ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ: ಎಸ್ಐಟಿ ತನಿಖೆ, ಸಂತ್ರಸ್ತೆಗೆ ₹25 ಲಕ್ಷ ಪರಿಹಾರ ನೀಡಲು ಮದ್ರಾಸ್ ಹೈಕೋರ್ಟ್ ಆದೇಶ

ಎಫ್ಐಆರ್‌ನಲ್ಲಿ ಸಂತ್ರಸ್ತೆಯ ವಿವರಗಳನ್ನು ಬಹಿರಂಗಪಡಿಸುವ ಮೂಲಕ ಪೊಲೀಸರು ಎಸಗಿದ ಗಂಭೀರ ಲೋಪಕ್ಕಾಗಿ ಸಂತ್ರಸ್ತೆಗೆ ₹25 ಲಕ್ಷ ಮಧ್ಯಂತರ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪೀಠ ಆದೇಶಿಸಿದೆ.
Madras High Court
Madras High Court
Published on

ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಆವರಣದಲ್ಲಿ 19 ವರ್ಷದ ವಿದ್ಯಾರ್ಥಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಶನಿವಾರ ನಿರ್ದೇಶನ ನೀಡಿದೆ.

ಅಲ್ಲದೆ ಪೊಲೀಸ್ ಜಾಲತಾಣದಲ್ಲಿ ಪ್ರಕಟಿಸಲಾದ ಎಫ್‌ಐಆರ್‌ನಲ್ಲಿ ಸಂತ್ರಸ್ತೆಯ ವಿವರಗಳನ್ನು ಬಹಿರಂಗಪಡಿಸುವ ಮೂಲಕ ಪೊಲೀಸರು ಎಸಗಿದ ಗಂಭೀರ ಲೋಪಕ್ಕಾಗಿ ಸಂತ್ರಸ್ತೆಗೆ ₹25 ಲಕ್ಷ ಮಧ್ಯಂತರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಪೀಠ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಪೊಲೀಸರಿಗೆ ತಾಕೀತು ಮಾಡಿದೆ.

Also Read
ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ವಯಂಪ್ರೇರಿತವಾಗಿ ಪ್ರಕರಣ ಪರಿಗಣಿಸಿದ ಮದ್ರಾಸ್‌ ಹೈಕೋರ್ಟ್‌

ತನಿಖೆಯಲ್ಲಿ ವಿವಿಧ ಲೋಪಗಳು ಉಂಟಾಗಿರುವುದನ್ನು ಪ್ರಸ್ತಾಪಿಸಿದ  ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣ್ಯಂ ಮತ್ತು ವಿ ಲಕ್ಷ್ಮೀನಾರಾಯಣ್‌ ಅವರಿದ್ದ ಪೀಠ ಮೂವರು ಐಪಿಎಸ್‌ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸುವಂತೆ ಆದೇಶಿಸಿದೆ.

ಎಫ್‌ಐಆರ್‌ನಲ್ಲಿ 19 ವರ್ಷದ ಸಂತ್ರಸ್ತೆಯನ್ನೇ ದೂಷಿಸಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. " ನೀವು ಎಫ್‌ಐಆರ್ ಓದಿದ್ದೀರಾ? ಸಂತ್ರಸ್ತೆಯನ್ನು ದೂಷಿಸುವುದಕ್ಕೆ ಇದೊಂದು ಉದಾಹರಣೆ. ಎಫ್‌ಐಆರ್‌ನ ಶೋಚನೀಯ ಭಾಷೆ ಸಂತ್ರಸ್ತರನ್ನು ದೂಷಿಸಲು ದಾರಿ ಮಾಡಿಕೊಡುತ್ತದೆ. ಇದು ಆಘಾತಕಾರಿ " ಎಂದು ಪೀಠ ಇಂದಿನ ವಿಚಾರಣೆಯ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ (ಎಜಿ) ಪಿ ಎಸ್ ರಾಮನ್ ಅವರನ್ನು ಉದ್ದೇಶಿಸಿ ಹೇಳಿತು.

ಎಫ್‌ಐಆರ್‌ನಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯ ವಿವರಗಳನ್ನು ಸೋರಿಕೆ ಮಾಡಿ ಆಕೆಗೆ ಅಪಮಾನ ಉಂಟು ಮಾಡಿರುವುದು ದುರದೃಷ್ಟಕರ ಎಂದಿರುವ ನ್ಯಾಯಾಲಯ ಇದು ಆಕೆಯನ್ನು ಹೆಚ್ಚಿನ ಮಾನಸಿಕ ಸಂಕಟಕ್ಕೆ ದೂಡಿತು ಎಂದಿದೆ.

