
ನಾಯಕತ್ವದ ಕುರಿತಾದ ಕೆಲವು ವಿವಾದಗಳು ಇತ್ಯರ್ಥವಾಗುವವರೆಗೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ಎರಡು ಎಲೆಗಳ ಚಿಹ್ನೆ ಸ್ಥಗಿತಗೊಳಿಸುವಂತೆ ಕೋರಿ ವೈಯಕ್ತಿಕ ಪತ್ರಗಳು ಬಂದಿದ್ದ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಳ್ಳಲು ಮುಂದಾಗಿದ್ದ ಕ್ರಮಗಳಿಗೆ ಸಂಬಂಧಿಸಿದಂತೆ ನೀಡಲಾದ ತಡೆಯಾಜ್ಞೆಯನ್ನು ಮದ್ರಾಸ್ ಹೈಕೋರ್ಟ್ ತೆರವುಗೊಳಿಸಿದೆ.
ಎಐಎಡಿಎಂಕೆಯ ಕೆಲವು ಆಂತರಿಕ ವಿವಾದಗಳ ಕುರಿತು ಈಗಾಗಲೇ ನ್ಯಾಯಾಲಯ ನೀಡಿದ ಆದೇಶಗಳನ್ನು ಉಲ್ಲಂಘಿಸುವ ಉದ್ದೇಶವಿಲ್ಲ ಎಂದು ಇಸಿಐ ನೀಡಿದ ಭರವಸೆಯನ್ನು ನ್ಯಾಯಮೂರ್ತಿಗಳಾದ ಸುಬ್ರಮಣಿಯನ್ ಮತ್ತು ಜಿ ಅರುಳ್ ಮುರುಗನ್ ಅವರಿದ್ದ ಪೀಠ ಫೆಬ್ರವರಿ 12 (ಬುಧವಾರ) ಪರಿಗಣಿಸಿತು.
ಜುಲೈ 2022ರಂದು ಕೈಗೊಂಡಿದ್ದ ಸಭೆಯ ಫಲಿತಾಂಶದಲ್ಲಿ ಇ ಪಳನಿಸ್ವಾಮಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಅವರ ಪ್ರತಿಸ್ಪರ್ಧಿ ಒ ಪನ್ನೀರ್‌ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
1968ರ ಚುನಾವಣಾ ಚಿಹ್ನೆಗಳು (ಕಾದಿರಿಸುವಿಕೆ ಮತ್ತು ಹಂಚಿಕೆ) ಆದೇಶದ ಪ್ಯಾರಾ 15ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬಹುದೇ ಎಂದು ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇನ್ನೂ ಇದೆ ಎಂಬ ಚುನಾವಣಾ ಆಯೋಗದ ವಕೀಲರ ವಾದಕ್ಕೆ ನ್ಯಾಯಾಲಯ ಸಮ್ಮತಿಸಿತು.
ಪಕ್ಷದಲ್ಲಿ ಒಡಕು ಉಂಟಾದರೆ, ನಿಜವಾದ ಪಕ್ಷ ಎಂದು ಹೇಳಿಕೊಳ್ಳುವ ಪ್ರತಿಸ್ಪರ್ಧಿ ಬಣಗಳಿದ್ದರೆ, ಇಸಿಐ ಈ ಸೆಕ್ಷನ್ ಪ್ರಕಾರ ಅಧಿಕಾರ ಚಲಾಯಿಸಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿತು.
ಇದೇ ವೇಳೆ ಜುಲೈ 2022ರ ಜನರಲ್ ಕೌನ್ಸಿಲ್ ಸಭೆಯ ಫಲಿತಾಂಶ ಸೇರಿದಂತೆ ಎಐಎಡಿಎಂಕೆ ಆಂತರಿಕ ವಿವಾದಗಳ ಕುರಿತು ಬಾಕಿ ಇರುವ ಸಿವಿಲ್ ನ್ಯಾಯಾಲಯದ ವಿಚಾರಣೆಗಳಲ್ಲಿ ಅಥವಾ ದೆಹಲಿ ಮತ್ತು ಮದ್ರಾಸ್ ಹೈಕೋರ್ಟ್‌ಗಳು ಸೇರಿದಂತೆ ವಿವಿಧ ನ್ಯಾಯಾಲಯಗಳು ಈಗಾಗಲೇ ನೀಡಿರುವ ತೀರ್ಪಿನ ವಿರುದ್ಧ ಇಸಿಐ ನಿರ್ಣಯ ಕೈಗೊಳ್ಳುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಡಿಸೆಂಬರ್ 2016ರಲ್ಲಿ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಮರಣದ ನಂತರ ಎಐಎಡಿಎಂಕೆ ನಾಯಕತ್ವ ಬಗ್ಗೆ ಗೊಂದಲ ಮೂಡಿತ್ತು. ಪರಿಣಾಮ ಎಐಎಡಿಎಂಕೆಯ ಎರಡೆಲೆ ಚಿಹ್ನೆಯನ್ನು ಮಾರ್ಚ್ 2017ರಲ್ಲಿ ಸ್ಥಗಿತಗೊಳಿಸಿದ್ದ ಇಸಿಐ ನಂತರ ಚಿಹ್ನೆ ಬಳಸುವ ಅಧಿಕಾರವನ್ನು ಪಳನಿಸ್ವಾಮಿ ಅವರಿಗೆ ನೀಡಿತ್ತು. ಇದನ್ನು ಪಳನಿಸ್ವಾಮಿ ಅವರ ಎದುರಾಳಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.