

ಅನುಕೂಲಕರ ತೀರ್ಪು ಪ್ರಕಟಿಸುವುದಕ್ಕಾಗಿ ನ್ಯಾಯಮೂರ್ತಿಗಳಿಗೆ ಲಂಚ ನೀಡಬೇಕಿದೆ ಎಂದು ಕಕ್ಷಿದಾರರಿಗೆ ತಿಳಿಸಿ ಹಿರಿಯ ವಕೀಲರೊಬ್ಬರು ₹50 ಲಕ್ಷ ಪಡೆದಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯಿಂದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಹಿಂದೆ ಸರಿದಿದ್ದಾರೆ.
ನ್ಯಾಯಕ್ಕಾಗಿ ಅಖಿಲ ಭಾರತ ವಕೀಲರುಗಳ ಸಂಘಟನೆ (ಎಐಎಲ್‌ಎಜೆ) ನೀಡಿದ್ದ ಮನವಿ ಉಲ್ಲೇಖಿಸಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಹೈಕೋರ್ಟ್ ರಿಜಿಸ್ಟ್ರಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ. ನಿರ್ಮಲ್ ಕುಮಾರ್ ಅವರು ವಿಚಾರಣೆಯಿಂದ ಹಿಂದೆ ಸರಿದರು. ಸಂಘಟನೆ ಸಲ್ಲಿಸಿದ್ದ ಮನವಿಯಲ್ಲಿ ʼನ್ಯಾಯಮೂರ್ತಿಯವರಿಗೆ ನೀಡಲೆಂದು ಕಕ್ಷಿದಾರರಿಂದ ಹಿರಿಯ ವಕೀಲ ₹50,00,000 ಸಂಗ್ರಹಿಸಿದ್ದರು. ಆದರೆ ಹಣ ಪಡೆದಿದ್ದರೂ ಆದೇಶ ನೀಡಿರಲಿಲ್ಲʼ ಎಂದು ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಿಚಕ್ಷಣಾ ಕೋಶಕ್ಕೆ ಒಪ್ಪಿಸುವುದು ಎಂದ ನ್ಯಾ. ನಿರ್ಮಲ್ ಕುಮಾರ್ ತಾನು ಪ್ರಕರಣದ ವಿಚಾರಣೆ ಮುಂದುವರೆಸುವುದಿಲ್ಲ ಎಂದಿತು. ಸೂಕ್ತ ಪೀಠಕ್ಕೆ ಪ್ರಕರಣ ನಿಯೋಜಿಸುವುದಕ್ಕಾಗಿ ಮುಖ್ಯ ನ್ಯಾಯಮೂರ್ತಿಯವರ ಪೀಠಕ್ಕೆ ಪ್ರಕರಣ ವಹಿಸಬೇಕು ಮತ್ತು ತನಿಖೆ ನಡೆಸಲು ನಿರ್ದೇಶಿಸಬೇಕು ಎಂದು ಸೂಚಿಸಿತು.
ಇನ್ನು ಆರೋಪ ನಿರಾಕರಿಸಿರುವ ಹಿರಿಯ ವಕೀಲರಾದ ಎನ್ ಮುರಳಿ ಕುಮಾರನ್ ಯಾವುದೇ ಬಗೆಯ ತನಿಖೆಗೆ ಸಹಕರಿಸಲು ಸಿದ್ಧ ಇರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ವಾದ ಮಂಡಿಸಿದ ಸರ್ಕಾರಿ ವಿಶೇಷ ಅಭಿಯೋಜಕ ಕೆ ಶ್ರೀನಿವಾಸನ್ ಅವರು ಇಂತಹ ಮನವಿಗಳು ನ್ಯಾಯಾಲಯದ ಗೌರವಕ್ಕೆ ಧಕ್ಕೆ ತರುತ್ತವೆ ಎಂದರು. ಸುಳ್ಳು ದೂರು ನೀಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
[ಆದೇಶದ ಪ್ರತಿ]