ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ: ಮಹಾರಾಷ್ಟ್ರ ಕ್ಷಮಾದಾನ ನೀತಿ ಅಪರಾಧಿಗಳ ತ್ವರಿತ ಬಿಡುಗಡೆಗೆ ಸಹಾಯಕವಾಗದು

ಅತೀವ ಹಿಂಸಾಚಾರಕ್ಕೆ ತುತ್ತಾದ ಮಹಿಳೆಯರ ಪ್ರಕರಣಗಳನ್ನು 2008ರ ಕ್ಷಮಾದಾನ ನೀತಿ ಪ್ರತ್ಯೇಕವಾಗಿ ಗುರುತಿಸಿದ್ದು, ಅದರಂತೆ ಅಪರಾಧಿಗಳು 28 ವರ್ಷ ಶಿಕ್ಷೆ ಅನುಭವಿಸಿದ ನಂತರವೇ ಕ್ಷಮಾದಾನಕ್ಕೆ ಅರ್ಹರು.
ಸುಪ್ರೀಂ ಕೋರ್ಟ್ ಮತ್ತು ಬಿಲ್ಕಿಸ್ ಬಾನು
ಸುಪ್ರೀಂ ಕೋರ್ಟ್ ಮತ್ತು ಬಿಲ್ಕಿಸ್ ಬಾನು

ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಜೈಲಿನಿಂದ ಅವಧಿಪೂರ್ವವಾಗಿ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದ ಬೆನ್ನಿಗೆ ಎಲ್ಲರ ಗಮನ ಮಹಾರಾಷ್ಟ್ರ ಕ್ಷಮಾದಾನ ನೀತಿಯತ್ತ ನೆಟ್ಟಿದೆ. ಅಪರಾಧಿಗಳ ಬಿಡುಗಡೆಗೆ ಮಹಾರಾಷ್ಟ್ರ ಕ್ಷಮಾದಾನ ನೀತಿ ಸಹಾಯ ಮಾಡುತ್ತದೆಯೇ ಎಂಬುದು ಕುತೂಹಲದ ಸಂಗತಿಯಾಗಿದೆ.

ಬಿಲ್ಕಿಸ್‌ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಕೊಲೆ ಮಾಡಿದ್ದ 11 ಮಂದಿಗೆ ಗ್ರೇಟರ್ ಮುಂಬೈ ವಿಶೇಷ ನ್ಯಾಯಾಲಯ 2008ರ ಜನವರಿ 21ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ತೀರ್ಪಿನ ಪ್ರಕಾರ ಕ್ಷಮಾದಾನ ಪಡೆಯುವ ಮೊದಲು ಈ ಅಪರಾಧಿಗಳು ಕನಿಷ್ಠ 18 ವರ್ಷ ಶಿಕ್ಷೆ ಅನುಭವಿಸಿರಬೇಕು. ಇದರರ್ಥ ಎಲ್ಲಾ ಹನ್ನೊಂದು ಅಪರಾಧಿಗಳು 2026ರಲ್ಲಿ ಮಾತ್ರ ಕ್ಷಮಾದಾನ ಪಡೆಯಲು ಅರ್ಹರಾಗಿರುತ್ತಾರೆ.

ಅಲ್ಲದೆ ಅತೀವ ಹಿಂಸೆಗೆ ತುತ್ತಾದ ಮಹಿಳೆಯರ ಪ್ರಕರಣಗಳನ್ನು 2008ರ ಮಹಾರಾಷ್ಟ್ರ ಕ್ಷಮಾದಾನ ನೀತಿ ಪ್ರತ್ಯೇಕವಾಗಿ ಗುರುತಿಸಿದ್ದು, ಇದರ ಅಡಿಯಲ್ಲಿ ಅಪರಾಧಿಗಳು 28 ವರ್ಷಗಳ ಶಿಕ್ಷೆ ಅನುಭವಿಸಿದ ನಂತರವಷ್ಟೇ ಕ್ಷಮಾದಾನಕ್ಕೆ ಅರ್ಹರಾಗಿರುತ್ತಾರೆ. ಈ ಕಲಮು ಪ್ರಕರಣದ ಹನ್ನೊಂದು ಅಪರಾಧಿಗಳಿಗೆ ಅನ್ವಯವಾಗುವ ಸಾಧ್ಯತೆಯಿದ್ದು ಕನಿಷ್ಠ ಇನ್ನೂ 12 ವರ್ಷಗಳ ಕಾಲ ಅಂದರೆ 2036ರವರೆಗೆ ಅವರು ಸೆರೆವಾಸ ಅನುಭವಿಸಬೇಕಾಗಬಹುದು.

