ಸಂದೇಶದ ಜಾಡು ಪತ್ತೆ ಖಾಸಗಿತನಕ್ಕೆ ವಿರುದ್ಧ, ಅನೇಕ ಮಂದಿಗೆ ಅಪಾಯಕಾರಿ: ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್

ತಮ್ಮ ಸಂದೇಶದ ಖಾಸಗಿತನ ಮತ್ತು ಭದ್ರತೆಯ ಭೀತಿಯಿಂದಾಗಿ ಕಕ್ಷೀದಾರರು ಮತ್ತು ವಕೀಲರು ಕೂಡ ವಾಟ್ಸಾಪ್ ಮೂಲಕ ಯಾವುದೇ ಸಂದೇಶ ಕಳಿಸಲು ಹಿಂಜರಿಯಬಹುದು ಎಂದು ವಾಟ್ಸಾಪ್ ತಿಳಿಸಿದೆ.
ಸಂದೇಶದ ಜಾಡು ಪತ್ತೆ ಖಾಸಗಿತನಕ್ಕೆ ವಿರುದ್ಧ, ಅನೇಕ ಮಂದಿಗೆ ಅಪಾಯಕಾರಿ: ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್

2021ರ ಮಾಹಿತಿ ತಂತ್ರಜ್ಞಾನ ನಿಯಮಾವಳಿಯ 4 (2)ನೇ ನಿಯಮ ತಿಳಿಸಿದಂತೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್‌ ಮಾಡಲಾಗಿರುವ ಸಂದೇಶದ ಜಾಡು ಪತ್ತೆ ಹಚ್ಚುವುದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಗೌಪ್ಯತಾ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ವಾಟ್ಸಾಪ್‌ ಸಂಸ್ಥೆ ದೆಹಲಿ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.

ಇದರಿಂದ ಪತ್ರಕರ್ತರಿಗೆ, ನಾಗರಿಕ ಮತ್ತು ರಾಜಕೀಯ ಹೋರಾಟಗಳಲ್ಲಿ ತೊಡಗಿರುವವರಿಗೆ ತೊಂದರೆಯಾಗಬಹುದು. ತಮ್ಮ ಸಂದೇಶದ ಖಾಸಗಿತನ ಮತ್ತು ಭದ್ರತೆಯ ಭೀತಿಯಿಂದಾಗಿ ಕಕ್ಷೀದಾರರು ಹಾಗೂ ವಕೀಲರು ಕೂಡ ಸಂದೇಶ ಕಳಿಸಲು ಹಿಂಜರಿಯಬಹುದು ಎಂದು ವಾಟ್ಸಾಪ್‌ ವಿವರಿಸಿದೆ.

ಬಳಕೆದಾರರು ಮುಕ್ತ ಸಂವಹನ ನಡೆಸಲು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಷನ್‌ (ಗೂಢ ಲಿಪೀಕರಣ) ಸುರಕ್ಷಿತ ಎಂದು ಭಾವಿಸುತ್ತಾರೆ. ಒಂದೊಮ್ಮೆ ಮಾಹಿತಿಯ ಮೂಲ ಕರ್ತೃ ಯಾರೆಂಬುದು ದೇಶದಲ್ಲಿ ಬೇರೆಯವರಿಗೆ ಗೊತ್ತಾಗುತ್ತದೆ ಎಂದು ತಿಳಿದು ಬಂದರೆ ತಮ್ಮ ಕಾನೂನುಬದ್ಧ ಖಾಸಗಿ ಸಂವಹನಗಳನ್ನು ಕೂಡ ತಮ್ಮ ವಿರುದ್ಧ ಬಳಸಲಾಗುತ್ತದೆ ಎಂಬ ಭೀತಿಯಿಂದ ವ್ಯಕ್ತಿಗಳು ಮುಕ್ತವಾಗಿ ಮಾತನಾಡಲು ಹೆದರುತ್ತಾರೆ. ಇದರಿಂದ ಅವರ ಖಾಸಗಿತನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ಉಂಟಾಗುತ್ತದೆ ಎಂದು ಅದು ಆತಂಕ ವ್ಯಕ್ತಪಡಿಸಿದೆ.

Also Read
ಗುಂಪಿನ ಸದಸ್ಯ ಮಾಡಿದ ಪೋಸ್ಟ್‌ಗೆ ವಾಟ್ಸಾಪ್ ಗುಂಪಿನ ನಿರ್ವಾಹಕನನ್ನು ಹೊಣೆಗಾರರನ್ನಾಗಿ ಮಾಡಲಾಗದು: ಬಾಂಬೆ ಹೈಕೋರ್ಟ್‌

ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್‌ ವೇದಿಕೆಗಳ ಮಾಹಿತಿಯ ಮೂಲ ಕರ್ತೃ ಯಾರು ಎಂಬುದನ್ನು ಬಹಿರಂಗಪಡಿಸುವಂತೆ ಬೇರೆ ಯಾವುದೇ ದೇಶಗಳು ಒತ್ತಾಯಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆನ್‌ಲೈನ್ ಸೇವೆ ಒದಗಿಸುವವರು ಅನಧಿಕೃತ ಅಪಾಯಗಳನ್ನು ಕಡಿಮೆ ಮಾಡಲು ತಮ್ಮ ಬಳಕೆದಾರರ ಡೇಟಾವನ್ನು ಮಾತ್ರ ಸಂಗ್ರಹಿಸಿ ಶೇಖರಿಸಿಡಬೇಕು ಎಂಬ ʼಡೇಟಾ ಮಿನಿಮೈಸೇಷನ್‌ʼ ತತ್ವಗಳಿಗೆ ಕೂಡ ನಿಯಮ 4 (2) ವಿರುದ್ಧವಾಗಿದೆ. ಸಂವಿಧಾನ ಬಾಹಿರವಾಗಿರುವ ನಿಯಮವನ್ನು ಪಾಲಿಸದೇ ಇರುವುದಕ್ಕಾಗಿ ಕ್ರಿಮಿನಲ್ ಆಪಾದನೆ ಹೊರಿಸುವುದು ಕಾನೂನುಬಾಹಿರ ಎಂದು ವಾಟ್ಸಾಪ್‌ ಪ್ರತಿಪಾದಿಸಿದೆ.

Related Stories

No stories found.
Kannada Bar & Bench
kannada.barandbench.com