ಮಹಾರಾಷ್ಟ್ರ ರಾಜಕೀಯ: ಸಾಂವಿಧಾನಿಕ ಪೀಠಕ್ಕೆ ಪ್ರಕರಣ ವರ್ಗಾಯಿಸುವ ಕುರಿತು ನಿರ್ಧರಿಸಲಿರುವ ಸುಪ್ರೀಂ ಕೋರ್ಟ್

ನಂತರ ನ್ಯಾಯಾಲಯ, ಠಾಕ್ರೆ ಬಣಕ್ಕೆ ಅಫಿಡವಿಟ್‌ ಸಲ್ಲಿಸಲು ಅವಕಾಶ ನೀಡುವಂತೆ ಚಿಹ್ನೆ ಯಾರಿಗೆ ಸೇರುತ್ತದೆ ಎಂಬುದರ ಕುರಿತು ಅಷ್ಟರೊಳಗೆ ನಿರ್ಧಾರ ಕೈಗೊಳ್ಳದಂತೆ ಅಥವಾ ಮುಂಜಾಗ್ರತಾ ಕ್ರಮಕ್ಕೆ ಮುಂದಾಗದಂತೆ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿತು.
ಮಹಾರಾಷ್ಟ್ರ ರಾಜಕೀಯ: ಸಾಂವಿಧಾನಿಕ ಪೀಠಕ್ಕೆ ಪ್ರಕರಣ ವರ್ಗಾಯಿಸುವ ಕುರಿತು ನಿರ್ಧರಿಸಲಿರುವ ಸುಪ್ರೀಂ ಕೋರ್ಟ್

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವುದನ್ನು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ, ಬಂಡಾಯ ಶಾಸಕರ ಅನರ್ಹತೆ ಹಾಗೂ ಶಿವಸೇನೆಯ ಚಿಹ್ನೆ ಮೇಲಿನ ಅಧಿಕಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠದಲ್ಲಿ ನಡೆಯಿತು.

ಕಕ್ಷಿದಾರರ ವಾದ ಆಲಿಸಿದ ನ್ಯಾಯಾಲಯ “ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠಕ್ಕೆ ಪ್ರಕರಣ ಉಲ್ಲೇಖಿಸಬೇಕೆ ಎಂಬುದನ್ನು ನಾವು ನಿರ್ಧರಿಸುತ್ತೇವೆ.

ಕಕ್ಷಿದಾರರ ವಾದ ಆಲಿಸಿದ ನಂತರ ನ್ಯಾಯಾಲಯ "ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವಿಷಯವನ್ನು ಉಲ್ಲೇಖಿಸಬೇಕೆ ಎಂದು ನಾವು ನಿರ್ಧರಿಸುತ್ತೇವೆ. ಚುನಾವಣಾ ಆಯೋಗ ಉದ್ಧವ್ ಬಣದ ಪ್ರಶ್ನೆಗಳಿಗೆ ಉತ್ತರಿಸಲು ನಿರ್ಧರಿಸಿದೆ [ಶಿವಸೇನೆಯ ಚಿಹ್ನೆ ತನಗೆ ಬೇಕೆಂಬ ಶಿಂಧೆ ಬಣದ ಕೋರಿಕೆ ಕುರಿತು] ಅವರು ಸಮಯ ಕೋರಲಿದ್ದಾರೆ. ಆಯೋಗಕ್ಕೆ ಸೂಕ್ತವಾಗುವಂತೆ ವಿಚಾರಣೆ ದಿನಾಂಕ ಮುಂದೂಡಿ. ಸೋಮವಾರದ ಹೊತ್ತಿಗೆ ನಾವು (ಸಾಂವಿಧಾನಿಕ ಪೀಠಕ್ಕೆ ಪ್ರಕರಣ ವರ್ಗಾಯಿಸುವ ಕುರಿತು) ನಿರ್ಧಾರ ಕೈಗೊಳ್ಳುತ್ತೇವೆ” ಎಂದು ಹೇಳಿತು.

ಶಿಂಧೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು, ‘ಸದಸ್ಯರೊಬ್ಬರು ಪಕ್ಷದ ನಿಲುವಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂಬ ತೀರ್ಮಾನಕ್ಕೆ ಸ್ಪೀಕರ್‌ ಬಂದರೆ ಮಾತ್ರ ಸಂವಿಧಾನದ ಹತ್ತನೇ ಶೆಡ್ಯೂಲ್‌ ಅಡಿಯಲ್ಲಿ ಅನರ್ಹಗೊಳಿಸಲಾಗುತ್ತದೆ” ಎಂದರು. ಮುಂದುವರೆದು
“ಹಾಗಾದರೆ ಅರ್ಜಿಗಳಲ್ಲಿ ಲೋಪ ಇದೆಯೇ ಅಥವಾ ತಪ್ಪಾಗಿ ಗ್ರಹಿಸಲಾಗಿದೆಯೇ ಎಂಬುದನ್ನು ನೋಡಬೇಕು. ಪಕ್ಷದ ನಿರ್ದೇಶನದ ವಿರುದ್ಧ ಮತ ಚಲಾಯಿಸುವುದನ್ನು ಅನೂರ್ಜಿತವೆಂದು ಪರಿಗಣಿಸಬಹುದೇ? ಆ ಕ್ರಮ ಕಾನೂನುಬಾಹಿರವೇ ಅಥವಾ ಕಾನೂನುಬದ್ಧವಾದ ಕ್ರಮವೇ?" ಎಂದು ಪ್ರಶ್ನಿಸಿದರು.

