ನಟ ವಿಶಾಲ್‌ಗೆ ಮದ್ರಾಸ್ ಹೈಕೋರ್ಟ್ ಸಮನ್ಸ್: 'ಮಾರ್ಕ್ ಆಂಟನಿʼ ಬಿಡುಗಡೆಗೆ ತಾತ್ಕಾಲಿಕ ನಿರ್ಬಂಧ

ಲೈಕಾ ಪ್ರೊಡಕ್ಷನ್ಸ್ ಮನರಂಜನಾ ಸಂಸ್ಥೆಗೆ ನೀಡಬೇಕಾಗಿದ್ದ ₹21.29 ಕೋಟಿಯಲ್ಲಿ ₹15 ಕೋಟಿ ಪಾವತಿಸಲು ವಿಶಾಲ್ ವಿಫಲರಾದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪಿ ಟಿ ಆಶಾ ಅವರು ಈ ಆದೇಶ ನೀಡಿದ್ದಾರೆ.
Actor Vishal
Actor Vishal

ಇದೇ ಸೆಪ್ಟೆಂಬರ್ 15ರಂದು ತೆರೆ ಕಾಣಬೇಕಿದ್ದ ತಮಿಳು ನಟ ವಿಶಾಲ್ ಅಭಿನಯದ 'ಮಾರ್ಕ್ ಆಂಟೋನಿʼ ಚಿತ್ರದ ಬಿಡುಗಡೆಯನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿದೆ.

ಸೆಪ್ಟೆಂಬರ್ 9 ರಂದು ನೀಡಿದ ಆದೇಶದಲ್ಲಿ ನ್ಯಾಯಮೂರ್ತಿ ಪಿ ಟಿ ಆಶಾ ಅವರು ಸೆಪ್ಟೆಂಬರ್ 12, ಮಂಗಳವಾರದಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ವಿಶಾಲ್ ಅವರಿಗೆ ಸಮನ್ಸ್‌ ನೀಡಿದ್ದಾರೆ.

Also Read
ಸಾಲ ಮರುಪಾವತಿ ಪ್ರಕರಣ: ನಟ ವಿಶಾಲ್ ಸಿನಿಮಾ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಿದ ಮದ್ರಾಸ್ ಹೈಕೋರ್ಟ್

ಮನರಂಜನಾ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಗೆ ನೀಡಬೇಕಾಗಿದ್ದ ₹21.29 ಕೋಟಿಯಲ್ಲಿ ₹15 ಕೋಟಿ ಪಾವತಿಸಲು ವಿಶಾಲ್ ವಿಫಲರಾದ ಹಿನ್ನೆಲೆಯಲ್ಲಿ ನ್ಯಾ. ಆಶಾ ಈ ಆದೇಶ ನೀಡಿದ್ದಾರೆ.

ದಾವೆ ಪ್ರಕಾರ ವಿಶಾಲ್‌ ಅವರು ಅನ್ಬು ಚೇರಿಯನ್‌ ಎಂಬುವವರಿಂದ ₹ 21 ಕೋಟಿಗೂ ಹೆಚ್ಚು ಸಾಲ ಪಡೆದಿದ್ದರು. ಆ ಸಾಲ ತೀರಿಸಿದ್ದ ಲೈಕಾ ಪ್ರತಿಯಾಗಿ, ವಿಶಾಲ್ ಅವರು ಶೇ 30ರಷ್ಟು ಬಡ್ಡಿಯೊಂದಿಗೆ ಅಸಲು ಮೊತ್ತವನ್ನು ಮರುಪಾವತಿಸಬೇಕು ಎಂದು ಒಪ್ಪಂದ ಮಾಡಿಕೊಂಡಿತ್ತು. ಆದರೆ ಹಣ ಪಾವತಿಸಲು ವಿಶಾಲ್‌ ವಿಫಲರಾಗಿದ್ದಾರೆ ಎಂದು ಲೈಕಾ ಹೈಕೋರ್ಟ್‌ನಲ್ಲಿ ಅಳಲು ತೋಡಿಕೊಂಡಿತ್ತು.

Also Read
ಡಿಎಸ್‌ಪಿಇ ಕಾಯಿದೆಯ ಸೆಕ್ಷನ್ 6ಎ ರದ್ದತಿ: 2014ರ ತೀರ್ಪು ಪೂರ್ವಾನ್ವಯವಾಗುತ್ತದೆ ಎಂದ ಸುಪ್ರೀಂ ಕೋರ್ಟ್‌

ಕಳೆದ ವರ್ಷ ಮಾರ್ಚ್ 8ರಂದು  ₹15 ಕೋಟಿ ಠೇವಣಿ ಇಡುವಂತೆ ಹೈಕೋರ್ಟ್ ವಿಶಾಲ್‌ಗೆ ಸೂಚಿಸಿತ್ತು. ಆ ಸಮಯದಲ್ಲಿ, ನ್ಯಾಯಾಲಯ ವಿಶಾಲ್ ಅವರು ನಿರ್ಮಿಸಿದ ಅಥವಾ ಹಣ ಹೂಡಿದ ಯಾವುದೇ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಅಥವಾ ಓವರ್-ದ-ಟಾಪ್ (ಒಟಿಟಿ) ವೇದಿಕೆಗಳಲ್ಲಿ ಬಿಡುಗಡೆ ಮಾಡದಂತೆ ನಿರ್ಬಂಧಿಸಿತ್ತು. ಮಾರ್ಚ್ 2022ರಲ್ಲಿ ನ್ಯಾಯಾಲಯ ನೀಡಿದ್ದ ಆದೇಶದಂತೆ ವಿಶಾಲ್ ಹಣವನ್ನು ಠೇವಣಿ ಇಟ್ಟಿಲ್ಲ ಇಲ್ಲವೇ ಅವರ ಆಸ್ತಿ ವಿವರಗಳ ಅಫಿಡವಿಟ್ ಸಲ್ಲಿಸಿಲ್ಲ ಎಂದು ಲೈಕಾ ಇತ್ತೀಚೆಗೆ ಅರ್ಜಿ ಸಲ್ಲಿಸಿತ್ತು.

ಪ್ರಸ್ತುತ ಆದೇಶದಲ್ಲಿ, ನ್ಯಾ. ಆಶಾ ಅವರು ವಿಶಾಲ್ ಅವರ ನಡೆ 'ಸ್ವೀಕಾರಾರ್ಹವಲ್ಲʼ ಮತ್ತು 'ನ್ಯಾಯಾಲಯದ ಆದೇಶವನ್ನು ದಿಕ್ಕು ತಪ್ಪಿಸುವ ಗುರಿ ಹೊಂದಿದೆʼ ಎಂದು ಹೇಳಿದರು.

Kannada Bar & Bench
kannada.barandbench.com