2008ರ ನೀತಿಗೆ ಮೊದಲು, ಮಹಾರಾಷ್ಟ್ರದಲ್ಲಿ 1992 ರ ನೀತಿಯಡಿ ಕ್ಷಮಾದಾನ ನೀಡಲಾಗುತ್ತಿತ್ತು.

Also Read
ಬಿಲ್ಕಿಸ್ ಬಾನೊ ಪ್ರಕರಣ: ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶ ರದ್ದುಗೊಳಿಸಿದ ಸುಪ್ರೀಂ

ಯಾವ ನೀತಿ ಅನ್ವಯಿಸುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಧೀಶರು, 2008ರ ನೀತಿ ಅನ್ವಯಿಸಿದ್ದರು.

ಮತ್ತೊಂದೆಡೆ 1992ರ ನೀತಿ ಅನ್ವಯಿಸಿದರೂ ಕೂಡ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದ ಕೊಲೆಗಳಿಗಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವವರ ಪ್ರಕರಣಗಳಲ್ಲಿ ಕನಿಷ್ಠ 22 ವರ್ಷಗಳನ್ನು ಪೂರೈಸಿದ ನಂತರವೇ ವಿನಾಯಿತಿ ದೊರೆಯಲಿದ್ದು ಅಸಾಧಾರಣ ಹಿಂಸಾಚಾರ ಅಥವಾ ವಿಕೃತತೆಯನ್ನು ಒಳಗೊಂಡಿದ್ದರೆ ಕನಿಷ್ಠ ಶಿಕ್ಷೆಯ ಅವಧಿ 28 ವರ್ಷಗಳಾಗುತ್ತವೆ. ಈ ನೀತಿ ಅನ್ವಯ ಪ್ರಕರಣದ ಅಪರಾಧಿಗಳು 2030 ಅಥವಾ 2036ರ ನಂತರವಷ್ಟೇ ಬಿಡುಗಡೆಗೆ ಅರ್ಹರಾಗುತ್ತಾರೆ.

Also Read
ಬಿಲ್ಕಿಸ್ ಬಾನೊ ಪ್ರಕರಣದ 11 ಅಪರಾಧಿಗಳು 2 ವಾರದೊಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್‌ ಆದೇಶ

ನಿನ್ನೆ ಪ್ರಕಟವಾದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ʼಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಅಧಿಕಾರ ಕಸಿದುಕೊಂಡಿದ್ದು ಸರಿಯಲ್ಲ. ಅಪರಾಧಿಗಳಿಗೆ ಕ್ಷಮಾದಾನ ನೀಡುವ ಮನವಿಯನ್ನು ನಿರ್ಧರಿಸಲು ಗುಜರಾತ್‌ ಸಮರ್ಥವಾಗಿದೆ ಎಂದು ಘೋಷಿಸಿದ ಮೇ 2022ರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಗುಜರಾತ್ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಿತ್ತು. ಸಿಆರ್‌ಪಿಸಿ 437ನೇ ಸೆಕ್ಷನ್‌ ಪ್ರಕಾರ ಮಹಾರಾಷ್ಟ್ರವೇ ಸೂಕ್ತ ಸರ್ಕಾರ ಎಂದು ಗುಜರಾತ್ ಈ ಹಿಂದೆ ಸರಿಯಾಗಿ ವಾದಿಸಿತ್ತು. ಆದರೆ ಅದನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿದಾಗ ಗುಜರಾತ್ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದಿತ್ತು. ಮೇ 13, 2022ರ ತೀರ್ಪನ್ನು ತಿದ್ದುಪಡಿ ಮಾಡುವಂತೆ ಕೋರಿ ಗುಜರಾತ್ ಸರ್ಕಾರ ಏಕೆ ಮರುಪರಿಶೀಲನೆ ಸಲ್ಲಿಸಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಈ ಪ್ರಕರಣದಲ್ಲಿ ಬಿಡುಗಡೆ ಎಂಬುದು ಅಧಿಕಾರ ಮತ್ತು ನ್ಯಾಯವ್ಯಾಪ್ತಿಯಿಲ್ಲದ ಆದೇಶಗಳಿಂದಾಗಿದೆʼ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

[ಅಪರಾಧಿಗಳ ಕ್ಷಮಾದಾನ ಕುರಿತ ಮಹಾರಾಷ್ಟ್ರ ನೀತಿಯ ಪ್ರತಿ ಇಲ್ಲಿ ಲಭ್ಯ.]

Attachment
PDF
Bilkis Bano case 2008 Maharashtra Policy.pdf
Preview
Attachment
PDF
1992 Maharashtra policy (2).pdf
Preview

Related Stories

No stories found.
Kannada Bar & Bench
kannada.barandbench.com