ಮ್ಯಾಜಿಸ್ಟ್ರೇಟ್‌ ಆದೇಶದನ್ವಯ ಎಫ್‌ಐಆರ್‌ ದಾಖಲಿಸದ ಪಿಎಸ್‌ಐ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ ಹೈಕೋರ್ಟ್‌

ಅಧಿಕಾರಿ ವರ್ಗದ ಈ ನಡೆ ಗಂಭೀರ ದುರ್ನಡತೆ ಮತ್ತು ದಂಡ ವಿಧಿಸಬಹುದಾದ ಪ್ರಕರಣಕ್ಕೆ ಉದಾಹರಣೆಯಾಗಿದೆ. ಈ ರೀತಿಯಾದ ಕರ್ತವ್ಯ ಲೋಪವನ್ನು ಸಹಿಸಲಾಗದು ಎಂದಿರುವ ನ್ಯಾಯಾಲಯ.
Justice M Nagaprasanna
Justice M Nagaprasanna

ಕಳವು ಸಂಬಂಧ ಖಾಸಗಿ ಪ್ರಕರಣವೊಂದರ ಕುರಿತಂತೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೂಚನೆ ನೀಡಿದ್ದ ಹೊರತಾಗಿಯೂ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ನಿಲುವು ತಳೆದಿದ್ದ ಕಾಟನ್‌ಪೇಟೆ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಕೆ ವೈ ಪ್ರವೀಣ್ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.

ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವೊಂದರ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶನದಂತೆ ತನಿಖೆಗೆ ಹಿರಿಯ ಅಧಿಕಾರಿ ನೇಮಕ ಮಾಡುವಂತೆ ಕೋರಿ ಕಾಟನ್‌ಪೇಟೆಯ ನಿವಾಸಿ ಎಂ ಪ್ರಕಾಶ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅಧಿಕಾರಿ ಪ್ರವೀಣ್‌ ವಿರುದ್ಧದ ಇಲಾಖಾ ತನಿಖೆ ಪೂರ್ಣಗೊಂಡ ಬಳಿಕ ವರದಿಯನ್ನು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ. “ನ್ಯಾಯಾಲಯಗಳ ಆದೇಶವನ್ನು ಪೋಲೀಸರು ಗಂಭೀರವಾಗಿ ಪರಿಗಣಿಸಿ, ಜಾರಿ ಮಾಡಬೇಕು. ಇಲ್ಲವಾದಲ್ಲಿ ಸಂತ್ರಸ್ತ ಮೂಲಭೂತ ಹಕ್ಕು ಉಲ್ಲಂಘನೆಯಾಗಲಿದೆ. ಅಧಿಕಾರಿ ವರ್ಗದ ಈ ನಡೆ ಗಂಭೀರ ದುರ್ನಡತೆ ಮತ್ತು ದಂಡ ವಿಧಿಸಬಹುದಾದ ಪ್ರಕರಣಕ್ಕೆ ಉದಾಹರಣೆಯಾಗಿದೆ. ಈ ರೀತಿಯಾದ ಕರ್ತವ್ಯ ಲೋಪವನ್ನು ಸಹಿಸಲಾಗದು” ಎಂದು ಪೀಠ ಆದೇಶದಲ್ಲಿ ದಾಖಲಿಸಿದೆ.

“ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೂಚನೆ ನೀಡಿದ ತಕ್ಷಣ ಪೊಲೀಸ್ ಅಧಿಕಾರಿಗಳು ಕಾನೂನು ಪ್ರಕಾರ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿಬೇಕು. ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರ್ದೇಶನ ನೀಡಿದ ಐದೂವರೆ ತಿಂಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ಈ ಬೆಳವಣಿಗೆ ಪೊಲೀಸ್ ಇನ್‌ಸ್ಪೆಕ್ಟರ್‌ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿ ಕಾರಣ” ಎಂದು ಪೀಠವು ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

