Tamil actor VijayTwitter
Tamil actor VijayTwitter

ಬೆಳಗಿನ ಜಾವ 4ಕ್ಕೆ ಲಿಯೋ ಸಿನಿಮಾ ಪ್ರದರ್ಶನ: ಕೋರಿಕೆ ನಿರಾಕರಿಸಿದ ಮದ್ರಾಸ್ ಹೈಕೋರ್ಟ್

ಬೆಳಿಗ್ಗೆ 7 ಗಂಟೆಯಿಂದ ಪ್ರದರ್ಶನಕ್ಕೆ ಮಾಡಿರುವ ಮನವಿಯನ್ನು ಪರಿಶೀಲಿಸುವಾಗಲೂ ಸಾರ್ವಜನಿಕರ ಸುರಕ್ಷತೆ ಮತ್ತು ಚಿತ್ರಮಂದಿರಗಳಲ್ಲಿ ಜನದಟ್ಟಣೆ ತಪ್ಪಿಸಲು ಮುಂದಾಗಬೇಕು ಎಂದಿದೆ ಪೀಠ.

ತಮಿಳು ನಟ ವಿಜಯ್ ಅಭಿನಯದ ಲಿಯೋ ಚಿತ್ರವನ್ನು ಬೆಳಗ್ಗೆ 7ರಿಂದ ರಾತ್ರಿ 1.30ರವರೆಗೆ ದಿನಕ್ಕೆ ಐದು ಬಾರಿ ಪ್ರದರ್ಶಿಸಲು ಅನುಮತಿ ನೀಡುವಂತೆ ಚಿತ್ರ ನಿರ್ಮಾಣ ಸಂಸ್ಥೆ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಮಾಡಿದ್ದ ಮನವಿ ಮರುಪರಿಶೀಲಸುವಂತೆ ಮದ್ರಾಸ್ ಹೈಕೋರ್ಟ್ ಮಂಗಳವಾರ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಲ್ಲದೆ ಚಿತ್ರ ಬಿಡುಗಡೆಯಾಗುವ ಅಕ್ಟೋಬರ್ 19ರಂದು ಬೆಳಗಿನ ಜಾವ 4ಕ್ಕೆ ಪ್ರದರ್ಶನ ಏರ್ಪಡಿಸಲು ಅನುವು ಮಾಡಿಕೊಡಬೇಕು ಎಂಬ ಚಿತ್ರ ನಿರ್ಮಾಣ ಸಂಸ್ಥೆಯ ಮನವಿಗೆ ಸಂಬಂಧಿಸಿದಂತೆ ಆದೇಶ ನೀಡಲು ನ್ಯಾಯಮೂರ್ತಿ ಅನಿತಾ ಸುಮಂತ್ ಅವರಿದ್ದ ಪೀಠ ನಿರಾಕರಿಸಿದೆ.

Also Read
ನಟ ಸುಶಾಂತ್ ಸಿಂಗ್ ರಜಪೂತ್ ಕುರಿತ ಸಿನಿಮಾ ಪ್ರಸಾರ ತಡೆಗೆ ದೆಹಲಿ ಹೈಕೋರ್ಟ್ ನಕಾರ

ಚಿತ್ರದ ಅವಧಿ 2 ಗಂಟೆ 45 ನಿಮಿಷಗಳಾಗಿದ್ದು ಎರಡು ಪ್ರದರ್ಶನಗಳ ನಡುವೆ 30 ನಿಮಿಷ ಕಡ್ಡಾಯ ಅಂತರ ಇರಬೇಕಿದೆ. ಜೊತೆಗೆ  ಪ್ರದರ್ಶನದ ಸಮಯದಲ್ಲಿ 20 ನಿಮಿಷಗಳ ಮಧ್ಯಂತರ ವಿರಾಮಕ್ಕೆ ಮೀಸಲಿಡಬೇಕಾಗುತ್ತದೆ. ಇದನ್ನೆಲ್ಲಾ ಗಮನಿಸಿದರೆ, ಬೆಳಗ್ಗೆ 9ರಿಂದ ರಾತ್ರಿ 1:30 ರವರೆಗೆ ದಿನಕ್ಕೆ ಐದು ಪ್ರದರ್ಶನ ನೀಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ, ಪ್ರದರ್ಶನ ಆರಂಭದ ಸಮಯದ ವಿಚಾರದಲ್ಲಿ ಸಡಿಲಿಕೆ ಮಾಡಿ ಬೆಳಗ್ಗೆ 7 ಗಂಟೆಗೆ ನಿಗದಿ ಪಡಿಸುವಂತೆ ಚಿತ್ರ ನಿರ್ಮಾಣ ಸಂಸ್ಥೆ ವಿನಂತಿಸಿತ್ತು.

ಆದರೆ ‘ರಾಜ್ಯದಲ್ಲಿ ಪ್ರತಿ ದಿನ ಬೆಳಗ್ಗೆ 9ರಿಂದ ರಾತ್ರಿ 1:30ರವರೆಗೆ ಮಾತ್ರ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶಿಸಲು ಅನುಮತಿ ನೀಡಿ  ಸರ್ಕಾರ ಆದೇಶಿಸಿದೆ’ ಎಂದು ನ್ಯಾಯಮೂರ್ತಿ ಅನಿತಾ ಹೇಳಿದರು. ದಿನಕ್ಕೆ ಐದು ಪ್ರದರ್ಶನ ಏರ್ಪಡಿಸುವಂತೆ ನಿರ್ಮಾಪಕರು ಮಾಡಿದ್ದ ಮನವಿಯನ್ನು ಸರ್ಕಾರ ಒಪ್ಪಿಕೊಂಡಿದ್ದರೂ, ಪ್ರದರ್ಶನ ಪ್ರಾರಂಭದ ಸಮಯವನ್ನು ಸರ್ಕಾರದ ಆದೇಶ ಸಡಿಲಿಸದು ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು.

ಪ್ರದರ್ಶನಗಳ ಆರಂಭದ ಸಡಿಲಿಕೆಗೆ ಅನುಮತಿ ನೀಡುವ ವಿನಂತಿಯನ್ನು ಮರುಪರಿಶೀಲಿಸಲು ಸರ್ಕಾರ ಅಂತಿಮವಾಗಿ ಒಪ್ಪಿಕೊಂಡಿತು. ಹಾಗೆ ಮಾಡುವಾಗ ಸಾರ್ವಜನಿಕರ ಸುರಕ್ಷತೆ ಮತ್ತು ಚಿತ್ರಮಂದಿರಗಳಲ್ಲಿ ಜನದಟ್ಟಣೆ ತಪ್ಪಿಸಲು ಮುಂದಾಗಬೇಕು ಎಂದು ಪೀಠ ನುಡಿಯಿತು.

Related Stories

No stories found.
Kannada Bar & Bench
kannada.barandbench.com