

ಆಧಾರ್ ದತ್ತಾಂಶದಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳುವುದು ಜನರ ಶಾಸನಬದ್ಧ ಮತ್ತು ಮೂಲಭೂತ ಹಕ್ಕಾಗಿದ್ದು ಅವರು ಈ ಹಕ್ಕನ್ನು ಯಾವುದೇ ತೊಂದರೆ ಇಲ್ಲದೆ ಚಲಾಯಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೋಡಿಕೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ತೀರ್ಪು ನೀಡಿದೆ.
ಆಧಾರ್ ಮೂಲಕ ಪ್ರಯೋಜನಗಳನ್ನು ಪಡೆಯುವ ಹಕ್ಕು ಅದರ ವಿವರಗಳನ್ನು ಸರಿಪಡಿಸುವ ಮೂಲಭೂತ ಹಕ್ಕನ್ನು ಒಳಗೊಂಡಿದೆ ಎಂದು ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ತಿಳಿಸಿದರು.
“ಸವಲತ್ತುಗಳನ್ನು ಪಡೆಯುವ ಹಕ್ಕು ಮೂಲಭೂತ ಹಕ್ಕಾಗಿದ್ದಾಗ ಮತ್ತು ಆ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಸಾಧನವಾಗಿರುವ ಸಂದರ್ಭದಲ್ಲಿ, ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಗೆ ತನ್ನ ಕಾರ್ಡ್‌ನ ವಿವರಗಳನ್ನು ತಿದ್ದುಪಡಿ ಮಾಡಲು ಅಷ್ಟೇ ಸಮಾನವಾದ ಮೂಲಭೂತ ಹಕ್ಕು ಇರುತ್ತದೆ” ಎಂದು ನ್ಯಾಯಾಲಯ ವಿವರಿಸಿದೆ.
ಅಂತೆಯೇ ಆಧಾರ್ ತಿದ್ದುಪಡಿ ಸೌಲಭ್ಯ ಪಡೆಯುವುದಕ್ಕಾಗಿ ಯುಐಡಿಎಐ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ತಮಿಳುನಾಡಿನ ಪರಮಕುಡಿಯ 74 ವರ್ಷದ ವಿಧವೆ ಪಿ. ಪುಷ್ಪಂ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಆಧಾರ್ ಕಾರ್ಡ್‌ನಲ್ಲಿ ಅವರ ಹೆಸರು "ಪುಷ್ಬಂ" ಎಂದು ಹಾಗೂ ಜನ್ಮ ದಿನಾಂಕ ತಪ್ಪಾಗಿ ನಮೂದುಗೊಂಡು ಅವರ ಕುಟುಂಬ ಪಿಂಚಣಿ ಪಡೆಯುವುದು ವಿಳಂಬವಾಗಿತ್ತು. ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಪಿ ಪುಷ್ಪಂ ಅವರ ಪತಿ ಮೇ 2025 ರಲ್ಲಿ ನಿಧನರಾಗಿದ್ದರು. ಇತ್ತ ಪುಷ್ಪಂ ಅವರ ವಿವರ ಬದಲಾಗಿದ್ದರಿಂದ ಪಿಂಚಣಿ ದೊರೆಯದಂತಾಗಿತ್ತು. ಇ-ಸೇವೆ ಮತ್ತು ಅಂಚೆ ಕೇಂದ್ರಗಳ ಮೂಲಕ ತಿದ್ದುಪಡಿಗಳನ್ನು ಮಾಡಲು ಅವರು ಪದೇ ಪದೇ ಮಾಡಿದ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆಧಾರ್ ಕಾಯಿದೆ 2016 ರ ಸೆಕ್ಷನ್ 31ನ್ನು ಉಲ್ಲೇಖಿಸಿದ ನ್ಯಾಯಾಲಯ ಈ ವಿಧಿಯಲ್ಲಿ ಮಾಡಬಹುದು ಎಂಬ ಪದ ಬಳಕೆಯಾಗಿದ್ದರೂ ಒದಗಿಸಿದ ಮಾಹಿತಿ ನಿಖರವಾಗಿದ್ದರೆ ಯುಐಡಿಎಐ ತಿದ್ದುಪಡಿಗೆ ಅವಕಾಶ ಕಲ್ಪಿಸುವುದು ಕಡ್ಡಾಯ ಎಂದು ಪೀಠ ಹೇಳಿದೆ.
