ವೇಶ್ಯಾಗೃಹದಲ್ಲಿ ಸಿಕ್ಕ ಮಾತ್ರಕ್ಕೆ ವ್ಯಕ್ತಿಯನ್ನು ದಂಡನೀಯ ಪರಿಣಾಮಗಳಡಿ ತರಲಾಗದು: ಮದ್ರಾಸ್ ಹೈಕೋರ್ಟ್

ವೇಶ್ಯಾಗೃಹದಲ್ಲಿ ಅರ್ಜಿದಾರ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂಬುದನ್ನು ಸಾಬೀತುಪಡಿಸುವ ಯಾವುದೇ ಆಧಾರ ಇಲ್ಲ ಮತ್ತು ರಕ್ಷಿಸಲಾದ ಮಹಿಳೆಯರು ಕೂಡ ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ ಎಂದ ನ್ಯಾಯಾಲಯ.
ವೇಶ್ಯಾಗೃಹದಲ್ಲಿ ಸಿಕ್ಕ ಮಾತ್ರಕ್ಕೆ ವ್ಯಕ್ತಿಯನ್ನು ದಂಡನೀಯ ಪರಿಣಾಮಗಳಡಿ ತರಲಾಗದು: ಮದ್ರಾಸ್ ಹೈಕೋರ್ಟ್
A1
Published on

ಒಬ್ಬ ವ್ಯಕ್ತಿ ವೇಶ್ಯಾಗೃಹ ಎಂದು ಆರೋಪಿಸಲಾದ ಸ್ಥಳದಲ್ಲಿದ್ದ ಮಾತ್ರಕ್ಕೆ ಅವನನ್ನು ದಂಡನೀಯ ಪರಿಣಾಮಗಳಡಿ ತರಲಾಗದು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಉದಯ ಕುಮಾರ್ ಮತ್ತು ಸರ್ಕಾರದ ನಡುವಣ ಪ್ರಕರಣ].

ವೇಶ್ಯಾಗೃಹ ಎನ್ನಲಾದ ಮಸಾಜ್‌ ಕೇಂದ್ರದವೊಂದರ ಮೇಲೆ ದಾಳಿ ನಡೆಸಿದಾಗ ಬಂಧಿತರಾಗಿದ್ದ ಉದಯ್‌ ಕುಮಾರ್‌ ಎಂಬುವವರ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸುವ ವೇಳೆ ನ್ಯಾ. ಎನ್ ಸತೀಶ್ ಕುಮಾರ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

“ವೇಶ್ಯಾಗೃಹ ಎಂದು ಪ್ರತಿವಾದಿಗಳು ಆರೋಪಿಸಿರುವ, ಯಾರೋ ನಡೆಸುತ್ತಿರುವ ಸ್ಥಳದಲ್ಲಿ ಅರ್ಜಿದಾರ ಇದ್ದ ಮಾತ್ರಕ್ಕೆ ಅವರನ್ನು ದಂಡನೀಯ ಪರಿಣಾಮಗಳಡಿ ಒಳಪಡಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

Also Read
ಬಾಡಿಗೆ ಮನೆ ವೇಶ್ಯಾವಾಟಿಕೆ; ಮಾಲೀಕನಿಗೆ ಗೊತ್ತಿಲ್ಲದಿದ್ದರೆ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಲಾಗದು: ಹೈಕೋರ್ಟ್‌

ವೇಶ್ಯಾಗೃಹದಲ್ಲಿ ಅರ್ಜಿದಾರ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂಬುದನ್ನು ಸಾಬೀತುಪಡಿಸುವ ಯಾವುದೇ ಆಧಾರ ಇಲ್ಲ ಮತ್ತು ರಕ್ಷಿಸಲಾದ ಮಹಿಳೆಯರು ಕೂಡ ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಅರ್ಜಿದಾರರ ಕೃತ್ಯಗಳು ಲೈಂಗಿಕ ಕಾರ್ಯಕರ್ತೆಯರ ಮೇಲೆ ಒತ್ತಡ ಹೇರುತ್ತವೆ ಎನ್ನಲಾಗದು ಮತ್ತು ಅರ್ಜಿದಾರರ ವಿರುದ್ಧ ಎಫ್‌ಐಆರ್ ಮುಂದುವರೆಸುವುದು ಯಾವುದೇ ಉದ್ದೇಶ ಈಡೇರಿಸದ ನಿರರ್ಥಕ ಕಸರತ್ತು ಎಂದು ನ್ಯಾಯಾಲಯ ವಿವರಿಸಿದೆ.

ಇದೇ ವೇಳೆ, ನ್ಯಾ. ಕುಮಾರ್‌ ಅವರು ಬುದ್ಧದೇವ್‌ ಕರ್ಮಾಸ್ಕರ್‌ ವರ್ಸಸ್‌ ಪಶ್ಚಿಮ ಬಂಗಾಳ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಮಹತ್ವವನ್ನು ವಿವರಿಸಿದರು. ಆ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು, ಯಾವುದೇ ವೇಶ್ಯಾಗೃಹಗಳ ಮೇಲೆ ದಾಳಿ ನಡೆಸಿದ ವೇಳೆ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸಬಾರದು, ದಂಡ ವಿಧಿಸಬಾರದು, ಕಿರುಕುಳ ನೀಡಬಾರದು ಅಥವಾ ಬಲಿಪಶು ಮಾಡಬಾರದು ಎಂದಿದ್ದು ವೇಶ್ಯಾಗೃಹವನ್ನು ನಡೆಸುವುದು ಮಾತ್ರವೇ ಕಾನೂನುಬಾಹಿರ ಎಂದಿದೆ ಎಂಬುದಾಗಿ ತಿಳಿಸಿದರು.

Kannada Bar & Bench
kannada.barandbench.com