ನಾಲ್ಕು ಮಠಗಳ ಮುಖ್ಯಸ್ಥ ಎಂದು ಘೋಷಿಸಲು ಕೋರಿಕೆ: ನಿತ್ಯಾನಂದ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್

ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಮಾಡಿರುವ ನೇಮಕಾತಿಗಳಲ್ಲಿ ಮಧ್ಯಪ್ರವೇಶಿಸುವಂತಿಲ್ಲ ಎಂದಿದೆ ಪೀಠ.
Swami Nithyananda
Swami Nithyananda
Published on

ತಮಿಳುನಾಡಿನ ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳ ನಾಲ್ಕು ಮಠಗಳ ಮುಖ್ಯಸ್ಥರಾಗಿ ತನ್ನನ್ನು ಗುರುತಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ (ಎಚ್‌ಆರ್ ಮತ್ತು ಸಿಇ) ನೇಮಕಾತಿಗಳಲ್ಲಿ ನ್ಯಾಯಾಲಯ  ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಆರ್ ಸುಬ್ರಮಣಿಯನ್ ಮತ್ತು ಸಿ ಕುಮಾರಪ್ಪನ್ ಅವರಿದ್ದ ಪೀಠ ಹೇಳಿದೆ.

Also Read
ಗುಜರಾತ್ ಹೈಕೋರ್ಟ್‌ಗೆ ವರ್ಚುವಲ್ ವಿಧಾನದಲ್ಲಿ ಹಾಜರಾಗುವೆವು: ನಿತ್ಯಾನಂದ ವಶದಲ್ಲಿದ್ದಾರೆ ಎನ್ನಲಾದ ಹುಡುಗಿಯರ ಹೇಳಿಕೆ

ನಿತ್ಯಾನಂದ ಪ್ರಶ್ನಿಸಿರುವ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕಸದಸ್ಯ ಪೀಠ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಕಾರಣ ಇಲ್ಲ ಎಂದು ಹೈಕೋರ್ಟ್‌ ತಿಳಿಸಿದೆ.

ಅತ್ಯಾಚಾರ ಮತ್ತಿತರ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೊಬ್ಬರನ್ನು ಮಠಗಳ ಮುಖ್ಯಸ್ಥರನ್ನಾಗಿ ನೇಮಿಸುವ ಇಲಾಖೆಯ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಸೆಪ್ಟೆಂಬರ್ 9, 2024 ರಂದು, ಏಕಸದಸ್ಯ ನ್ಯಾಯಮೂರ್ತಿ ಎಂ.ದಂಡಪಾಣಿ ಅವರು ನಿರಾಕರಿಸಿದ್ದರು.

ನಿತ್ಯಾನಂದ ಅವರು ಪ್ರತಿನಿಧಿಯೊಬ್ಬರ ಮೂಲಕ ಆ ಸ್ಥಾನ ಬೇಕು ಎಂದು ಕೇಳುತ್ತಿರುವುದೇಕೆ? ನಿತ್ಯಾನಂದ ಪ್ರಸ್ತುತ ಎಲ್ಲಿದ್ದಾರೆ ಎಂಬುದು ತಿಳಿಯದೆ ಇರುವುದರಿಂದ ಅಂತಹ ಪ್ರಾತಿನಿಧ್ಯ ಮಾನ್ಯವಾದುದು ಎಂದು ನ್ಯಾಯಾಲಯ ಹೇಗೆ ನಂಬಲು ಸಾಧ್ಯವಾಗುತ್ತದೆ ಎಂದು ಕೂಡ ನ್ಯಾ. ದಂಡಪಾಣಿ ಅವರು ಆ ವೇಳೆ ಪ್ರಶ್ನಿಸಿದ್ದರು.

Also Read
ʼಕೈಲಾಸ ದೇಶದಲ್ಲಿ ಅತ್ಯುನ್ನತ ಸಾಂವಿಧಾನಿಕ ನ್ಯಾಯಾಧೀಶರು ಯಾರು?ʼ ಹೈಕೋರ್ಟ್‌ ಪ್ರಶ್ನೆ

ಈ ಆದೇಶ ಪ್ರಶ್ನಿಸಿ ಕೆಲ ದಿನಗಳ ಹಿಂದೆ ನಿತ್ಯಾನಂದ ಹೈಕೋರ್ಟ್‌ ವಿಭಾಗೀಯ ಪೀಠದ ಮೊರೆ ಹೋಗಿದ್ದರು. ವಕೀಲ ಗಾಡ್ಸನ್ ಸ್ವಾಮಿನಾಥನ್ ಅವರ ಮೂಲಕ ಸಲ್ಲಿಸಿದ್ದ ಅರ್ಜಿಯಲ್ಲಿ ಪರಿಹಾರ ನಿರಾಕರಿಸುವ ಮೂಲಕ ಏಕಸದಸ್ಯ ಪೀಠ ಎಡವಿದೆ. ವಿಶ್ವಸಂಸ್ಥೆ ಮನ್ನಣೆ ನೀಡಿರುವ ರಾಷ್ಟ್ರವಾದ ʼಕೈಲಾಸʼದಲ್ಲಿ ನಿತ್ಯಾನಂದ ಇದ್ದಾರೆ ಎಂಬುದು ಸಾಮಾನ್ಯ ತಿಳಿವಳಿಕೆ. ಜಗತ್ತಿನ 50ಕ್ಕೂ ಹೆಚ್ಚು ದೇಶಗಳೊಂದಿಗೆ ಕೈಲಾಸ ದೇಶಕ್ಕೆ ರಾಜತಾಂತ್ರಿಕ ಸಂಬಂಧವಿದೆ ಎಂದಿದ್ದರು. ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡುವಂತೆಯೂ ಅವರು ಮನವಿ ಮಾಡಿದ್ದರು.

ಆದರೆ ಈ ವಾದದಲ್ಲಿ ಹುರುಳಿಲ್ಲ ಎಂದಿರುವ ಹೈಕೋರ್ಟ್‌ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿತು. ಇದೇ ವೇಳೆ ನಿತ್ಯಾನಂದ ಅವರಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯಗಳ ಮೇಲೆ ತಾನು ಹಾಗೂ ಏಕಸದಸ್ಯ ಪೀಠ ನೀಡಿರುವ ತೀರ್ಪು ಪ್ರಭಾವ ಬೀರದು ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Nithyananda_Swami_vs_Commissioner
Preview
Kannada Bar & Bench
kannada.barandbench.com