ತಮಿಳುನಾಡಿನ ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಸಚಿವ ತಂಗಮ್ ತೆನರಸು ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸಿದ್ದ ವಿಶೇಷ ನ್ಯಾಯಾಲಯದ ಆದೇಶಗಳನ್ನು ಬುಧವಾರ ಮದ್ರಾಸ್ ಹೈಕೋರ್ಟ್ ಬದಿಗೆ ಸರಿಸಿದೆ.
ಇಬ್ಬರೂ ಸಚಿವ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ಪುನರ್ ವಿಚಾರಣೆಗೆ ನಿಗದಿಪಡಿಸಿರುವ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರ ಏಕಸದಸ್ಯ ಪೀಠವು ಇಬ್ಬರ ವಿರುದ್ಧ ಆರೋಪ ನಿಗದಿ ಮಾಡುವಂತೆ ಆದೇಶಿಸಿದೆ.
ಕಳೆದ ವರ್ಷದ ಆಗಸ್ಟ್ 23ರಂದು ಇಬ್ಬರೂ ಸಚಿವರನ್ನು ಆರೋಪ ಮುಕ್ತಗೊಳಿಸಿದ್ದ ವಿಶೇಷ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಕ್ರಿಮಿನಲ್ ಮರುಪರಿಶೀಲನಾ ಪ್ರಕ್ರಿಯೆಯನ್ನು ನ್ಯಾಯಮೂರ್ತಿ ವೆಂಕಟೇಶ್ ಅವರು ಆರಂಭಿಸಿದ್ದರು.
ಆರೋಪಿಗಳು ಮತ್ತು ಪ್ರಾಸಿಕ್ಯೂಷನ್ ಇಬ್ಬರೂ ವ್ಯವಸ್ಥಿತವಾಗಿ ಕೈಜೋಡಿಸಿದ್ದಾರೆ ಎಂದು ನ್ಯಾ. ವೆಂಕಟೇಶ್ ಹೇಳಿದ್ದು, ರಾಮಚಂದ್ರನ್ ಮತ್ತು ತೆನರಸು ಅವರಿಗೆ ನೋಟಿಸ್ ಜಾರಿ ಮಾಡಿತ್ತು.
2023ರ ಜುಲೈ ಮತ್ತು 2022ರ ಡಿಸೆಂಬರ್‌ನಲ್ಲಿ ಕ್ರಮವಾಗಿ ಇಬ್ಬರೂ ಸಚಿವರನ್ನೂ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತ್ತು.
2006ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ರ ಅವಧಿಯಲ್ಲಿ ರಾಮಚಂದ್ರನ್ ಅವರು ₹44.59 ಲಕ್ಷ ಆದಾಯ ಮೀರಿದ ಅಕ್ರಮ ಹಣ ಹೊಂದಿದ್ದರು ಎಂದು ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯವು (ಡಿವಿಎಸಿ) 2011 ಡಿಸೆಂಬರ್ 20ರಂದು ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿ ರಾಮಚಂದ್ರನ್, ಅವ ಪತ್ನಿ ಹಾಗೂ ಸ್ನೇಹಿತನ ವಿರುದ್ದ ಪ್ರಕರಣ ದಾಖಿಸಿತ್ತು. ಈ ಸಂಬಂಧದ ಮುಕ್ತಾಯ ವರದಿಯನ್ನು ವಿಶೇಷ ನ್ಯಾಯಾಲಯ ಒಪ್ಪಿಕೊಂಡಿತ್ತು.
2006ರ ಮೇ 15ರಿಂದ 2010ರ ಮಾರ್ಚ್ 31ರಂದು ತಮ್ಮ ಘೋಷಿತ ಮೂಲಗಳಿಂದ ತೆನರಸು ಮತ್ತು ಅವರ ಪತ್ನಿ ₹74.58 ಲಕ್ಷ ಆದಾಯ ಮೀರಿದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಡಿವಿಎಸಿಯು 2012ರ ಫೆಬ್ರವರಿ 14ರಂದು ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು 2022ರ ಡಿಸೆಂಬರ್ 12ರಂದು ಮುಕ್ತಾಯ ವರದಿ ಒಪ್ಪಿಕೊಂಡಿತ್ತು.