ದೋಷಗಳನ್ನು ಸರಿಪಡಿಸುವ ಕರ್ತವ್ಯ ಆಧಾರ್ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಆಧಾರ್ ಕಾರ್ಡ್‌ನ ಪ್ರತಿಯೊಂದು ವಿವರವೂ ನಿಖರವಾಗಿರುವಂತೆ ನೋಡಿಕೊಳ್ಳುವುದು ಪ್ರಾಧಿಕಾರದ ಕರ್ತವ್ಯವಾಗಿದೆ. ಆಧಾರ್ ಕಾರ್ಡ್ ಸರಿಯಾದ ವಿವರಗಳನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸೆಕ್ಷನ್ 31 ರ ಆತ್ಯಂತಿಕ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಪ್ರಸ್ತುತ ಆಧಾರ್ ಮುಖ್ಯ ಗುರುತಿನ ದಾಖಲೆ ಆಗಿರುವುದರಿಂದ, ತಪ್ಪು ವಿವರಗಳು ಇದ್ದರೆ ನಾಗರಿಕರು ಸರ್ಕಾರದ ಸೌಲಭ್ಯ, ಪರಿಹಾರ ಹಾಗೂ ಪಿಂಚಣಿ ಕೈತಪ್ಪಿಹೋಗುವ ಸಂಭವವಿದೆ ಎಂದು ನ್ಯಾಯಾಲಯ ಹೇಳಿದೆ.
ದಕ್ಷಿಣ ಭಾಗ ಜಿಲ್ಲೆಗಳಲ್ಲಿ ಒಂದರಲ್ಲಿ (ಮಧುರೈ) ಮಾತ್ರ ಆಧಾರ್ ಸೇವಾ ಕೇಂದ್ರವಿದ್ದು ವೃದ್ಧರು, ಅಂಗವಿಕಲರು ಹಾಗೂ ಬಡಜನರು ದೂರ ಪ್ರಯಾಣ ಮಾಡಿ ದೀರ್ಘ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಸ್ಥಳೀಯವಾಗಿಯೇ ಆಧಾರ್ ತಿದ್ದಪಡಿ ಸೌಲಭ್ಯ ದೊರೆಯುವಂತಾಗಬೇಕು. ಭೌತಿಕವಾಗಿ ತಲುಪಲಾಗದೆ ಇರುವ ಅಸಮಾನತೆ ಸಮಸ್ಯೆಯ ಮೂಲ ಎಂದಿತು. 2025 ರಲ್ಲಿ ' ದಿ ವೈರ್' ಸುದ್ದಿತಾಣದಲ್ಲಿ ಪ್ರಕಟವಾದ 'ಕ್ಯೂಸ್, ರಿಜೆಕ್ಷನ್ಸ್, ಆಂಬಿಗ್ಯುಟಿ: ದಿ ಡೈಲಿ ಟ್ರಯಲ್ಸ್ ಆಫ್ ವಾಂಟಿಂಗ್ ಎ ವರ್ಕಿಂಗ್ ಆಧಾರ್' ಎಂಬ ಲೇಖನ ಉಲ್ಲೇಖಿಸಿದ ಅದು ಆಧಾರ್ ತಿದ್ದುಪಡಿ ಸೌಲಭ್ಯ ಪಡೆಯುವುದಕ್ಕಾಗಿ ಯುಐಡಿಎಐ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಬೇಕು ಎಂದಿತು.
ಮಾರ್ಚ್ 2026ರೊಳಗೆ ತಮಿಳುನಾಡಿನಲ್ಲಿ 28 ಹೊಸ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಯುಐಡಿಎಐ ಪ್ರಸ್ತಾವನೆಯನ್ನು ಗಮನಿಸಿದ ನ್ಯಾಯಾಲಯ, ಅರ್ಜಿದಾರರು ಅಷ್ಟು ದಿನ ಕಾಯಲು ಸಾಧ್ಯವಿಲ್ಲ ಎಂದಿತು. ಆದೇಶದ ಪ್ರತಿ ದೊರೆತ ಕೂಡಲೇ ಅವರ ಆಧಾರ್ ವಿವರಗಳನ್ನು ಸರಿಪಡಿಸಲು ಮಧುರೈ ಆಧಾರ್ ಸೇವಾ ಕೇಂದ್ರಕ್ಕೆ ನಿರ್ದೇಶನ ನೀಡಿತು . ನಂತರ ಅವರ ಪಿಂಚಣಿ ಮೊತ್ತವನ್ನು ತ್ವರಿತವಾಗಿ ರಕ್ಷಣಾ ಇಲಾಖೆ ವರ್ಗಾಯಿಸಬೇಕು ಎಂದು ಸೂಚಿಸಿತು.
[ತೀರ್ಪಿನ ಪ್ರತಿ]