Also Read
ಮಹಾರಾಷ್ಟ್ರ ಸಿಎಂ ಆಗಿ ಶಿಂಧೆ ನೇಮಕ ಮಾಡಿದ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕದತಟ್ಟಿದ ಉದ್ಧವ್‌ ಬಣ

ಆಗ ಸಿಜೆಐ ರಮಣ “ ಹಾಗಾದರೆ ವಿಪ್‌ನಿಂದೇನು ಪ್ರಯೋಜನ? ಪಕ್ಷಾಂತರ ತಡೆ ಕಾಯಿದೆ ಆ ವಿಚಾರಗಳಿಗೆ ಮಾತ್ರ ಅನ್ವಯವಾಗುತ್ತದೆಯೇ? ಎಂದು ಕೇಳಿದರು. ಈ ಹಂತದಲ್ಲಿ ಸಾಳ್ವೆ "ಒಬ್ಬ ವ್ಯಕ್ತಿ ಭ್ರಷ್ಟಾಚಾರದಿಂದ ಚುನಾಯಿತನಾಗಿದ್ದಾನೆ ಎಂದು ಭಾವಿಸೋಣ, ಅವನು ಅನರ್ಹನಾಗುವವರೆಗೆ ಅವನು ಮಾಡುವುದೆಲ್ಲವೂ ಕಾನೂನುಬದ್ಧವಾಗಿರುತ್ತದೆ. ಪಕ್ಷಾಂತರ ವಿರೋಧಿ ಕಾನೂನು ಸಮತೋಲನ ಸಾಧಿಸಲಿಕ್ಕಾಗಿ ಇದೆ" ಎಂದು ಸಾಳ್ವೆ ಉತ್ತರಿಸಿದರು.

ಮುಂದುವರೆದು ಅವರು "ಹೈಕೋರ್ಟ್ ಇದನ್ನು ಪರಿಗಣಿಸುತ್ತದೆಯೇ ಎಂಬುದು ನಮ್ಮ ವಾದವಾಗಿದೆ... ಹಾಗಾದಲ್ಲಿ ಆಡಳಿತ ಪಕ್ಷವು ತನಗೆ ಮತ್ತು ಅವರ ಆಡಳಿತಕ್ಕೆ ಸಮಸ್ಯೆಯಿರುವ ಪ್ರತಿಯೊಂದು ಪ್ರಕರಣದಲ್ಲಿಯೂ ಸ್ಪೀಕರ್ ವಿರುದ್ಧ ಪಕ್ಷಪಾತದಂತಹ ಸಮಸ್ಯೆಗಳೊಂದಿಗೆ ಬರುತ್ತಾರೆ" ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ "ಈ ನ್ಯಾಯಾಲಯ ಮತ್ತು ಹೈಕೋರ್ಟ್ ಇದನ್ನು ( ಈ ಪ್ರಕರಣಗಳನ್ನು) ಆಲಿಸಬಾರದು ಎಂದು ನೀವು ಹೇಳುತ್ತೀರಿ, ಅದೂ ನೀವೇ ಮೊದಲು ನಮ್ಮನ್ನು ಸಂಪರ್ಕಿಸಿದ (ಸುಪ್ರೀಂ ಕಟಕಟೆಗೆ ಬಂದ) ನಂತರ" ಎಂದರು. ಆ ಮೂಲಕ ಸಾಳ್ವೆಯವರ ವಾದದಲ್ಲಿನ ವೈರುಧ್ಯದತ್ತ ಬೆರಳು ಮಾಡಿದರು.

ಠಾಕ್ರೆ ಬಣವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಮಸ್ಯೆಗಳನ್ನು ಸಂವಿಧಾನ ಪೀಠಕ್ಕೆ ಉಲ್ಲೇಖಿಸುವ ಅಗತ್ಯವಿಲ್ಲ ಎಂದು ವಾದಿಸಿದರು.ಆಗ ಸಿಜೆಐ "ನಿಜವಾದ ರಾಜಕೀಯ ಪಕ್ಷ ಎಂದು ಎರಡು ಗುಂಪುಗಳಿವೆ ಎಂಬುದಾಗಿ ಭಾವಿಸೋಣ. ರಾಜಕೀಯ ಪಕ್ಷದ ಸಾಮಾನ್ಯ ಸದಸ್ಯರು ಮೂಲ ರಾಜಕೀಯ ಪಕ್ಷ ಯಾರೆಂದು ಗುರುತಿಸಲು ಸಾಧ್ಯವಿಲ್ಲ" ಎಂದು ಹೇಳಿದರು.

