ಫಿಲ್ಟರ್ ತಂಬಾಕು ಉತ್ಪನ್ನವಾದ ಕೂಲ್ ಲಿಪ್‌ನಿಂದ ವಿದ್ಯಾರ್ಥಿಗಳ ಮೇಲೆ ಉಂಟಾಗುವ ಗಂಭೀರ ಪರಿಣಾಮ ಪರಿಗಣಿಸಿ ಅಂತಹ ಉತ್ಪನ್ನಗಳ ಮಾರಾಟ ನಿಷೇಧಿಸಲು ಆಹಾರ ಸುರಕ್ಷತಾ ಕಾಯಿದೆಯಡಿ ಆದೇಶ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಒತ್ತಾಯಿಸಿದೆ.
ಇದೇ ವೇಳೆ, ನಿಷೇಧಿತ ತಂಬಾಕು ಉತ್ಪನ್ನಗಳ ವ್ಯಸನಿಗಳಾಗಿರುವ ಅಪ್ರಾಪ್ತ ವಯಸ್ಕರಿಗೆ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ನೀಡುವುದಕ್ಕಾಗಿ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ತಂಬಾಕು ನಿಗ್ರಹ ಕೇಂದ್ರ ಸ್ಥಾಪಿಸುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಮೂರ್ತಿ ಡಿ ಭರತ ಚಕ್ರವರ್ತಿ ನಿರ್ದೇಶಿಸಿದ್ದಾರೆ.
ಇಂತಹ ಉತ್ಪನ್ನಗಳಿಗೆ ಸಂಬಂಧಿಸಿದ ಕನಿಷ್ಠ ಹತ್ತು ಜಾಮೀನು ಪ್ರಕರಣಗಳು ಪ್ರತಿದಿನ ನ್ಯಾಯಾಲಯದೆದುರು ಬರುತ್ತಿದ್ದು ಇದು ಮಕ್ಕಳಲ್ಲಿ ತಂಬಾಕು ಉತ್ಪನ್ನ ಬಳಕೆ ಹಠಾತ್ ಹೆಚ್ಚುತ್ತಿರುವುದನ್ನು ಸೂಚಿಸುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಕಳೆದ ಆಗಸ್ಟ್‌ನಲ್ಲಿ 27 ಪ್ಯಾಕೆಟ್‌ಗಳ ಕೂಲ್ ಲಿಪ್ ತಂಬಾಕು ಉತ್ಪನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ನಂತರ ನ್ಯಾಯಾಂಗ ಬಂಧನದಲ್ಲಿದ್ದ ಔನೆಸ್ತ್‌ರಾಜ ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ.
ಬೇರೆ ರಾಜ್ಯಗಳಿಂದ ಕೂಲ್ ಲಿಪ್ ಉತ್ಪನ್ನ ಖರೀದಿಸಿ ತಮಿಳುನಾಡಿಗೆ ಕಳ್ಳಸಾಗಣೆ ಮಾಡಿದ ಆರೋಪ ಆರೋಪಿ ಮೇಲಿತ್ತು. ಆತನಿಗೆ ಈ ಹಿಂದೆ ನೀಡಿದ್ದ ಜಾಮೀನನ್ನು ಅಕ್ಟೋಬರ್ 30ರಂದು ಅಖೈರುಗೊಳಿಸುವ ವೇಳೆ ವಿದ್ಯಾರ್ಥಿಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಳದ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.
ಬೇರೆ ರಾಜ್ಯಗಳಿಂದ ತಂಬಾಕು ಮತ್ತು ಫಿಲ್ಟರ್ ತಂಬಾಕು ಉತ್ಪನ್ನಗಳ ಕಳ್ಳಸಾಗಣೆ ತಡೆಯಲಾಗುತ್ತಿಲ್ಲ ಎಂಬ ರಾಜ್ಯದ ಅಧಿಕಾರಿಗಳ ಅಸಹಾಯಕತೆ ಗಮನಿಸಿದ ನ್ಯಾಯಾಲಯ ದೇಶಾದ್ಯಂತ ವಿದ್ಯಾರ್ಥಿಗಳು ಅಂತಹ ಉತ್ಪನ್ನಗಳನ್ನು ಬಳಸಲು ಸಾಧ್ಯವಾಗದಂತೆ ನೋಡಿಕೊಳ್ಳಲು ಆಹಾರ ಸುರಕ್ಷತಾ ಕಾಯಿದೆಯ ಸೆಕ್ಷನ್ 86ರ ಅಡಿಯಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದಿತು.
ರಾಜ್ಯ ಸರ್ಕಾರಗಳು ನಿರ್ದೇಶನ ಪಾಲಿಸಲು ಬದ್ಧವಾಗಿರಬೇಕಿದ್ದು ಕೇಂದ್ರ ಸರ್ಕಾರ ಪರಿಸ್ಥಿತಿಯ ಗಂಭೀರ ಸ್ವರೂಪ ಪರಿಗಣಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಸೆಕ್ಷನ್ 86 ರ ಅಡಿಯಲ್ಲಿ ನಿರ್ದೇಶನ ನೀಡಬೇಕು. ವ್ಯಾಪಕ ಬಳಕೆ, ಅಪಾರ ಜನಪ್ರಿಯತೆ ಮತ್ತು ಮಕ್ಕಳನ್ನು ಆಕರ್ಷಿಸುವ ಈ ಹೊಸ ಡಿಪ್ಪಿಂಗ್/ಫಿಲ್ಟರ್ ತಂಬಾಕು ಉತ್ಪನ್ನಗಳ ವಿಶಿಷ್ಟ ಸ್ವರೂಪವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದ ಹೈಕೋರ್ಟ್ ಅರ್ಜಿ ವಿಲೇವಾರಿ ಮಾಡಿತು.