ಮಣಿಪುರ ಹಿಂಸಾಚಾರದ ವೇಳೆ ಸಾವನ್ನಪ್ಪಿದ್ದ 35 ಮಂದಿಯ ಅಂತ್ಯಕ್ರಿಯೆಯನ್ನು ಚರ್ಚಂದಪುರ ಜಿಲ್ಲೆಯ ಹಾವೊಲೈ ಖೋಪಿ ಗ್ರಾಮದ ಸ್ಮಶಾನದಲ್ಲಿ ನಡೆಸುವುದಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮಣಿಪುರ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಮಣಿಪುರದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಪರಿಗಣಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ ವಿ ಮುರಳೀಧರನ್ ಮತ್ತು ನ್ಯಾಯಮೂರ್ತಿ ಎ ಗುಣೇಶ್ವರ್ ಶರ್ಮಾ ಅವರಿದ್ದ ಪೀಠ ಸಾರ್ವಜನಿಕ ಹಿತಾಸಕ್ತಿಯಿಂದ ಈ ನಿರ್ದೇಶನ ನೀಡಿದೆ.
"ಈಗಾಗಲೇ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಹದಗೆಡುವ ಸಾಧ್ಯತೆ ಹಾಗೂ ವಿವಾದಿತ ಪ್ರದೇಶದಲ್ಲಿ ಎರಡೂ ಸಮುದಾಯಗಳ ಗುಂಪು ಭಾರೀ ಸಂಖ್ಯೆಯಲ್ಲಿ ಸೇರುವುದರಿಂದ ಮತ್ತೆ ಹಿಂಸಾಚಾರ ಮತ್ತು ರಕ್ತಪಾತ ಉಂಟಾಗುವ ಸಾಧ್ಯತೆ ಪರಿಗಣಿಸಿ ಯಾವುದೇ ಅನಪೇಕ್ಷಿತ ಘಟನೆ ತಡೆಗಟ್ಟಲು ಮಧ್ಯಂತರ ಕ್ರಮವಾಗಿ ಈ ಕೆಳಗಿನ ನಿರ್ದೇಶನ ನೀಡಲಾಗುತ್ತಿದೆ" ಎಂದು ನ್ಯಾಯಾಲಯ ಹೇಳಿದೆ.
ಅದರಂತೆ ಮುಂದಿನ ವಿಚಾರಣಾ ದಿನದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಅಂತ್ಯಕ್ರಿಯೆಗಾಗಿ ಭೂಮಿ ಮಂಜೂರು ಮಾಡಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಕುಕಿ-ಜೋ ಸಮುದಾಯದ ಪ್ರತಿನಿಧಿಗಳಿಗೆ ಅದು ಅವಕಾಶ ಮಾಡಿಕೊಟ್ಟಿತು. ಆಗಸ್ಟ್ 9, 2023ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.