ಇದಕ್ಕೆ ಸಿಬಲ್ "ಅವರು [ಶಿಂಧೆ ಬಣ] ಪಕ್ಷದ 50 ಸದಸ್ಯರಲ್ಲಿ 40 ಸದಸ್ಯರ ಬೆಂಬಲ ಹೊಂದಿದ್ದಾರೆ. ಹೀಗಾಗಿ ತಮ್ಮದು ನಿಜವಾದ ಶಿವಸೇನೆ ಎಂದು ಹೇಳುತ್ತಾರೆ. ಈಗ 40 ಮಂದಿಯನ್ನು ಅನರ್ಹಗೊಳಿಸಿದರೆ, ಅದರಲ್ಲಿ ಏನು ಉಳಿದೀತು? ಚುನಾವಣಾ ಆಯೋಗ ಒಂದಲ್ಲಾ ಒಂದು ರೀತಿಯಲ್ಲಿ ನಿರ್ಧಾರ ಕೈಗೊಂಡರೆ, ಈ ಪಕ್ಷಾಂತರದಿಂದ ಏನಾಗುತ್ತದೆ?" ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವ, “"ಈ ನ್ಯಾಯಾಲಯ ನಿರ್ಧರಿಸುವವರೆಗೆ, ಚುನಾವಣಾ ಆಯೋಗ ಈ ಸಮಸ್ಯೆಯನ್ನು ಹೇಗೆ ನಿರ್ಧರಿಸಲು ಸಾಧ್ಯ, ನಂತರ ಆಯೋಗವು ಈ ಪ್ರಕ್ರಿಯೆಗಳು ನಿಷ್ಫಲಕಾರಿ ಎಂದು ಹೇಳಬಲ್ಲದೆ?" ಎಂದು ಕೇಳಿದರು.

ಚುನಾವಣಾ ಆಯೋಗದ ಪರ ಹಾಜರಾದ ಹಿರಿಯ ವಕೀಲ ಅರವಿಂದ ದಾತಾರ್, "ಅವರು [ಬಂಡಾಯ ಶಾಸಕರು] ಅನರ್ಹಗೊಂಡರೆ ಅವರನ್ನು ಸದನದಿಂದ ಅನರ್ಹಗೊಳಿಸಲಾಗುತ್ತದೆಯೇ ಹೊರತು

ಅವರನ್ನು ಪಕ್ಷದಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ 324 ನೇ ವಿಧಿ ಸ್ಪಷ್ಟವಾಗಿದ್ದು ಈ ಕುರಿತ ತೀರ್ಪುಗಳು ಬಂದಿವೆ. ಇದು ರಾಜಕೀಯ ವಿಷಯವಲ್ಲ. ಹತ್ತನೇ ಶೆಡ್ಯೂಲ್ ಇದನ್ನು ನಿಷೇಧಿಸಲು ಸಾಧ್ಯವಿಲ್ಲ. ಪುರಾವೆಗಳನ್ನು ದೊರೆತ ನಂತರವೇ ಪಕ್ಷದ ಚಿಹ್ನೆಯನ್ನು ಯಾರು ಪಡೆಯಬಹುದೆಂದು ಆಯೋಗ ನಿರ್ಧರಿಸಲು ಸಾಧ್ಯವಾಗುತ್ತದೆ" ಎಂದರು.

ನಂತರ ನ್ಯಾಯಾಲಯ, ಠಾಕ್ರೆ ಬಣಕ್ಕೆ ಅಫಿಡವಿಟ್‌ ಸಲ್ಲಿಸಲು ಅವಕಾಶ ನೀಡುವಂತೆ ಚಿಹ್ನೆ ಯಾರಿಗೆ ಸೇರುತ್ತದೆ ಎಂಬುದರ ಕುರಿತು ಅಷ್ಟರೊಳಗೆ ನಿರ್ಧಾರ ಕೈಗೊಳ್ಳದಂತೆ ಅಥವಾ ಮುಂಜಾಗ್ರತಾ ಕ್ರಮಕ್ಕೆ ಮುಂದಾಗದಂತೆ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿತು.

ಬಂಡಾಯ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಗಳು ಮತ್ತು ಶಿವಸೇನೆ ಚಿಹ್ನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮುಂದಿರುವ ಪ್ರಕ್ರಿಯೆಗಳನ್ನು ವಿಚಾರಣೆ ನಡೆಸಬಾರದು ಎಂದು ಶಿಂಧೆ ಬಣ ಮಾಡಿದ ವಾದಗಳಿಗೆ ನ್ಯಾಯಾಲಯವು ಬುಧವಾರ ಪ್ರತಿಕೂಲವಾದ ಅಭಿಪ್ರಾಯವನ್ನು ತೆಗೆದುಕೊಂಡಿತ್ತು.,

Related Stories

No stories found.
Kannada Bar & Bench
kannada.barandbench.com