ಪೆರಿಯಾರ್, ಡಿಎಂಕೆ ನಾಯಕರ ಅವಹೇಳನ: ಬಿಜೆಪಿಯ ಹೆಚ್‌ ರಾಜಾ ವಿರುದ್ಧದ 11 ಎಫ್ಐಆರ್ ರದ್ದತಿಗೆ ಮದ್ರಾಸ್ ಹೈಕೋರ್ಟ್ ನಕಾರ

ಪೆರಿಯಾರ್, ಎಂ ಕರುಣಾನಿಧಿ, ಡಿಎಂಕೆ ಸಂಸದೆ ಕನಿಮೋಳಿ ಮತ್ತಿತರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ರಾಜಾ ಅವರ ವಿರುದ್ಧ 11 ಪ್ರತ್ಯೇಕ ಎಫ್ಐಆರ್‌ಗಳನ್ನು ದಾಖಲಿಸಿಸಲಾಗಿತ್ತು.
ಪೆರಿಯಾರ್, ಡಿಎಂಕೆ ನಾಯಕರ ಅವಹೇಳನ: ಬಿಜೆಪಿಯ ಹೆಚ್‌ ರಾಜಾ ವಿರುದ್ಧದ 11 ಎಫ್ಐಆರ್ ರದ್ದತಿಗೆ ಮದ್ರಾಸ್ ಹೈಕೋರ್ಟ್ ನಕಾರ
Published on

ದ್ರಾವಿಡ ಚಳವಳಿಯ ಹರಿಕಾರ ಪೆರಿಯಾರ್‌, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ ಡಿಎಂಕೆ ಸಂಸದೆ ಕನಿಮೋಳಿ, ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಅವರ ಪತ್ನಿಯರ ವಿರುದ್ಧ ಸಾರ್ವಜನಿಕ ಭಾಷಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಎಚ್‌ ರಾಜಾ ವಿರುದ್ಧ ತಮಿಳುನಾಡಿನಾದ್ಯಂತ ದಾಖಲಾಗಿರುವ 11 ಎಫ್‌ಐಆರ್‌ಗಳಲ್ಲಿ ಯಾವುದನ್ನೂ ರದ್ದುಗೊಳಿಸಲು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿದೆ.

ತಾನು ತುಂಬಾ ನೊಂದಿದ್ದರಿಂದ ಇಂತಹ ಹೇಳಿಕೆಗಳನ್ನು ನೀಡಬೇಕಾಯಿತು ಎಂಬ ರಾಜಾ ಅವರ ಸಮಜಾಯಿಷಿಗೆ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಆಗಸ್ಟ್ 29ರಂದು ನೀಡಿದ ಆದೇಶದಲ್ಲಿ ಅಸಮ್ಮತಿ ಸೂಚಿಸಿದರು.

Also Read
ಬಿಜೆಪಿ ನಾಯಕರಾದ ಅನುರಾಗ್, ಪರೇಶ್ ದ್ವೇಷಭಾಷಣ; ಎಫ್ಐಆರ್ ಕೋರಿಕೆ ವಜಾಗೊಳಿಸಿದ ದೆಹಲಿ ನ್ಯಾಯಾಲಯ

ರಾಜಾ ಅವರು ಸಾರ್ವಜನಿಕ ವ್ಯಕ್ತಿಯಾಗಿದ್ದು ತಾವು ನೋವು ಅನುಭವಿಸುತ್ತಿದ್ದಾಗಲೂ ತಮ್ಮ ಭಾಷೆಯತ್ತ ಅವರು ಗಮನಹರಿಸಬೇಕಿತ್ತು ಎಂದು ನಿರೀಕ್ಷಿಸಲಾಗಿದೆ ಎಂಬುದಾಗಿ ನ್ಯಾ ವೆಂಕಟೇಶ್‌ ಬುದ್ಧಿವಾದ ಹೇಳಿದರು.

ದುಃಖ ತೋಡಿಕೊಳ್ಳುವವರು ಸಾರ್ವಜನಿಕ ವ್ಯಕ್ತಿಯಾಗಿದ್ದಾಗ ಅಂತಹವರು ಉಚ್ಚರಿಸುವ ಒಂದೊಂದು ಪದವೂ ಮುಖ್ಯವಾಗುತ್ತದೆ. ದುಃಖವನ್ನು ಅಭಿವ್ಯಕ್ತಿಗೊಳಿಸಲು ಬೇರೆಯವರ ವಿರುದ್ಧ ಖಂಡನೀಯ ಮತ್ತು ವೃಥಾ ಟೀಕೆ ಮಾಡಬಾರದು ಎಂದು ಅವರು ತಿಳಿಸಿದರು.

ಪೆರಿಯಾರ್‌ ಅವರ ವಿರುದ್ಧದ ಹೇಳಿಕೆಗಳು ದ್ವೇಷ ಭಾಷಣದ ಸಮೀಪ ಇವೆ ಹಾಗೂ ಮಹಿಳೆಯರ ವಿರುದ್ಧದ ಹೇಳಿಕೆಗಳು ಮಾನನಷ್ಟ ಮತ್ತು ಕೀಳರಿಮೆ ಸೃಷ್ಟಿಸುವಂತಿವೆ. ಅವರ ಹೇಳಿಕೆಗಳು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ರಾಜ್ಯಾದ್ಯಂತ ಗೊಂದಲ ಉಂಟು ಮಾಡಬಹುದು. ಪೆರಿಯಾರ್‌ ಅವರ ವಿರುದ್ಧದ ಸೈದ್ಧಾಂತಿಕ ಭಿನ್ನತೆಯನ್ನು ಸಂವಿಧಾನದ 19 (1)(ಎ)  ವಿಧಿಯಡಿ ವ್ಯಕ್ತಪಡಿಸಲು ಅವಕಾಶ ಇದ್ದರೂ ಅದನ್ನು ಎಲ್ಲಿಯವರೆಗೆ ಕೊಂಡೊಯ್ಯಬಹುದು ಎಂಬುದು ಪ್ರಶ್ನೆಯಾಗಿದೆ ಎಂದ ನ್ಯಾಯಾಲಯ ಬಿಜೆಪಿಯ ಮಾಜಿ ಶಾಸಕ ರಾಜಾ ಅವರಿಗೆ ಪರಿಹಾರ ನೀಡಲು ನಿರಾಕರಿಸಿತು.

ಜೊತೆಗೆ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ರಾಜಾ ವಿರುದ್ಧ ದಾಖಲಾಗಿರುವ ಎಲ್ಲಾ ಏಳು ಪ್ರಕರಣಗಳನ್ನು ಒಟ್ಟುಗೂಡಿಸಿ ತಮಿಳುನಾಡಿನ ಶ್ರೀವಿಳ್ಳಿಪುತ್ತೂರ್‌ ಜಿಲ್ಲೆಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಂಟಿ ವಿಚಾರಣೆಗಾಗಿ ವರ್ಗಾಯಿಸುವಂತೆ ನ್ಯಾಯಮೂರ್ತಿ ವೆಂಕಟೇಶ್ ಆದೇಶಿಸಿದ್ದಾರೆ.

ಪೆರಿಯಾರ್ ಮತ್ತು ಇತರ ರಾಜಕೀಯ ನಾಯಕರ ವಿರುದ್ಧ ರಾಜಾ ಅವರು ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದ ಉಳಿದ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಚೆನ್ನೈನ ವಿಶೇಷ ನ್ಯಾಯಾಲಯವು ಒಟ್ಟಾಗಿ ನಡೆಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
H_Raja_v_The_StateS.pdf
Preview
Kannada Bar & Bench
kannada.barandbench.com