
ರಾಜ್ಯದಲ್ಲಿ ಸ್ಪಾ ಮತ್ತು ಮಸಾಜ್ ಕೇಂದ್ರಗಳನ್ನು ನಿಯಂತ್ರಿಸಲು ಮಾರ್ಗಸೂಚಿ ರೂಪಿಸುವುದಕ್ಕಾಗಿ 12 ಸದಸ್ಯರ ಸಮಿತಿ ರಚಿಸಿರುವುದಾಗಿ ಮಹಾರಾಷ್ಟ್ರ ಸರ್ಕಾರ ಮಾರ್ಚ್ 21ರಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
ಈ ಮಾರ್ಗಸೂಚಿಗಳು ಪರವಾನಗಿ ಕಾರ್ಯವಿಧಾನಗಳು, ಕಾರ್ಯಾಚರಣೆಯ ಮಾನದಂಡಗಳು ಮತ್ತು ವಿರುದ್ಧ ಲಿಂಗೀಯರು ನಡೆಸುವ ಮಸಾಜ್ ರೀತಿಯ ವಿಚಾರಗಳನ್ನು ಒಳಗೊಂಡಿದ್ದು, ಕಾರ್ಮಿಕರ ಹಕ್ಕುಗಳು ಮತ್ತು ಘನತೆರಕ್ಷಿಸುವಾಗ ಕಾನೂನು ಜಾರಿ ವಿಚಾರವನ್ನು ಖಾತ್ರಿಪಡಿಸಿಕೊಳ್ಳುವ ಗುರಿ ಹೊಂದಿವೆ.
ಜೂನ್ 10ರೊಳಗೆ ಮಾರ್ಗಸೂಚಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ಡೇರೆ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ನಿರ್ದೇಶಿಸಿತು.
ಮಾರ್ಗಸೂಚಿಗಳನ್ನು ಅಂತಿಮಗೊಳಿಸುವ ಮೊದಲು ಸಮಿತಿಯು ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಮಾರ್ಚ್ 21ರಂದು ರಚಿಸಲಾದ ಸಮಿತಿಯಲ್ಲಿ ರಾಜ್ಯದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸದಸ್ಯರಾಗಿ ಇರಲಿದ್ದಾರೆ. ದೆಹಲಿ ಸರ್ಕಾರ ಈಗಾಗಲೇ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಪರವಾನಗಿ ನೀತಿಯನ್ನು ಅಭಿವೃದ್ಧಿಪಡಿಸುವುದು, ಕಾರ್ಯಾಚರಣೆಯ ಮಾನದಂಡಗಳನ್ನು ನಿಗದಿಪಡಿಸುವುದು ಮತ್ತು ವಿರುದ್ಧ ಲಿಂಗೀಯರು ನಡೆಸುವ ಮಸಾಜ್‌ಗಳಂತಹ ವಿವಾದಾತ್ಮಕ ಸಮಸ್ಯೆಗಳನ್ನು ಪರಿಹರಿಸುವುದು ಸಮಿತಿಯ ಗುರಿಯಾಗಿರುತ್ತದೆ.
1956ರ ಅನೈತಿಕ ವ್ಯಾಪಾರ (ತಡೆ) ಕಾಯಿದೆಯಡಿ ತಮ್ಮ ವ್ಯವಹಾರಗಳ ಮೇಲೆ ಪೊಲೀಸರು ನಡೆಸಿದ ದಾಳಿಗಳು ಕಿರುಕುಳದಾಯಕವಾಗಿದ್ದು ಜೀವನೋಪಾಯ ಮತ್ತು ಘನತೆಯ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿವೆ ಎಂದು ಆರೋಪಿಸಿ 11 ಮಸಾಜ್ ಥೆರಪಿಸ್ಟ್‌ಗಳು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಸ್ಪಾಗಳು ಮತ್ತು ಮಸಾಜ್ ಕೇಂದ್ರಗಳನ್ನು ನಿಯಂತ್ರಿಸಲು ಮತ್ತು ಅನಗತ್ಯ ಪೊಲೀಸ್ ಹಸ್ತಕ್ಷೇಪ ತಡೆಯಲು ಮಾರ್ಗಸೂಚಿ ಜಾರಿಗೆ ತರುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.