ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಮಂಗಳೂರಿನ ವಕೀಲ ಕೆ ಎಸ್ ಎನ್ ರಾಜೇಶ್ ಭಟ್ ಪತ್ತೆಗಾಗಿ ನಗರದ ಪೊಲೀಸರು ದೇಶದಾದ್ಯಂತ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಆರೋಪಿ ದೇಶ ತೊರೆಯುವುದನ್ನು ತಪ್ಪಿಸುವ ಸಲುವಾಗಿ ನೋಟಿಸ್ ಜಾರಿ ಮಾಡಲಾಗಿದೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನೋಟಿಸ್ ಪ್ರದರ್ಶಿಸಲಾಗುತ್ತದೆ. ಅಲ್ಲದೆ ಅವರ ಪತ್ತೆಗಾಗಿ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಪೊಲೀಸರ ನೆರವನ್ನು ಕೂಡ ಕೋರಲಾಗಿದೆ.
ಜೊತೆಗೆ ರಾಜೇಶ್ ಅವರ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಆರೋಪಿ ಪದೇ ಪದೇ ಸ್ಥಳ ಹಾಗೂ ಫೋನ್‌ನ ಸಿಮ್ ಬದಲಿಸುತ್ತಿರುವುದರಿಂದ ಅವರ ಬಂಧನ ಪ್ರಕ್ರಿಯೆಗೆ ತೊಡಕಾಗಿತ್ತು. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲು ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮುಂದಾಗಿದ್ದರು. ಅಲ್ಲದೆ ಅವರು ಆರೋಪಿ ಪತ್ತೆಗಾಗಿ ಆರು ತಂಡಗಳನ್ನು ರಚಿಸಿದ್ದಾರೆ.
ಮಂಗಳೂರಿನ ಕಾನೂನು ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ಕಳೆದ ಆಗಸ್ಟ್‌ನಲ್ಲಿ ವಕೀಲರ ಕರಂಗಲ್ಪಾಡಿ ಕಚೇರಿಯಲ್ಲಿ ತರಬೇತಿಗಾಗಿ (ಇಂಟರ್ನ್‌ಶಿಪ್) ಸೇರಿದ್ದರು. ಸೆ. 25ರಂದು ತನ್ನನ್ನು ಚೇಂಬರ್‌ಗೆ ಕರೆಸಿಕೊಂಡ ಭಟ್ ಅಸಭ್ಯವಾಗಿ ವರ್ತಿಸಿದರು ಎಂದು ಕಳೆದ ಅಕ್ಟೋಬರ್ 18ರಂದು ನಗರದ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ರಾಜೇಶ್ ವಿರುದ್ಧದ ಪ್ರಕರಣ ಮುಚ್ಚಿಹಾಕಲು ವಿದ್ಯಾರ್ಥಿನಿಗೆ ಒತ್ತಡ ಹೇರಿದ ಸಂಬಂಧ ಮತ್ತೊಂದು ದೂರು ನೀಡಲಾಗಿತ್ತು.
ಇದರ ಬೆನ್ನಿಗೇ ಆರೋಪಿ ತಲೆಮರೆಸಿಕೊಂಡಿದ್ದರು. ಅಕ್ಟೋಬರ್ 22ರಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಮಂಗಳೂರು ವಕೀಲರ ಸಂಘದಿಂದ ರಾಜೇಶ್ ಅವರನ್ನು ಅಮಾನತು ಮಾಡಲಾಗಿತ್ತು. ಅಕ್ಟೋಬರ್ 29ರಂದು ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ವಜಾಗೊಳಿಸಿತ್ತು.