ಘಟನೆಗೆ ಕಾರಣವಾದ ಅಧಿಕಾರಿ ಕೆ ವೈ ಪ್ರವೀಣ್ ಅವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಕಡತವು ನಾಪತ್ತೆಯಾಗಿತ್ತು. ಹೀಗಾಗಿ, ಪ್ರಕರಣ ದಾಖಲಿಸಲು ವಿಳಂಬವಾಗಿದೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಅಂದ ಮಾತ್ರಕ್ಕೆ ಪ್ರಕರಣವನ್ನು ಕೈ ಬಿಡುವುದಕ್ಕೆ ಸಾಧ್ಯವಿಲ್ಲ. ಪೊಲೀಸ್ ಇಲಾಖೆಯ ಅಫಿಡವಿಟ್‌ನಲ್ಲಿ ತಿಳಿಸಿರುವಂತೆ ಅಧಿಕಾರಿಯ ಕರ್ತವ್ಯಲೋಪ ಒಪ್ಪಿಕೊಂಡಂತಾಗಿದೆ. ಹೀಗಾಗಿ, ಪ್ರವೀಣ್‌ ವಿರುದ್ಧ ಇಲಾಖಾವಾರು ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿ, ಅರ್ಜಿ ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಕರಣದ ಆರೋಪಿ ವಿನಾಯಕ ಮತ್ತು ಅರ್ಜಿದಾರ ಪ್ರಕಾಶ್‌ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಿವಿಲ್ ದಾವೆ ವಿಚಾರಣೆ ಹಂತದಲ್ಲಿದೆ. ಈ ನಡುವೆ ಆರೋಪಿ 2021ರ ಮಾರ್ಚ್ 26 ರಂದು ಅರ್ಜಿದಾರರ ಮನೆ ಬಾಗಿಲನ್ನು ಮುರಿದು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದರು ಎನ್ನಲಾಗಿದೆ.

Also Read
[ಪಿಎಸ್‌ಐ ಹಗರಣ] ಅಮೃತ್‌ ಪೌಲ್‌ ಜಾಮೀನು ಆದೇಶ ಕಾಯ್ದಿರಿಸಿದ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ಈ ಕುರಿತು ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಸೂಚನೆ ನೀಡುವಂತೆ ಕೋರಿ ಅರ್ಜಿದಾರ ಪ್ರಕಾಶ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2022 ಮಾರ್ಚ್ 4 ರಂದು ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವಂತೆ ಕಾಟನ್ ಪೇಟೆ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತ್ತು. ಈ ಸಂಬಂಧ ಆದೇಶದ ಪ್ರತಿಯನ್ನು 2022ರ ಮೇ 4 ರಂದು ಸ್ವೀಕರಿಸಿದ್ದ ಕಾಟನ್ ಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ. ಮತ್ತೆ ಅರ್ಜಿ ವಿಚಾರಣೆಗೆ ಬಂದ ಸಂದರ್ಭದಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ನೆನಪು ಮಾಡಿತ್ತು. ಆದರೂ ಪ್ರಕರಣ ದಾಖಲಿಸಿರಲಿಲ್ಲ. ಇದಾದ ಸುಮಾರು ಐದೂವರೆ ತಿಂಗಳ ಬಳಿಕ ಪ್ರಕರಣ ದಾಖಲಿಸಲಾಗಿತ್ತು.

ಈ ಸಂಬಂಧ ಅಫಿಡವಿಟ್‌ ಸಲ್ಲಿಸಿದ್ದ ಪೊಲೀಸ್ ಇಲಾಖೆಯು 2022ರ ಮೇ 4 ರಂದು ನ್ಯಾಯಾಲಯದ ಸೂಚನೆ ಬಂದಿದ್ದರೂ, ಕಡತ ಇನ್‌ಸ್ಪೆಕ್ಟರ್ ಟೇಬಲ್‌ನಿಂದ ನಾಪತ್ತೆಯಾಗಿತ್ತು. ಇದೀಗ ಕಡತ ಪತ್ತೆಯಾಗಿದ್ದು ತಕ್ಷಣ ಪ್ರಕರಣ ದಾಖಲಿಸಲಾಗಿದೆ ಎಂದು ವಿಳಂಬಕ್ಕೆ ಸಬೂಬು ನೀಡಿತ್ತು. ಅಲ್ಲದೆ, ಇದಕ್ಕೆ ಕಾರಣವಾದ ಪೊಲೀಸ್ ಇನ್‌ಸ್ಪೆಕ್ಟರ್‌ರನ್ನು ಈಗಾಗಲೇ ಅಮಾನತ್ತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಬೆಳವಣಿಗೆಗಳು ಮರುಕಳಿಸುವುದಿಲ್ಲ ಎಂದು ವಿವರಿಸಿತ್ತು.

Related Stories

No stories found.
Kannada Bar & Bench
kannada.barandbench.com