ಅಕ್ರಮ ಕಟ್ಟಡ ಕಾಮಗಾರಿ ತಡೆಯಲು ಅಧಿಕಾರಿಗಳು ವಿಫಲ: ಮದ್ರಾಸ್ ಹೈಕೋರ್ಟ್ ತರಾಟೆ

ಇಂತಹ ನಿಷ್ಕ್ರಿಯತೆಯಿಂದಾಗಿ, ದುರಾಸೆಯ ವ್ಯಕ್ತಿಗಳು ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಲು ಧೈರ್ಯ ಮಾಡಿ, ಫಲವತ್ತಾದ ಭೂಮಿಯನ್ನು ಕಾಂಕ್ರೀಟ್ ಕಾಡನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ನ್ಯಾಯಾಲಯ ವಿಷಾದ ವ್ಯಕ್ತಪಡಿಸಿತು.
Madras High Court
Madras High Court
Published on

ಅಕ್ರಮ ಕಟ್ಟಡ ಕಾಮಗಾರಿಗಳನ್ನು ತಕ್ಷಣ ತಡೆಯಲು ಅಧಿಕಾರಿಗಳು ವಿಫಲರಾಗಿರುವುದರಿಂದ, ದುರಾಸೆಯ ಮಂದಿ ಅನುಮತಿಯಿಲ್ಲದೆ ಫಲವತ್ತಾದ ಭೂಮಿಯನ್ನು ಕಾಂಕ್ರೀಟ್ ಕಾಡುಗಳಾಗಿ ಪರಿವರ್ತಿಸುವ ಧೈರ್ಯ ಮಾಡುತ್ತಿದ್ದಾರೆ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದೆ.

ಈ ರೀತಿಯ ಅನಧಿಕೃತ ಕಾಮಗಾರಿಗಳು ಸಾರ್ವಜನಿಕರಿಗೆ ಮತ್ತು ಪರಿಸರಕ್ಕೆ ಅಪಾಯವನ್ನುಂಟುಮಾಡುತ್ತವೆ. ಅಧಿಕಾರಿಗಳ ನಿಷ್ಕ್ರಿಯತೆಯನ್ನು ನ್ಯಾಯಾಲಯಗಳು ಯಾವ ಸಂದರ್ಭದಲ್ಲೂ ಸಹಿಸುವುದಿಲ್ಲ. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಶಿಕ್ಷೆಯಿಂದ ಮುಕ್ತವಾಗಿ ಉಳಿಯವು ಸಂಸ್ಕೃತಿಯನ್ನು ಬೆಳೆಸಿ ಕಾನೂನಾತ್ಮಕ ಆಡಳಿತವನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಎಸ್ ಎಂ ಸುಬ್ರಮಣಿಯಂ ಮತ್ತು ಎ ಡಿ ಮಾರಿಯಾ ಕ್ಲೀಟ್ ಅವರಿದ್ದ ಪೀಠ ಎಚ್ಚರಿಕೆ ನೀಡಿತು.   

Also Read
ಅಕ್ರಮ ಗಣಿಗಾರಿಕೆ: ಶಾಸಕ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಜಾಮೀನು

ಅಕ್ರಮ ಕಾಮಗಾರಿಗಳ ಬಗ್ಗೆ ನಿಷ್ಕ್ರಿಯತೆ ತೋರದಂತೆ ಮದ್ರಾಸ್‌ ಹೈಕೋರ್ಟ್‌ ಹಲವು ತೀರ್ಪುಗಳಲ್ಲಿ ನಿರ್ದೇಶನ ನೀಡಿದ್ದರೂ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದು ನಿಷ್ಕ್ರಿಯತೆ ಮುಂದುವರೆದಿದೆ. ಅವರು ಕಟ್ಟಡ ಮಾಲೀಕರಿಗೆ ವಿವೇಚನೆಯಿಲ್ಲದೆ ಅನಧಿಕೃತ ಕಟ್ಟಡ ನಿರ್ಮಿಸಲು ಅವಕಾಶ ನೀಡುತ್ತಿದ್ದಾರೆ, ಇದರಿಂದಾಗಿ ನೆರೆಹೊರೆಯವರು, ರಸ್ತೆ ಬಳಕೆದಾರರು ಮತ್ತು ಸಾಮಾನ್ಯವಾಗಿ ನಾಗರಿಕರ ಹಿತಾಸಕ್ತಿಗೆ ಹಾನಿಯಾಗುತ್ತಿದೆ" ಎಂದು ಅದು ಹೇಳಿದೆ.

Also Read
ಅರಣ್ಯದಲ್ಲಿ ಅಕ್ರಮ ರಸ್ತೆ: ಹರಿಯಾಣ ಮುಖ್ಯ ಕಾರ್ಯದರ್ಶಿಗೆ ಸುಪ್ರೀಂ ತರಾಟೆ

ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸಿ, ಅನಧಿಕೃತ ಕಾಮಗಾರಿಗಳನ್ನು ತಡೆಯಲು ಮತ್ತು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರ ಕಳೆದ ವರ್ಷ ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿತ್ತು. ಆದರೂ ಸಮಿತಿ ಪ್ರಗತಿ ಸಾಧಿಸಿದೆಯೇ ಎಂಬುದನ್ನು ವಿವರಿಸುವ ಪುರಾವೆಗಳು ದೊರೆಯುತ್ತಿಲ್ಲ ಎಂದು ನ್ಯಾಯಾಲಯ ಕಿಡಿಕಾರಿತು.

ಆದ್ದರಿಂದ, ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಪ್ರಕರಣದಲ್ಲಿ ಔಪಚಾರಿಕ ಕಕ್ಷಿದಾರರನ್ನಾಗಿ ಮಾಡಿದ ಪೀಠ, ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿತು.

Kannada Bar & Bench
kannada.barandbench.com