ಭ್ರೂಣ ಲಿಂಗ ಪತ್ತೆ ಆರೋಪದ ಕುರಿತು ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನ (ನಿಯಂತ್ರಣ ಮತ್ತು ದುರ್ಬಳಕೆ ತಡೆ) ಕಾಯಿದೆ 1994ರ ಅಡಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಧಿಸೂಚಿಸಿರುವ ಸಕ್ಷಮ ಪ್ರಾಧಿಕಾರ (ಅಧಿಕಾರಿ) ದಾಖಲಿಸಿದ ದೂರುಗಳನ್ನು ಮಾತ್ರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಪುನರುಚ್ಚರಿಸಿದೆ.
ಗೋಕಾಕ್‌ನ ಶ್ರೀ ಧೋಂಡಿಬಾ ಅಣ್ಣ ಜಾಧವ್ ಸ್ಮಾರಕ ಆಸ್ಪತ್ರೆ ಹಾಗೂ ವೈದ್ಯೆ ಪದ್ಮ ನಿತಿನ್ ಜಾಧವ್ ಅವರು ಸಲ್ಲಿಸಿದ್ದ ಕ್ರಿಮಿನಲ್ ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಮೇಲಿನಂತೆ ಆದೇಶ ಮಾಡಿತು.
ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನ (ನಿಯಂತ್ರಣ ಮತ್ತು ದುರ್ಬಳಕೆ ತಡೆ) ಕಾಯಿದೆಯ ಸೆಕ್ಷನ್ 17(2) ಮತ್ತು ಕಾಯಿದೆ ಅಡಿ ಸೂಕ್ತ ಪ್ರಾಧಿಕಾರವನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪರಿಶೀಲಿಸಿದ ಹೈಕೋರ್ಟ್ ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.
ಆಯಾ ಜಿಲ್ಲೆಗಳ ಉಪ ವಿಭಾಗಾಧಿಕಾರಿಗಳು ಭ್ರೂಣ ಲಿಂಗ ಪತ್ತೆ ಆರೋಪದ ಕುರಿತು ಕಾಯಿದೆ ಅಡಿ ದೂರು ದಾಖಲಿಸಬೇಕಾದ ಸಕ್ಷಮ ಪ್ರಾಧಿಕಾರ (ಅಧಿಕಾರಿ) ಆಗಿರುತ್ತಾರೆ. ಸೆಕ್ಷನ್ 28ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರ ದಾಖಲಿಸುವ ದೂರು ಆಧರಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜ್ಞೇಯ (ಕಾಗ್ನಿಜೆನ್ಸ್) ತೆಗೆದುಕೊಳ್ಳುವುದು ಕಡ್ಡಾಯ. ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ತಾಲೂಕು ಆರೋಗ್ಯ ಅಧಿಕಾರಿ ದೂರು ದಾಖಲಿಸಿರುವುದು ಕಾನೂನುಬಾಹಿರ ಕ್ರಮವಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧ ಗೋಕಾಕ್ ಪ್ರಧಾನ ಸಿವಿಲ್ ಮತ್ತು ಜೆಎಫ್‌ಎಂಸಿ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ರದ್ದುಪಡಿಸಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರು ಸಲ್ಲಿಸಿದ್ದ ಮನವಿಯಲ್ಲಿ ಭ್ರೂಣ ಲಿಂಗ ಪತ್ತೆ ನಿಷೇಧಿಸುವ ಪ್ರಸವ ಪೂರ್ವ ಲಿಂಗ ಪತ್ತೆ ತಂತ್ರಜ್ಞಾನ (ನಿಯಂತ್ರಣ ಮತ್ತು ದುರ್ಬಳಕೆ ತಡೆ) ಕಾಯಿದೆ 1994ರ ಅಡಿ ದಾಖಲೆಗಳನ್ನು ಆಸ್ಪತ್ರೆಯಲ್ಲಿ ನಿರ್ವಹಣೆ ಮಾಡಿಲ್ಲ. ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವ ಉಪಕರಣಗಳನ್ನು ಅಳವಡಿಸಲಾಗಿದೆ ಎಂಬ ಆರೋಪ ಸಂಬಂಧ ಗೋಕಾಕಿನ ತಾಲ್ಲೂಕು ಆರೋಗ್ಯ ಅಧಿಕಾರಿ ತಮ್ಮ ವಿರುದ್ದ ಕಾಯಿದೆಯ ಸೆಕ್ಷನ್ 28ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಆ ದೂರು ಆಧರಿಸಿ ಗೋಕಾಕ್ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಸಂಜ್ಞೇಯ ಪರಿಗಣನೆಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ಆದರೆ, ಪ್ರಕರಣ ಸಂಬಂಧ ತಪಾಸಣೆ ನಡೆಸಲು ತಾಲ್ಲೂಕು ಆರೋಗ್ಯಾಧಿಕಾರಿಗೆ ಅಧಿಕಾರ ಇಲ್ಲ. ಕಾಯಿದೆ ಅಡಿ ದೂರು ದಾಖಲಿಸಲು ಅವರು ಸಕ್ಷಮ ಪ್ರಾಧಿಕಾರದ ಅಧಿಕಾರಿಯೂ ಅಲ್ಲ. ಆದ್ದರಿಂದ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.