ್ರಾವಿಡ ಮುನ್ನೇತ್ರಂ ಕಳಗಂ ಇಂದು (ಸೋಮವಾರ) ನಡೆಸಲಿರುವ ಸಾಮಾನ್ಯ ಸಮಿತಿ ಸಭೆಯನ್ನು ತಡೆಯುವಂತೆ ಕೋರಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್‌ ಹೈಕೋರ್ಟ್‌ ಸೋಮವಾರ ತಿರಸ್ಕರಿಸಿದೆ [ಒ ಪನ್ನೀರಸೆಲ್ವಂ ವರ್ಸಸ್‌ ಎಐಎಡಿಎಂಕೆ].

ಮನವಿಯ ವಿಚಾರಣೆಯನ್ನು ಸೋಮವಾರ ಬೆಳಗ್ಗೆ 9 ಗಂಟೆಗೆ ನಡೆಸಿದ ನ್ಯಾ. ಕೃಷ್ಣನ್‌ ರಾಮಸ್ವಾಮಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ನೀಡುವ ಮೂಲಕ ಬೆಳಗ್ಗೆ 10 ಗಂಟೆಗೆ ಆಯೋಜನೆಯಾಗಿದ್ದ ಸಭೆ ನಡೆಯಲು ಅನುವು ಮಾಡಿಕೊಟ್ಟರು. ಸಾಮಾನ್ಯ ನಿಯಮಾವಳಿಗಳ ಪ್ರಕಾರ ಒಂದೊಮ್ಮೆ ಸದಸ್ಯರ ನಡುವೆ ಯಾವುದೇ ಅಭಿಪ್ರಾಯಭೇದವಿದ್ದರೆ ಆಗ ಸಾಮಾನ್ಯ ಸಮಿತಿಯು ವಿಷಯವನ್ನು ಬಹುಮತದ ಆಧಾರದ ಮೇಲೆ ನಿರ್ಧರಿಸುತ್ತದೆ ಎನ್ನುವ ಅಂಶವನ್ನು ಪೀಠವು ಒತ್ತಿ ಹೇಳಿತು.

Also Read
ಎಐಎಡಿಎಂಕೆ ಬೈಲಾ ತಿದ್ದುಪಡಿ ತಡೆ ವಿಚಾರ: ಮದ್ರಾಸ್ ಹೈಕೋರ್ಟ್ ಆದೇಶ ತಡೆಹಿಡಿದ ಸುಪ್ರೀಂ ಕೋರ್ಟ್‌

"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತದ ಇಚ್ಛೆಯು ಉಳಿಯಬೇಕಾಗುತ್ತದೆ" ಎಂದು ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ ಹೇಳಿತು. ಪಕ್ಷದ ಆಂತರಿಕ ಆಡಳಿತದ ಬಗ್ಗೆ ಒಮ್ಮೆ ಬಹುಮತವು ತನ್ನ ಅಧಿಕಾರವನ್ನು ಚಲಾಯಿಸಿದ ನಂತರ ಆ ಬಹುಮತದ ವಿವೇಚನೆಯ ಮಧ್ಯೆ ನ್ಯಾಯಾಲಯವು ಮಧ್ಯಪ್ರವೇಶಿಸಲಾಗದು. ಇದು ನ್ಯಾಯಾಲಯಗಳ ಪಾಲಿಗೆ "ಪ್ರವೇಶವಿರದ ಸ್ಥಳ" ಎಂದು ಪೀಠವು ವಿವರಿಸಿತು. ಬೈಲಾವನ್ನು ರಚಿಸುವ, ಮಾರ್ಪಡಿಸುವ, ಹಿಂಪಡೆಯುವ ಹಕ್ಕು ಸಾಮಾನ್ಯ ಸಮಿತಿಗೆ ಇರುವುದನ್ನು ತೀರ್ಪು ಎತ್ತಿಹಿಡಿಯಿತು.

"ನಮ್ಮ ಮುಂದಿರುವ ಪ್ರಕರಣವು ಪಕ್ಷದ ಆಂತರಿಕ ವಿದ್ಯಮಾನಕ್ಕೆ ಸಂಬಂಧಿಸಿದ್ದಾಗಿದೆ. ಸದಸ್ಯರ ನಾಮಕರಣ, ನಾಯಕತ್ವದ ಆಯ್ಕೆ, ಬೈಲಾಗಳಿಗೆ ತಿದ್ದುಪಡಿ ಇನ್ನು ಮುಂತಾದ ರಾಜಕೀಯ ಪಕ್ಷಗಳ ಆಂತರಿಕ ವಿದ್ಯಮಾನ ಅಥವಾ ನಿರ್ಣಯಗಳು ನ್ಯಾಯಾಲಯಗಳ ನ್ಯಾಯವ್ಯಾಪ್ತಿಯ ಹೊರಗಿವೆ ಎನ್ನುವುದು ಕಾನೂನಿನ ಸಾಮಾನ್ಯ ತಿಳಿವಳಿಕೆ" ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿತು.

ಆ ಮೂಲಕ ಪಕ್ಷದ ಬೈಲಾ ತಿದ್ದುಪಡಿಗೆ ಮುಂದಾಗಿದ್ದ ಎಐಎಡಿಎಂಕೆ ಸಾಮಾನ್ಯ ಸಮಿತಿಯ ನಿರ್ಧಾರವನ್ನು ಪ್ರಶ್ನಿಸಿ ಪನ್ನೀರಸೆಲ್ವಂ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.

Related Stories

No stories found.
Kannada Bar & Bench
kannada.barandbench.com