ಮುಸ್ಲಿಂ ಕಾನೂನಿನಡಿ ನೂತನ ಪತ್ನಿ, ಮಗುವಿನ ಕಾರಣ ನೀಡಿ ಮೊದಲ ಪತ್ನಿಗೆ ಜೀವನಾಂಶ ನಿರಾಕರಿಸಲಾಗದು: ಕರ್ನಾಟಕ ಹೈಕೋರ್ಟ್

ಒಬ್ಬ ವ್ಯಕ್ತಿ ತನ್ನ ಮೊದಲ ಪತ್ನಿಯ ಬಗ್ಗೆ ಹೊಂದಿರುವ ಜವಾಬ್ದಾರಿ ಮತ್ತು ಕರ್ತವ್ಯ ಆತನ ಇನ್ನೊಂದು ವಿವಾಹ ಒಪ್ಪಂದದಿಂದ ಹಾಳಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮುಸ್ಲಿಂ ಕಾನೂನಿನಡಿ ನೂತನ ಪತ್ನಿ, ಮಗುವಿನ ಕಾರಣ ನೀಡಿ ಮೊದಲ ಪತ್ನಿಗೆ ಜೀವನಾಂಶ ನಿರಾಕರಿಸಲಾಗದು: ಕರ್ನಾಟಕ ಹೈಕೋರ್ಟ್
Published on

ಮುಸ್ಲಿಂ ಪತಿ ತನ್ನ ಮೊದಲ ಪತ್ನಿಗೆ ನೀಡಬೇಕಾದ ಜೀವನಾಂಶ ನಿರಾಕರಿಸಲು ಎರಡನೇ ಪತ್ನಿ ಮತ್ತು ಎರಡನೇ ಮದುವೆಯಿಂದ ಪಡೆದ ಮಗು ಆಧಾರವಾಗದು ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪೊಂದರಲ್ಲಿ ತಿಳಿಸಿದೆ (ಎಜಾಜುರ್ ರೆಹಮಾನ್ ಮತ್ತು ಸಾಯಿರಾಬಾನು ನಡುವಣ ಪ್ರಕರಣ).

ಇನ್ನೊಂದು ವಿವಾಹ ಒಪ್ಪಂದದ ಮೂಲಕ ಮೊದಲಪತ್ನಿಯ ಕುರಿತಾದ ಹೊಣೆಗಾರಿಕೆಯನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹೇಳಿದ್ದಾರೆ.

“…ಒಬ್ಬ ಮುಸ್ಲಿಂ ತನ್ನ ಮೊದಲ ಪತ್ನಿಗೆ ತಲಾಖ್‌ ನೀಡಿ ತರಾತುರಿಯಲ್ಲಿ ಇನ್ನೊಂದು ಮದುವೆಗೆ ಮುಂದಾದರೂ ತನ್ನ ಹೊಸ ಸಂಗಾತಿ ಮತ್ತು ಅವಳಿಗೆ ಹುಟ್ಟಿದ ಮಗುವಿನ ಕಾರಣಕ್ಕೆ ಜೀವನಾಂಶಕ್ಕೆ ಸಂಬಂಧಿಸಿದ ತೀರ್ಪನ್ನು ನಿರಾಕರಿಸಲು ಸಾಧ್ಯವಿಲ್ಲ… ಒಬ್ಬ ವ್ಯಕ್ತಿ ತನ್ನ ಮೊದಲಪತ್ನಿಯ ಬಗ್ಗೆ ಹೊಂದಿರುವ ಜವಾಬ್ದಾರಿ ಮತ್ತು ಕರ್ತವ್ಯ ಆತನ ಇನ್ನೊಂದು ವಿವಾಹ ಒಪ್ಪಂದದಿಂದ ಹಾಳಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

Also Read
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ: ವಿಚ್ಛೇದನ ಕೋರಿದ್ದ ಮಹಿಳೆಗೆ ಗರ್ಭಪಾತಕ್ಕೆ ಅನುಮತಿಸಿದ ಬಾಂಬೆ ಹೈಕೋರ್ಟ್‌

ಒಂದು ವೇಳೆ ಈ ವಿರೋಧಭಾಸದ ಸ್ಥಿತಿಯನ್ನು ಒಪ್ಪಿದರೆ ಅದು ಅದು ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಇನ್ನೊಬ್ಬರನ್ನು ಮದುವೆಯಾಗುವ ಬೇಜವಾಬ್ದಾರಿಗೆ ಇಂಬು ನೀಡಿದಂತಾಗುತ್ತದೆ. ಇದು ತಲಾಖ್‌ಗೆ ಮಾತ್ರ ಪ್ರೋತ್ಸಾಹ ನೀಡುತ್ತದೆ ಎಂದು ಪೀಠ ತಿಳಿಸಿತು. ಅಲ್ಲದೆ ಎರಡನೇ ಮದುವೆಯ ಕಾರಣ ನೀಡಿ ಮೊದಲಪತ್ನಿಗೆ ಜೀವನಾಂಶ ನಿರಾಕರಿಸಿದ್ದ ಮುಸ್ಲಿಂ ಅರ್ಜಿದಾರ ರೆಹಮಾನ್‌ ಅವರಿಗೆ ನ್ಯಾಯಾಲಯ ₹ 25,000 ದಂಡವನ್ನೂ ವಿಧಿಸಿ ಅರ್ಜಿ ವಜಾಗೊಳಿಸಿತು.

