ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಉಚ್ಚಾಟಿತ ನಾಯಕ ಓ ಪನ್ನೀರಸೆಲ್ವಂ (ಒಪಿಎಸ್) ಅವರ ಪತ್ನಿ ಹಾಗೂ ಸಂಬಂಧಿಕರ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ಹಿಂಪಡೆಯಲು ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯಕ್ಕೆ (ಡಿವಿಎಸಿ) ಅನುಮತಿ ನೀಡಿದ್ದ ಕೆಳ ನ್ಯಾಯಾಲಯದ 2012ರ ಆದೇಶವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ಶಿವಗಂಗೆಯ ಸಿಜೆಎಂ ನ್ಯಾಯಾಲಯ 2012ರ ಡಿಸೆಂಬರ್ 3ರಂದು ಪ್ರಕರಣ ಹಿಂಪಡೆಯಲು ಅನುಮತಿಸಿ ಆದೇಶ ನೀಡಿತ್ತು. ಒಪಿಎಸ್ ಶೇ 374ಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದರು ಎಂದು ಆರಂಭದಲ್ಲಿ ವರದಿ ಸಲ್ಲಿಸಿದ್ದ ಡಿವಿಎಸಿ, 2011ರಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂದಾಗ ಅವರನ್ನು ಆರೋಪಮುಕ್ತಗೊಳಿಸಿದ್ದು ಹೇಗೆ ಎಂದು ನ್ಯಾಯಮೂರ್ತಿ ಎನ್ ಆನಂದ ವೆಂಕಟೇಶ್ ಪ್ರಶ್ನಿಸಿದರು.
ಈ ಹಿನ್ನೆಲೆಯಲ್ಲಿ ಒಪಿಎಸ್ ವಿರುದ್ಧದ ಪ್ರಕರಣಕ್ಕೆ ಮರುಜೀವ ನೀಡಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ಪ್ರಕರಣಗಳ ವಿಚಾರಣೆಗೆ ಮೀಸಲಾದ ಮಧುರೈನ ಪ್ರಧಾನ ಸೆಷನ್ಸ್ ನ್ಯಾಯಾಲಯ ನಡೆಸುವಂತೆ ಸೂಚಿಸಿತು.
ವಿಚಾರಣೆ ವಿಳಂಬಗೊಳಿಸುವ ತಂತ್ರವನ್ನು ಆರೋಪಿಗಳು ಬಳಸಿದರೆ ಅವರಿಗೆ ನೀಡಿರುವ ಜಾಮೀನನ್ನು ಸೆಷನ್ಸ್ ನ್ಯಾಯಾಲಯ ರದ್ದುಗೊಳಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ರಾಜ್ಯದ ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ಎಲ್ಲಾ ನ್ಯಾಯಾಲಯಗಳ ಉಸ್ತುವಾರಿ ನ್ಯಾಯಮೂರ್ತಿಯೂ ಆಗಿರುವ ವೆಂಕಟೇಶ್ ಅವರು ಪ್ರಸ್ತುತ ಸರ್ಕಾರದ ವಿರುದ್ಧ ದಾಖಲಿಸಿಕೊಂಡಿರುವ ಆರು ಸ್ವಯಂಪ್ರೇರಿತ ಮರುಪರಿಶೀಲನಾ ಪ್ರಕರಣಗಳಲ್ಲಿ ಇದು ನಾಲ್ಕನೆಯದು. ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಅವರನ್ನು ಖುಲಾಸೆಗೊಳಿಸಿದ ಮತ್ತು ಸಚಿವರಾದ ಕೆಎಸ್‌ಎಸ್‌ಆರ್ ರಾಮಚಂದ್ರನ್ ಮತ್ತು ತಂಗಂ ತೆನ್ನರಸು ಅವರನ್ನು ಬಿಡುಗಡೆ ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾ. ವೆಂಕಟೇಶ್ ಈ ಹಿಂದೆ ಕೈಗೆತ್ತಿಕೊಂಡಿದ್ದರು.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಪಿಎಸ್ ಅವರ ಆದಾಯದ ಮೂಲಗಳಿಗಿಂತ ಶೇ.374 ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ ಎಂದು ಡಿವಿಎಸಿ ತನ್ನ ಅಂತಿಮ ವರದಿ ಸಲ್ಲಿಸಿತ್ತು ಎಂದು ಹೈಕೋರ್ಟ್ ತಿಳಿಸಿದೆ. ಪ್ರಕರಣದ ತನಿಖೆ ಮೂರು ವರ್ಷಗಳ ಕಾಲ ನಡೆದಿತ್ತು ಮತ್ತು 2006ರಲ್ಲಿ ಪ್ರಕರಣ ದಾಖಲಾದ ನಂತರ 250ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆದಿತ್ತು. ಆದರೆ 2011ರಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂದು ಒಪಿಎಸ್ ಸಚಿವರಾದ ಬಳಿಕ ತನ್ನ ಮನಸ್ಸು ಬದಲಿಸಿದ ಡಿವಿಎಸಿ ಅವರ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿ ವರದಿ ಸಲ್ಲಿಸಿತ್ತು.