ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು: ಗುರುವಾರದವರೆಗೆ ಆದೇಶದ ಅನುಷ್ಠಾನ ಬೇಡ ಎಂದ ಹೈಕೋರ್ಟ್

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಿ 2026ರ ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ಸಲ್ಲಿಸಿದ್ದಾರೆ.
Mahesh Shetty Thimarodi
Mahesh Shetty Thimarodi
Published on

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ‌ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಹೊರಡಿಸಲಾಗಿರುವ ಆದೇಶವನ್ನು ಗುರುವಾರದವರೆಗೆ (ಮಾರ್ಚ್ 26) ಅನುಷ್ಠಾನಗೊಳಿಸದಂತೆ ರಾಜ್ಯ ಸರ್ಕಾರ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮಧ್ಯಂತರ ನಿರ್ದೇಶನ ‌ನೀಡಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಿ 2026ರ ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ (ಮೂರನೇ ಬಾರಿ) ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಪುತ್ತೂರು ಉಪ ವಿಭಾಗಾಧಿಕಾರಿ, ಬಂಟ್ವಾಳ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಳ್ತಂಗಡಿ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ತಿಮರೋಡಿ ಪರ ವಕೀಲ ಎಂ ಆರ್‌ ಬಾಲಕೃಷ್ಣ ಅವರು “ಅರ್ಜಿದಾರರನ್ನು ಈ ಹಿಂದೆ 2025ರ ಸೆಪ್ಟೆಂಬರ್ 18ರಂದು ಹಾಗೂ ಡಿಸೆಂಬರ್ 16ರಂದು ನಿರ್ದಿಷ್ಟ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶಿಸಿದ್ದರು. ಈ ಎರಡೂ ಆದೇಶಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಎರಡು ಬಾರಿಯೂ ಪ್ರಕರಣವನ್ನು ಉಪ ವಿಭಾಗಾಧಿಕಾರಿಗೆ ಹಿಂದಿರುಗಿಸಿದ್ದ ಹೈಕೋರ್ಟ್, ಎಲ್ಲ ಅಂಶಗಳನ್ನು ಪರಿಶೀಲಿಸಿ ಹೊಸದಾಗಿ ಆದೇಶ ಮಾಡಲು ಸೂಚಿತ್ತು. ಇದೀಗ ಮೂರನೇ ಬಾರಿಗೆ ಗಡಿಪಾರು ಮಾಡಿ ಮಾರ್ಚ್ 13ರಂದು ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ಮಾಡಿದ್ದಾರೆ. ಅದನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ ಎಂದರು ವಿವರಿಸಿದರು.

Also Read
ರಾಯಚೂರು ಜಿಲ್ಲೆಗೆ ಗಡಿಪಾರು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಮಹೇಶ್‌ ಶೆಟ್ಟಿ ತಿಮರೋಡಿ

ಮುಂದುವರಿದು, ಅರ್ಜಿದಾರರ ಮೇಲೆ ಹಲವು ಪ್ರಕರಣಗಳು ದಾಖಲಾಗಿದೆ ಎಂಬ ಕಾರಣ ನೀಡಿ ಗಡಿಪಾರು ಮಾಡಲಾಗಿದೆ. ಆದರೆ, ಅರ್ಜಿದಾರರ ವಿರುದ್ಧ 26 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಹಲವು ಪ್ರಕರಣಗಳು 30 ವರ್ಷಗಳ ಹಿಂದೆ ದಾಖಲಾಗಿರುವ ಪ್ರಕರಣಗಳಾಗಿವೆ. ಇನ್ನೂ ಅನೇಕ ಪ್ರಕರಣಗಳು ಖುಲಾಸೆಯೊಂದಿಗೆ ಅಂತ್ಯಕಂಡಿದ್ದು, 2 ಪ್ರಕರಣಗಳಲ್ಲಿ ಬಿ ರಿಪೋರ್ಟ್‌ ಸಲ್ಲಿಕೆಯಾಗಿದೆ. ಒಂದು ಪ್ರಕರಣದಲ್ಲಿ 50 ರೂಪಾಯಿ ದಂಡ ವಿಧಿಸಲಾಗಿದೆ. ಇತ್ತೀಚೆಗೆ ಹೊಸದಾಗಿ ಆರೇಳು ಪ್ರಕರಣಗಳು ದಾಖಲಿಸಿ, ಅವುಗಳ ಆಧಾರದ ಮೇಲೆ ಗಡಿಪಾರು ಮಾಡಲಾಗಿದೆ. ಈ ವೇಳೆ ಅರ್ಜಿದಾರರ ವಾದವನ್ನು ಉಪ ವಿಭಾಗಾಧಿಕಾರಿ ಪರಿಗಣಿಸಿಲ್ಲ. ಆದ್ದರಿಂದ, ಗಡಿಪಾರು ಅದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

Kannada Bar & Bench
kannada.barandbench.com