ತನ್ನ ಮೊದಲ ಪತ್ನಿಗೆ ಜೀವನಾಂಶ ರೂಪದಲ್ಲಿ ₹ 3,000 ಪಾವತಿಸುವಂತೆ ಸಿವಿಲ್‌ ನ್ಯಾಯಾಲಯವೊಂದು ನೀಡಿದ್ದ ತೀರ್ಪನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮದುವೆಯಾಗಿ ಎಂಟು ತಿಂಗಳ ಬಳಿಕ 1991ರಲ್ಲಿ ಅರ್ಜಿದಾರ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು. 2012ರಲ್ಲಿ ಜೀವನಾಂಶ ಪಾವತಿಸದ ಕಾರಣಕ್ಕೆ ಅರ್ಜಿದಾರರನ್ನು ಸಿವಿಲ್‌ ಜೈಲಿಗೆ ಕಳಿಸಲಾಗಿತ್ತು. ನಂತರ ₹ 30,000 ಪಾವತಿಸಿ ಜೈಲಿನಿಂದ ಅವರು ಬಿಡುಗಡೆಯಾಗಿದ್ದರು. ಆ ಬಳಿಕ ಆರ್ಥಿಕ ಅಸಾಮರ್ಥ್ಯದಿಂದಾಗಿ ಮೊದಲ ಪತ್ನಿಗೆ ಜೀವನಾಂಶ ನೀಡಲು ಆಗುತ್ತಿಲ್ಲ ಎಂಬ ಅವರ ವಾದವನ್ನು ಸಿವಿಲ್‌ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದಾಗಿ ಅವರು 2014ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಕುರಾನ್‌ ಮತ್ತು ಹದೀಸ್‌ ಪ್ರಸ್ತಾಪಿಸಿದ ನ್ಯಾಯಾಲಯ , “ಅತ್ಯಲ್ಪ ಮೆಹರ್ ಮೊತ್ತ, ಬದುಕು ನಡೆಸಲು ಮಹಿಳೆಗೆ ಇರುವ ಅಸಾಮರ್ಥ್ಯ ಹಾಗೂ ಆಕೆ ಮರುಮದುವೆ ಆಗದಿರುವ ಮೂರು ಸಂಚಿತ ಅಂಶಗಳನ್ನು ಆಧರಿಸಿ ವಿಚ್ಛೇದಿತ ಮಹಿಳೆಯ ಜೀವನಾಂಶಕ್ಕೆ ಷರತ್ತು ವಿಧಿಸಲಾಗುತ್ತದೆ” ಎಂದಿತು.

ಇಸ್ಲಾಂನಲ್ಲಿ ಮದುವೆ ಒಂದು ಸಂಸ್ಕಾರವಲ್ಲ ಮತ್ತು ವಿಚ್ಛೇದನವು ಎಲ್ಲಾ ಕರ್ತವ್ಯ ಮತ್ತು ಕಟ್ಟುಪಾಡುಗಳನ್ನು ಹೋಗಲಾಡಿಸದು ಎಂದು ನ್ಯಾಯಾಲಯ ಹೇಳಿದೆ.

ನಿರ್ಗತಿಕ ಮುಸ್ಲಿಂ ಪತ್ನಿಯ ಜೀವನಾಂಶದ ಹಕ್ಕನ್ನು ಇದ್ದತ್‌ಗೆ (ವಿಚ್ಛೇದನದ ನಂತರ ಒಂದು ನಿರ್ದಿಷ್ಟ ಅವಧಿ) ಸೀಮಿತಗೊಳಿಸಲಾಗಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಜೀವನಾಂಶವಾಗಿ ಪಾವತಿಸಬೇಕಾದ ಮೊತ್ತ ಪರಿಗಣಿಸಲು ಊಹಾತ್ಮಕವಾದ ಮೆಹರ್ ಆಧಾರವಾಗಿರಬಾರದು ಎಂದು ಅದು ವಿವರಿಸಿದೆ.

ಅಲ್ಲದೆ ಜೀವನಾಂಶ ತೀರ್ಪನ್ನು ಜಾರಿಗೆ ತರುವಂತೆ ಹೈಕೋರ್ಟ್‌ ಕೆಳಹಂತದ ನ್ಯಾಯಾಲಯಕ್ಕೆ ಸೂಚಿಸಿದ್ದು ಮೂರು ತಿಂಗಳೊಳಗೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಹೇಳಿತು.

ಆದೇಶವನ್ನು ಇಲ್ಲಿ ಓದಿ:

Attachment
PDF
Ezazur_Rehman_vs_Saira_Bhanu.pdf
Preview
Kannada Bar & Bench
kannada.barandbench.com