ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದವರಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿತ್ತು ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಕ್ಷಮೆಯಾಚನೆಯನ್ನು ತಮಿಳುನಾಡು ಸರ್ಕಾರ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಸಚಿವೆ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಮದ್ರಾಸ್ ಹೈಕೋರ್ಟ್ ಗುರುವಾರ ರದ್ದುಗೊಳಿಸಿತು.
ತಮಿಳುನಾಡು ಜನತೆಯಲ್ಲಿ ಶೋಭಾ ಕ್ಷಮೆ ಯಾಚಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ಮುಂದುವರೆಸಲು ಬಯಸುವುದಿಲ್ಲ ಎಂದು ತಮಿಳುನಾಡು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಕ್ಷಮೆ ಯಾಚನೆ ಅಂಗೀಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ಅವರು ನ್ಯಾಯಮೂರ್ತಿ ಜಿ ಜಯಚಂದ್ರನ್ ನೇತೃತ್ವದ ಪೀಠಕ್ಕೆ ವಿವರಿಸಿದರು.
ವಾದವನ್ನು ಮನ್ನಿಸಿದ ನ್ಯಾಯಮೂರ್ತಿಗಳು ಶೋಭಾ ವಿರುದ್ಧ ಮಧುರೈ ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್ ರದ್ದುಗೊಳಿಸುವಂತೆ ಸೂಚಿಸಿದರು.
ಮಧುರೈ ನಗರ ಸೈಬರ್ ಕ್ರೈಂ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಶೋಭಾ ಅವರು ಅರ್ಜಿ ಸಲ್ಲಿಸಿದ್ದರು.
ಶೋಭಾ ಕರಂದ್ಲಾಜೆ ಅವರು ತಮ್ಮ ಹೇಳಿಕೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕ್ಷಮೆಯಾಚಿಸಿದರೆ ಅವರ ವಿರುದ್ಧದ ಪ್ರಕರಣ ಕೈಬಿಡಲಾಗುವುದು ಎಂದು ತಮಿಳುನಾಡು ಸರ್ಕಾರ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು.
ಸೆಪ್ಟೆಂಬರ್ 3 ರಂದು, ಕರಂದ್ಲಾಜೆ ಪರ ವಾದ ಮಂಡಿಸಿದ, ಹಿರಿಯ ವಕೀಲ ಅರುಣಾ ಶ್ಯಾಮ್ ಅವರು ಕ್ಷಮೆಯಾಚಿಸಲು ಬಿಜೆಪಿ ನಾಯಕಿ ಪತ್ರಿಕಾಗೋಷ್ಠಿ ನಡೆಸಲು ಸಿದ್ಧರಿಲ್ಲದಿದ್ದರೂ, ಅವರು ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಅಫಿಡವಿಟ್‌ನಲ್ಲಿ ರಾಜ್ಯದ ಎಲ್ಲಾ ಜನತೆಯಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ತಾವು ತಮಿಳುನಾಡು ಜನತೆಯಲ್ಲಿ ಭಾರಿ ಗೌರವ ಉಳ್ಳವರು ಹಾಗೂ ಯಾರ ಭಾವನೆಗಳನ್ನು ನೋಯಿಸುವ ಉದ್ದೇಶ ತಮಗಿಲ್ಲ ಎಂದು ಶೋಭಾ ಅಫಿಡವಿಟ್‌ನಲ್ಲಿ ಪ್ರಸ್ತಾಪಿಸಿದ್ದರು.