ರೆಸ್ಟೋರೆಂಟ್‌ ಪಾರ್ಸೆಲ್ ಆರ್ಡರ್‌ಗಳು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ: ಮದ್ರಾಸ್ ಹೈಕೋರ್ಟ್

ಆಸನ ವ್ಯವಸ್ಥೆ, ಅಲಂಕಾರ, ಸಂಗೀತ ಮತ್ತು ಆತಿಥ್ಯ ಸೇವೆ ಒದಗಿಸಲಾಗದ ಟೇಕ್ ಅವೇ ಆರ್ಡರ್‌ಗಳಿಗೆ ಸೇವಾ ತೆರಿಗೆ ಅನ್ವಯಿಸಲಾಗದು ಎಂದು ನ್ಯಾಯಾಲಯ ಹೇಳಿದೆ.
ರೆಸ್ಟೋರೆಂಟ್‌ ಪಾರ್ಸೆಲ್ ಆರ್ಡರ್‌ಗಳು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ: ಮದ್ರಾಸ್ ಹೈಕೋರ್ಟ್
Published on

ರೆಸ್ಟೋರೆಂಟ್‌ಗಳ ಪಾರ್ಸೆಲ್‌ ಅಥವಾ ಟೇಕ್‌ ಅವೇ ಆರ್ಡರ್‌ಗಳು 1994ರ ಹಣಕಾಸು ಕಾಯಿದೆಯಡಿ ಸೇವಾ ತೆರಿಗೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ರೆಸ್ಟೋರೆಂಟ್‌ಗಳಿಂದ ಆಹಾರ ಮತ್ತು ಪಾನೀಯಗಳನ್ನು ಪಾರ್ಸೆಲ್‌ ಮಾಡುವುದು ಅವುಗಳ ಮಾರಾಟಕ್ಕೆ ಸಮನಾಗಿರುತ್ತದೆಯೇ ವಿನಾ ಅದು ಸೇವೆ ಎನಿಸಿಕೊಳ್ಳುವುದಿಲ್ಲ. ಹೀಗಾಗಿ ಇದಕ್ಕೆ ಹಣಕಾಸು ಕಾಯಿದೆ ಅಡಿ ಸೇವಾ ತೆರಿಗೆ ಅನ್ವಯಿಸಲು ಆಗದು ಎಂದು ಮದ್ರಾಸ್‌ ಹೈಕೋರ್ಟ್ ನ್ಯಾಯಮೂರ್ತಿ ಅನಿತಾ ಸುಮಂತ್‌ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿದೆ.

ಆಸನ ವ್ಯವಸ್ಥೆ, ಅಲಂಕಾರ, ಸಂಗೀತ ಮತ್ತು ಆತಿಥ್ಯ ಸೇವೆ ಒದಗಿಸಲಾಗದ ಟೇಕ್‌ ಅವೇ ಆರ್ಡರ್‌ಗಳಿಗೆ ಸೇವಾ ತೆರಿಗೆ ಅನ್ವಯಿಸಲಾಗದು ಎಂದು ನ್ಯಾಯಾಲಯ ವಿವರಿಸಿದೆ.

ಆಹಾರ ಅಥವಾ ಪಾನೀಯವನ್ನು ಟೇಬಲ್‌ ಬಳಿ ಇರಿಸಿ ಬಿಲ್‌ ಪಡೆಯುವ ಸೇವೆಗೆ ಮಾತ್ರ ಸೇವಾ ತೆರಿಗೆ ವಿಧಿಸಬಹುದಾಗಿದೆ. ಇಂತಹ ಸೇವಾ ತೆರಿಗೆ ಕುಳಿತುಕೊಳ್ಳುವ ವ್ಯವಸ್ಥೆ, ಅಲಂಕಾರ, ಲೈವ್‌ ಇರುವ ಅಥವಾ ಇಲ್ಲದಿರುವ ಸಂಗೀತ ಮತ್ತು ನೃತ್ಯ, ಮದ್ಯ ಸರಬರಾಜು, ಪರಿಚಾರಿಕೆಯರು, ಮಾಣಿಗಳು, ಪಾತ್ರೆ ಪಗಡೆ ಮತ್ತಿತರ ವಸ್ತುಗಳನ್ನು ಒಳಗೊಂಡ ಸೇವೆ ಒದಗಿಸುವುದಕ್ಕೆ ಸಂಬಂಧಿಸಿದೆ. ಅದರಲ್ಲಿಯೂ ಹವಾ ನಿಯಂತ್ರಿತ ರೆಸ್ಟೋರೆಂಟ್‌ಗಳಿಗೆ ಮಾತ್ರವೇ ಈ ಸೇವಾ ತೆರಿಗೆ ಅನ್ವಯಿಸಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಟೇಕ್‌ಅವೇ ಅಥವಾ ಆಹಾರದ ಪಾರ್ಸೆಲ್‌ ಸಂದರ್ಭಗಳಲ್ಲಿ ಇಂತಹ ಗುಣಲಕ್ಷಣಗಳ ಅನುಪಸ್ಥಿತಿ ಇರುತ್ತದೆ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಹೊರಾಂಗಣ ಅಡುಗೆ (ಕ್ಯಾಟರಿಂಗ್ ಸೇವೆ), ಮದುವೆ ಛತ್ರಗಳಿಗೆ ಆಹಾರ ಪೂರೈಸುತ್ತಿದ್ದ ಹವಾನಿಯಂತ್ರಿತ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿರುವ ಸೇವಾ ತೆರಿಗೆ ನೋಂದಣಿ ಮಾಡಿಕೊಂಡ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಇವರು ಪಾರ್ಸಲ್‌ ಅಥವಾ ಟೇಕ್‌ ಅವೇಗಳಿಗೆ ಸೇವಾ ತೆರಿಗೆ ವಿಧಿಸಲಾಗುತ್ತಿಲ್ಲ ಎಂದು ಕಂದಾಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಆಹಾರ ಮತ್ತು ಪಾನೀಯಗಳ ಮಾರುವ ರೆಸ್ಟೋರೆಂಟ್‌ಗಳು ಒದಗಿಸುವ ಎಲ್ಲಾ ಸೇವೆಗಳಿಗೆ ತೆರಿಗೆ ವಿಧಿಸಲಾಗದು. ಕೆಲವು ಸಂದರ್ಭಗಳಲ್ಲಿ ಮಾತ್ರ ಈ ತೆರಿಗೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿತು.

