
ಗಣಿ ಮಾಫಿಯಾದೊಂದಿಗೆ ಶಾಮೀಲಾಗಿ ಕಾಡಿನೊಳಗೆ ರಸ್ತೆ ನಿರ್ಮಿಸಲೆಂದು ಮರ ಕಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಹರಿಯಾಣ ಮುಖ್ಯ ಕಾರ್ಯದರ್ಶಿ ಅವರನ್ನು ಸುಪ್ರೀಂ ಕೋರ್ಟ್ ಈಚೆಗೆ ತರಾಟೆಗೆ ತೆಗೆದುಕೊಂಡಿದೆ [ಟಿಎನ್ ಗೋದವರ್ಮನ್ ತಿರುಮುಲ್ಪಾಡ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕಾನೂನು ಬಾಹಿರ ಕೃತ್ಯಗಳ ತನಿಖೆ ನಡೆಸದ ರಾಜ್ಯ ಸರ್ಕಾರದ ಅತ್ಯುನ್ನತ ಅಧಿಕಾರಿ ಬೇರೆ ಇಲಾಖೆಗಳ ಅಧಿಕಾರಿಗಳ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಹಾಗೂ ನ್ಯಾಯಮೂರ್ತಿ ಎ ಜಿ ಮಸೀಹ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ತಾಕೀತು ಮಾಡಿದ ನ್ಯಾಯಾಲಯ ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿ ನಡೆದುಕೊಳ್ಳದಿದ್ದರೆ ಮುಖ್ಯ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತು.
ಹರಿಯಾಣದ ಗ್ರಾಮವೊಂದರ ಸರಪಂಚ, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಒಟ್ಟಾಗಿ ಶಾಮೀಲಾಗಿ ಹರಿಯಾಣದಿಂದ ರಾಜಸ್ಥಾನದವರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅಕ್ರಮ ಗಣಿಗಾರಿಕೆ ಮಾಫಿಯಾಗಳ ಅನುಕೂಲಕ್ಕಾಗಿ ನಿರ್ಮಿಸಿದ್ದಾರೆ ಎಂದು ಅರ್ಜಿ ಆರೋಪಿಸಿತ್ತು.
ಮಾರ್ಚ್ 2025ರಲ್ಲಿ, ಸುಪ್ರೀಂ ಕೋರ್ಟ್ ಪ್ರಕರಣದ ತನಿಖೆ ನಡೆಸಲು ಕೇಂದ್ರೀಯ ಅಧಿಕಾರ ಸಮಿತಿಗೆ (ಸಿಇಸಿ) ಸೂಚಿಸಿತ್ತು. ನೋಟಿಸ್ ನೀಡಿದ್ದರೂ ಹಾಜರಾಗದ ಬಗ್ಗೆ ಸಿಇಸಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ಇತ್ತ ಮುಖ್ಯ ಕಾರ್ಯದರ್ಶಿಯವರು ಸಲ್ಲಿಸಿದ್ದ ಅಫಿಡವಿಟ್ ಪರಿಶೀಲಿಸಿದ ನ್ಯಾಯಾಲಯ ಅವರು ತಮ್ಮ ಮೇಲಿನ ಆಪಾದನೆಗಳನ್ನು ಅವರು ಕಿರಿಯ ಅಧಿಕಾರಿಗಳಿಗೆ ವರ್ಗಾಯಿಸುತ್ತಿರುವುದನ್ನು ಗಮನಿಸಿ ಕೆಂಡಾಮಂಡಲವಾಯಿತು.
[ಆದೇಶದ ಪ್ರತಿ]