ಎಫ್‌ಐಆರ್ ಬರೆಯುವ ರೀತಿಯನ್ನು ಗಂಭೀರವಾಗಿ ಪರಿಗಣಿಸಿದ ಪೀಠ ಮಹಿಳೆಯರನ್ನು ರಕ್ಷಿಸುವುದು ರಾಜ್ಯ ಮತ್ತು ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದಿತು.

 ಆಕೆಯನ್ನು ದೂಷಿಸುವುದು ಇಲ್ಲವೇ ನಾಚಿಕೆಪಡುವಂತೆ ಮಾಡಿರುವುದು ಸ್ತ್ರೀ ದ್ವೇಷ ಎಂದಿರುವ ನ್ಯಾಯಾಲಯ ಸಂವಿಧಾನಕ್ಕೆ ಪುರುಷ ಇಲ್ಲವೇ ಮಹಿಳೆ ಎಂಬ ವ್ಯತ್ಯಾಸ ಇಲ್ಲ. ಸಮಾಜ ಮಹಿಳೆಯರನ್ನು ಕೀಳಾಗಿ ಕಾಣುವುದಕ್ಕೆ ನಾಚಿಕೆಪಡಬೇಕು ಎಂದಿತು.

ಮಹಿಳೆ ಏಕೆ ಸ್ವತಂತ್ರವಾಗಿ ನಡೆಯಲು ಸಾಧ್ಯವಿಲ್ಲ, ಅವಳು ಬಯಸಿದ ರೀತಿಯಲ್ಲಿ ಉಡುಗೆ ತೊಡಲು ಅಥವಾ ಪುರುಷನೊಂದಿಗೆ ಮಾತನಾಡಲು ಏಕೆ ಸಾಧ್ಯವಿಲ್ಲ ಎಂದು ಪೀಠ ಪ್ರಶ್ನಿಸಿತು.

ಎಫ್‌ಐಆರ್‌ನ ವಿಷಯಗಳು ಸಂತ್ರಸ್ತೆಯ ಘನತೆಯ ಹಕ್ಕನ್ನು ಮತ್ತು ದೈಹಿಕ ಸ್ವಾಯತ್ತತೆಯ ಹಕ್ಕನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯ ಹೇಳಿದೆ,

ಪ್ರಸ್ತುತ ಪ್ರಕರಣದಲ್ಲಿ, ಸಂವಿಧಾನದ 21ನೇ ವಿಧಿಯಡಿ ಸಂತ್ರಸ್ತೆಯ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದ ಪೀಠ ಪರಿಹಾರ ನೀಡುವಂತೆ ಆದೇಶಿಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದ್ದ ನ್ಯಾಯಾಲಯ ವಿದ್ಯಾರ್ಥಿನಿಯ ಗುರುತಿನ ವಿವರಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಚೆನ್ನೈ ಪೊಲೀಸರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿತ್ತು.

Also Read
ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ವಯಂಪ್ರೇರಿತವಾಗಿ ಪ್ರಕರಣ ಪರಿಗಣಿಸಿದ ಮದ್ರಾಸ್‌ ಹೈಕೋರ್ಟ್‌

ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರ ಮೇಲೆ ವಿವಿಯ ಆವರಣದಲ್ಲಿಯೇ ನಡೆದಿದ್ದ ಲೈಂಗಿಕ ದೌರ್ಜನ್ಯದ ಘಟನೆಗೆ ಸಂಬಂಧಿಸಿದಂತೆ ಬೀದಿಬದಿಯ ಬಿರಿಯಾನಿ ವ್ಯಾಪಾರಿ ಜ್ಞಾನಶೇಖರನ್ ಎಂಬಾತನನ್ನು ಚೆನ್ನೈ ಪೊಲೀಸರು ಡಿಸೆಂಬರ್ 25ರಂದು  ಬಂಧಿಸಿದ್ದರು. ದೂರುದಾರೆ ತಿಳಿಸಿರುವಂತೆ ಅನುಚಿತ ಘಟನೆಯು ಡಿಸೆಂಬರ್ 23 ರಂದು ನಡೆದಿತ್ತು.

ಘಟನೆಯ ನಂತರ, ಸಂತ್ರಸ್ತೆ ದೂರು ದಾಖಲಿಸಿದ್ದರು. ಅಲ್ಲದೆ, ಲೈಂಗಿಕ ಕಿರುಕುಳ ತಡೆಗಟ್ಟಲು ರಚಿಸಿರುವ ವಿಶ್ವವಿದ್ಯಾಲಯದ ಆಂತರಿಕ ದೂರು ಸಮಿತಿಗೂ ದೂರು ಸಲ್ಲಿಸಿದ್ದರು.

Kannada Bar & Bench
kannada.barandbench.com