Also Read
ನ್ಯಾಯಿಕ ಲೋಕದ ಮೇಲೆ ಬಜೆಟ್ ಪರಿಣಾಮ: ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗಳು ಕಾಗದ ರಹಿತ, ಇ- ಕೋರ್ಟ್‌ ಅನುದಾನ ಇಳಿಮುಖ

ಅಲ್ಲದೆ ಬಹುತೇಕ ರೆಸ್ಟೋರೆಂಟ್‌ಗಳಲ್ಲಿ ಟೇಕ್‌ ಅವೇ ಅಥವಾ ಪಾರ್ಸೆಲ್‌ ಒದಗಿಸಲು ಪ್ರತ್ಯೇಕ ಕೌಂಟರ್‌ ಇದ್ದು ದೂರವಾಣಿ, ಇಮೇಲ್‌ ಆನ್‌ಲೈನ್‌ ಬುಕಿಂಗ್‌ ಮೂಲಕ ಇಲ್ಲವೇ ಸ್ವಿಗ್ಗಿ ಅಥವಾ ಜೊಮಾಟೊ ರೀತಿಯ ವಿತರಣಾ ಸೇವೆ ಮೂಲಕ ಆರ್ಡರ್‌ ಸ್ವೀಕರಿಸಲಾಗುತ್ತದೆ. ಆಹಾರ ಸಂಸ್ಕರಿಸಿ ವಿತರಣೆಗೆ ಅಣಿ ಮಾಡಿದ ನಂತರ ಪಾರ್ಸೆಲ್‌ಗಳನ್ನು ಪ್ರತ್ಯೇಕ ಕೌಂಟರ್‌ಗಳಿಗೆ ಒಯ್ಯಲಾಗುತ್ತದೆ. ಅಲ್ಲಿ ಗ್ರಾಹಕ ಅಥವಾ ವಿತರಣಾ ಸೇವೆ ಒದಗಿಸುವವರು ಅದನ್ನು ಪಡೆಯುತ್ತಾರೆ. ಬಹುತೇಕ ಕಡೆಗಳಲ್ಲಿ ಮುಖ್ಯ ಡೈನಿಂಗ್‌ ಹಾಲ್‌ನಿಂದ ಈ ಟೇಕ್‌ ಅವೇ ಕೌಂಟರ್‌ಗಳು ಅವು ಹವಾನಿಯಂತ್ರಿತವಿರಲಿ ಇಲ್ಲದೇ ಇರಲಿ ಪ್ರತ್ಯೇಕವಾಗಿ ಇರುತ್ತವೆ. ಇಂತಹ ಕಡೆಗಳಲ್ಲಿ ಆಹಾರ ಮತ್ತು ಪಾನೀಯ ಮಾರಾಟ ಮಾಡುವುದು ಸೇವಾ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಅರ್ಜಿದಾರರ ಪರವಾಗಿ ವಕೀಲರಾದ ಜೋಸೆಫ್ ಪ್ರಭಾಕರ್, ಹರಿ ರಾಧಾಕೃಷ್ಣನ್ ಮತ್ತು ಪಿ ಜಯಲಕ್ಷ್ಮಿ ಹಾಜರಿದ್ದರು. ಪ್ರತಿವಾದಿಗಳ ಪರವಾಗಿ ಹಿರಿಯ ಸ್ಥಾಯಿ ವಕೀಲರಾದ ಎ ಪಿ ಶ್ರೀನಿವಾಸ್ ರಜನೀಶ್ ಪತಿಲ್ ಹಾಗೂ ವಕೀಲ ವಿ ಸುಂದರೇಶ್ವರನ್ ಹಾಜರಿದ್ದರು.

Kannada Bar & Bench
kannada.barandbench.com