'ನಂದಿನಿ' ವಾಣಿಜ್ಯ ಚಿಹ್ನೆ ವಿವಾದ: ಮದ್ರಾಸ್‌ ಹೈಕೋರ್ಟ್‌ನಲ್ಲಿ ಕೆಎಂಎಫ್‌ಗೆ ಜಯ

ಕೆಎಂಎಫ್ ತನ್ನ ಕ್ಷೀರ ಉತ್ಪನ್ನಗಳಿಗೆ ದೀರ್ಘಕಾಲದಿಂದ ಬಳಸುತ್ತಿರುವ ನಂದಿನಿ ವಾಣಿಜ್ಯ ಚಿಹ್ನೆಗೆ ಪ್ರಸ್ತಾವಿತ ಅಗರಬತ್ತಿ ವಾಣಿಜ್ಯ ಚಿಹ್ನೆ ವಂಚಿಸುವ ರೀತಿ ಹೋಲುತ್ತಿದ್ದು ಗ್ರಾಹಕರನ್ನು ತಪ್ಪುದಾರಿಗೆಳೆಯಬಹುದು ಎಂದು ತೀರ್ಪು ಹೇಳಿದೆ.
Madras HC with logo of Nandini milk
Madras HC with logo of Nandini milk
Published on

ಅಗರಬತ್ತಿ ಹಾಗೂ ಧೂಪದ ಉತ್ಪನ್ನ ತಯಾರಿಸುತ್ತಿದ್ದ ತಮಿಳುನಾಡು ಮೂಲದ ಕಂಪೆನಿಯೊಂದು ‘ನಂದಿನಿʼ ವಾಣಿಜ್ಯ ಚಿಹ್ನೆ ಬಳಸದಂತೆ ಕರ್ನಾಟಕ ಹಾಲು ಮಹಾಮಂಡಳ ಎತ್ತಿದ್ದ ಆಕ್ಷೇಪಣೆ ತಿರಸ್ಕರಿಸಿ 2010ರ ವಾಣಿಜ್ಯ ಚಿಹ್ನೆ ರಿಜಿಸ್ಟ್ರಿ ಹೊರಡಿಸಿದ್ದ ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ ಸೋಮವಾರ ರದ್ದುಗೊಳಿಸಿದೆ [ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ಮತ್ತು ವಿನೋದ್‌ ಕಾಂಜಿ ಶಾ ಹಾಗೂ ನಿತಿನ್‌ ನಡುವಣ ಪ್ರಕರಣ].

ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ತನ್ನ ಕ್ಷೀರ ಉತ್ಪನ್ನಗಳಿಗೆ ದೀರ್ಘಕಾಲದಿಂದ ಬಳಸುತ್ತಿರುವ ನಂದಿನಿ ವಾಣಿಜ್ಯ ಚಿಹ್ನೆಗೆ ಪ್ರಸ್ತಾವಿತ ಅಗರಬತ್ತಿ ವಾಣಿಜ್ಯ ಚಿಹ್ನೆ ವಂಚಿಸುವ ರೀತಿಯಲ್ಲಿ ಹೋಲಿಕೆಯಾಗುತ್ತಿದ್ದು ಗ್ರಾಹಕರನ್ನು ತಪ್ಪುದಾರಿಗೆಳೆಯಬಹುದು ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರ ತೀರ್ಪು ಹೇಳಿದೆ.

Also Read
ವ್ಯಕ್ತಿತ್ವ ಹಕ್ಕಿನ ವಾಣಿಜ್ಯಿಕ ದುರ್ಬಳಕೆ ಸಾಬೀತಾಗದೆ ಸಾ. ಮಾಧ್ಯಮ ಹೇಳಿಕೆ ತೆಗೆದುಹಾಕುವಂತಿಲ್ಲ: ಮದ್ರಾಸ್ ಹೈಕೋರ್ಟ್

ವಾಣಿಜ್ಯ ಚಿಹ್ನೆ ಕಾಯಿದೆ 1999ರ ಸೆಕ್ಷನ್ 91ರ ಅಡಿಯಲ್ಲಿ ಕೆಎಂಎಫ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದ್ದು 2010 ಏಪ್ರಿಲ್ 5ರಂದು ವಾಣಿಜ್ಯ ಚಿಹ್ನೆ ಉಪ ನೋಂದಣಾಧಿಕಾರಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.

ಕೆಎಂಎಫ್‌ 1983ರಿಂದ ಹಾಲು ಹಾಗೂ ಹಾಲು ಉತ್ಪನ್ನಗಳಿಗೆ ‘ನಂದಿನಿʼ ವಾಣಿಜ್ಯಚಿಹ್ನೆ ಬಳಸಿಕೊಂಡು ಬರುತ್ತಿದೆ. ಈ ವಾಣಿಜ್ಯ ಚಿಹ್ನೆಯನ್ನು ನೋಂದಾಯಿಸಲಾಗಿದ್ದು, ಕರ್ನಾಟಕ ಮತ್ತು ನೆರೆರಾಜ್ಯಗಳಲ್ಲಿ ವ್ಯಾಪಕ ಖ್ಯಾತಿ ಮತ್ತು ವರ್ಚಸ್ಸು ಹೊಂದಿದೆ. ಆದರೆ ಅಗರಬತ್ತಿ ತಯಾರಕ ಕಂಪೆನಿ ಯಾವುದೇ ಪೂರ್ವ ಪ್ರತ್ಯಯ ಮತ್ತು ಅಂತ್ಯ ಪ್ರತ್ಯಯಗಳನ್ನು ಬಳಸದೆ ನಂದಿನಿ ಪದವನ್ನೇ ಹೋಲುವಂತಹ ಬರವಣಿಗೆ ಶೈಲಿ ಮತ್ತು ಧ್ವನಿಸಾಮ್ಯತೆ ಬಳಸಿರುವುದರಿಂದ ಗ್ರಾಹಕರನ್ನು ತಪ್ಪು ದಾರಿಗೆಳೆಯುವ ಸಾಧ್ಯತೆ ಇದೆ ಎಂದು ತೀರ್ಪು ವಿವರಿಸಿದೆ.

