ಎಐಎಡಿಎಂಕೆ ಬೈಲಾ ತಿದ್ದುಪಡಿ ತಡೆ ವಿಚಾರ: ಮದ್ರಾಸ್ ಹೈಕೋರ್ಟ್ ಆದೇಶ ತಡೆಹಿಡಿದ ಸುಪ್ರೀಂ ಕೋರ್ಟ್‌

ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
K palaniswamy and supreme court
K palaniswamy and supreme court Facebook
Published on

ಎಐಎಡಿಎಂಕೆ ಸಾಮಾನ್ಯ ಸಮಿತಿಯು ತನ್ನ ಬೈಲಾ ತಿದ್ದಪಡಿ ಮಾಡುವುದಕ್ಕೆ ತಡೆ ನೀಡಿದ್ದ ಮದ್ರಾಸ್‌ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಬುಧವಾರ ತಡೆ ಹಿಡಿದಿದೆ [ತಿರು ಕೆ ಪಳನಿಸ್ವಾಮಿ ವಿರುದ್ಧ ಎಂ ಷಣ್ಮುಗುಂ ಮತ್ತಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಕೃಷ್ಣ ಮುರಾರಿ ಅವರಿದ್ದ ರಜಾಕಾಲೀನ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ಪ್ರತಿ-ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.

ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Also Read
ಕೇಂದ್ರಪಟ್ಟಿಯಿಂದ ಸಮವರ್ತಿ ಪಟ್ಟಿಗೆ ಜನಗಣತಿ ವಿಷಯ ಬದಲಿಸಿ: ಪ್ರಧಾನಿ ಮೋದಿಗೆ ಡಿಎಂಕೆ ಸಂಸದ ವಿಲ್ಸನ್‌ ಪತ್ರ

ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಏಕಸದಸ್ಯ ಪೀಠ ನಿರಾಕರಿಸಿದ ಬಳಿಕ ಸಾಮಾನ್ಯ ಸಮಿತಿ ಸಭೆ ನಡೆಯುವ ದಿನದಂದು (ಜೂನ್ 23) ಹೈಕೋರ್ಟ್‌ ಆದೇಶ ಹೊರಬಿದ್ದಿತ್ತು.

ಎಐಎಡಿಎಂಕೆಯಲ್ಲಿ ನಾಯಕತ್ವದ ಬಿಕ್ಕಟ್ಟಿನ ನಡುವೆ, ಕಳೆದ ವರ್ಷ ನಡೆದ ರಾಜ್ಯ ಚುನಾವಣೆಯಲ್ಲಿ ಪಕ್ಷ ಸೋಲುಂಡ ನಂತರ ಪಕ್ಷದ ಪದಾಧಿಕಾರಿಗಳ ಒಂದು ಗುಂಪು ಏಕ ನಾಯಕತ್ವ ಹೊಂದುವ ಸಲುವಾಗಿ ಪಕ್ಷದ ನಿಯಮಾವಳಿಗಳಿಗೆ ತಿದ್ದುಪಡಿ ಮಾಡಲು ಹೊರಟಿತ್ತು.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನಾನಂತರ ಎಐಎಡಿಎಂಕೆಯು ದ್ವಿ ನಾಯಕತ್ವ ರಚನೆಯನ್ನು ಹೊಂದಿತ್ತು. ಪಳನಿಸ್ವಾಮಿ ಅವರು ಪಕ್ಷದ ಜಂಟಿ ಸಂಚಾಲಕರಾಗಿದ್ದರೆ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಅವರು ಸಂಚಾಲಕರಾಗಿದ್ದರು. ಆದರೆ, ಈ ಹುದ್ದೆಗಳಿಗೆ ತಿಲಾಂಜಲಿ ನೀಡಿ ಈ ಹಿಂದಿನ ಪ್ರಧಾನ ಕಾರ್ಯದರ್ಶಿ ಹುದ್ದೆಯ ರಚನೆಗೆ ಮರಳಲು ಇತ್ತೀಚಿನ ಸಾಮಾನ್ಯ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿತ್ತು.

ಆದರೆ, ಬೈಲಾ ತಿದ್ದುಪಡಿಯನ್ನು ನಿರಾಕರಿಸಿದ್ದ ಹೈಕೋರ್ಟ್‌ನ ಆದೇಶವು ಆ ಮೂಲಕ ಪನ್ನೀರಸೆಲ್ವಂ ಅವರಿಗೆ ವಿಟೋ ಅಧಿಕಾರವನ್ನು ಮರಳಿ ನೀಡಿತ್ತು. ಇದು ಪಕ್ಷದೊಳಗೆ ಬೇಗುದಿಗೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಪಳನಿಸ್ವಾಮಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ರಾಜಕೀಯ ಪಕ್ಷಗಳ ಆಂತರಿಕ ವಿಚಾರಗಳಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸುವಂತಿಲ್ಲ ಎನ್ನುವುದು ಇದಾಗಲೇ ಪೂರ್ವ ನಿರ್ಧರಿತವಾಗಿರುವಂಥದ್ದು. ಪಕ್ಷದ ಸದಸ್ಯರನ್ನು ನಿರ್ದಿಷ್ಟ ರೀತಿಯಲ್ಲಿ ವರ್ತಿಸುವಂತೆ ನ್ಯಾಯಾಲಯ ಹೇಳಲಾಗದು. ಹಾಗಾಗಿ, ತಪ್ಪು ಕ್ರಮದಿಂದ ಕೂಡಿರುವ ಹೈಕೋರ್ಟ್‌ನ ಆದೇಶವನ್ನು ರದ್ದುಪಡಿಸಬೇಕೆಂದು ಮನವಿಯಲ್ಲಿ ಕೋರಲಾಗಿತ್ತು.

Kannada Bar & Bench
kannada.barandbench.com