 ನಂದಿನಿ ಎಂಬದು ವ್ಯಕ್ತಿಗತ ಹೆಸರು ಹಾಗೂ ಬೇರೆ ಉತ್ಪನ್ನಗಳಿಗೆ ಕೂಡ ಈ ಹೆಸರು ಬಳಸಲಾಗಿದೆ ಎಂಬ ವಾಣಿಜ್ಯ ಚಿಹ್ನೆ ರಿಜಿಸ್ಟ್ರಿಯ ವಾದವನ್ನು ಹೈಕೋರ್ಟ್‌ ಬದಿಗೆ ಸರಿಸಿದೆ. ಧ್ವನಿಸಾಮ್ಯತೆ, ದೃಶ್ಯಸಾಮ್ಯತೆ ಮತ್ತು ಬರವಣಿಗೆ ಶೈಲಿಯ ಕಾರಣದಿಂದ ಅಗರಬತ್ತಿ ಕಂಪೆನಿಯ ವಾಣಿಜ್ಯ ಚಿಹ್ನೆ ವಂಚಿಸುವ ರೀತಿಯಲ್ಲಿ ನಂದಿನಿ ವಾಣಿಜ್ಯ ಚಿಹ್ನೆಗೆ ಹೋಲಿಕೆಯಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ನಂದಿನಿ ಡಿಲಕ್ಸ್‌ಗೆ ಸಂಬಂಧಿಸಿದಂತೆ 2018ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಭಿನ್ನ ಎಂದು ಪರಿಗಣಿಸಿದ ನ್ಯಯಾಲಯ ಆ ಪ್ರಕರಣದಲ್ಲಿ ಡಿಲಕ್ಸ್‌ ಎಂಬ ಅಂತ್ಯ ಪ್ರತ್ಯಯ ಇದ್ದು ವಿಭಿನ್ನ ಲೋಗೊ ಮತ್ತು ವಾಣಿಜ್ಯ ರೂಪಗಳಿದ್ದವು ಎಂದು ಹೇಳಿತು. ಆದರೆ ಈ ಪ್ರಕರಣದಲ್ಲಿ ಅಂತಹ ಭಿನ್ನತೆ ಗೋಚರಿಸುತ್ತಿಲ್ಲ ಎಂದು ಅದು ಸ್ಪಷ್ಟಪಡಿಸಿತು.

Also Read
ವ್ಯಕ್ತಿತ್ವ ಹಕ್ಕಿನ ವಾಣಿಜ್ಯಿಕ ದುರ್ಬಳಕೆ ಸಾಬೀತಾಗದೆ ಸಾ. ಮಾಧ್ಯಮ ಹೇಳಿಕೆ ತೆಗೆದುಹಾಕುವಂತಿಲ್ಲ: ಮದ್ರಾಸ್ ಹೈಕೋರ್ಟ್

ಮಹತ್ವದ ಅಂಶಗಳನ್ನು ಪರಿಗಣಿಸದೆಯೇ ವಾಣಿಜ್ಯ ಚಿಹ್ನೆ ರಿಜಿಸ್ಟ್ರಿ ತೀರ್ಪು ನೀಡುವಲ್ಲಿ ಎಡವಿದೆ ಎಂದು ಅದು ತಿಳಿಸಿದ್ದು ವಾಣಿಜ್ಯ ಚಿಹ್ನೆ ಕಾಯಿದೆ  ಸೆಕ್ಷನ್‌ 1999ರ ಸೆಕ್ಷನ್ 91 ಅಡಿಯಲ್ಲಿ ಕೆಎಂಎಫ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಪುರಸ್ಕರಿಸಿದೆ.

ಕೆಎಂಎಫ್ ಪರವಾಗಿ ಹಿರಿಯ ವಕೀಲ ಎಸ್ ರವಿ ಮತ್ತು ಕಾನೂನು ತಂಡ ವಾದ ಮಂಡಿಸಿತು. ವಾಣಿಜ್ಯ ಚಿಹ್ನೆ ರಿಜಿಸ್ಟ್ರಿ ಪರವಾಗಿ ಹಿರಿಯ ವಕೀಲ ಜೆ ಮದನಗೋಪಾಲ್ ರಾವ್ ಅವರು ಹಾಜರಿದ್ದರು.

[ತೀರ್ಪಿನ ಪ್ರತಿ]

Attachment
PDF
KMF_Vs_Vinod_Kanji_Shah
Preview
Kannada Bar & Bench
kannada.barandbench.com