ಮಣಿಪುರ ವಿಡಿಯೋ: ಸಿಬಿಐ ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ; ಮಣಿಪುರದಿಂದ ಹೊರಗೆ ವಿಚಾರಣೆಗೆ ಆದೇಶಿಸಲು ಕೋರಿಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಷ್ಠ ಏಳು ಮಂದಿಯನ್ನು ಬಂಧಿಸಲಾಗದ್ದು, ಅವರು ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ಹೇಳಿದೆ.
Supreme Court, Manipur Violence
Supreme Court, Manipur Violence

ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡುವ ಮೂಲಕ ಕಿರುಕುಳ ನೀಡಿದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸಲಿದೆ ಎಂದು ಗುರುವಾರ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮಹಿಳೆಯರ ವಿರುದ್ಧದ ಅಪರಾಧ ವಿಶೇಷವಾಗಿ ಮಣಿಪುರದಲ್ಲಿ ನಡೆದಿರುವಂಥ ಹೀನ ಅಪರಾಧವನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಲಿದ್ದು, ಪ್ರಕರಣದಲ್ಲಿ ನ್ಯಾಯದಾನ ಮಾಡುವ ಮೂಲಕ ದೇಶದಲ್ಲಿ ಇಂತಹ ಘಟನೆ ಮರುಕಳಿಸದಂತೆ ಮಾಡಲಾಗುವುದು ಎಂದು ಕೇಂದ್ರ ಹೇಳಿದೆ.

ತುರ್ತಾಗಿ ತನಿಖೆ ನಡೆಸಿ, ಕಾಲಮಿತಿಯಲ್ಲಿ ವಿಚಾರಣೆ ಪೂರ್ಣಗೊಳಿಸಲಾಗುವುದು. ಹೀಗಾಗಿ ಮಣಿಪುರದಿಂದ ಹೊರಗೆ ವಿಚಾರಣೆ ನಡೆಯಬೇಕು. ಈ ನಿಟ್ಟಿನಲ್ಲಿ ವಿಚಾರಣೆ ವರ್ಗಾವಣೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಬೇಕು ಎಂದು ಕೇಂದ್ರ ಸರ್ಕಾರ ಕೋರಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಮಣಿಪುರದಲ್ಲಿ ನಡೆದ ಹೇಯ ಕೃತ್ಯದ ವಿಡಿಯೊ ವೈರಲ್‌ ಆದ ಬಳಿಕ ಸ್ವಯಂಪ್ರೇರಿತವಾಗಿ ಸುಪ್ರೀಂ ಕೋರ್ಟ್‌ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣಕ್ಕೆ ಕೇಂದ್ರ ಸರ್ಕಾರವು ಅಫಿಡವಿಟ್‌ ಸಲ್ಲಿಸಿದೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂದು ಜುಲೈ 20ರಂದು ಸಿಜೆಐ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ತ್ರಿಸದಸ್ಯ ಪೀಠವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.

ಇದಕ್ಕೆ ಪೂರಕವಾಗಿ ಅಫಿಡವಿಟ್‌ ಸಲ್ಲಿಸಿರುವ ಮಣಿಪುರದ ಗೃಹ ಇಲಾಖೆಯು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದ್ದು, ಅವರು ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಆರೋಪಿಗಳ ವಿರುದ್ದ ಅತ್ಯಾಚಾರ, ಕೊಲೆ ಆರೋಪದಡಿ ದೂರು ದಾಖಲಿಸಲಾಗಿದೆ ಎಂದು ವಿವರಿಸಲಾಗಿದೆ.

Also Read
ಮಣಿಪುರ ಬೆತ್ತಲೆ ಮೆರವಣಿಗೆ: ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಆ ಕೆಲಸ ನ್ಯಾಯಾಲಯವೇ ಮಾಡುತ್ತದೆ ಎಂದು ಗುಡುಗಿದ ಸುಪ್ರೀಂ

ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮಾನ್ಯತೆ ನೀಡುವುದಕ್ಕೆ ವಿರೋಧಿಸಿ ಕೆಲವು ಪಂಗಡಗಳು ಆಕ್ಷೇಪಿಸಿರುವುದು ರಾಜ್ಯದಲ್ಲಿ ಗಲಭೆಗೆ ಕಾರಣವಾಗಿದೆ. ಏಪ್ರಿಲ್‌ 19ರಂದು ಮೈತೇಯಿ ಸಮುದಾಯವನ್ನು ಎಸ್‌ಟಿ ಪಟ್ಟಿಯಲ್ಲಿ ಒಂದು ತಿಂಗಳೊಳಗೆ ಸೇರ್ಪಡೆ ಮಾಡಲು ಮಣಿಪುರ ಸರ್ಕಾರಕ್ಕೆ ಮಣಿಪುರ ಹೈಕೋರ್ಟ್‌ ನಿರ್ದೇಶಿಸಿತ್ತು. ಇದು ಬುಡಕಟ್ಟು ಮತ್ತು ಬುಡಕಟ್ಟೇತರ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ಗಲಭೆಯ ನಡುವೆ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಲೈಂಗಿಕ ಕಿರುಕುಳ ನೀಡುತ್ತಾ ಅವರನ್ನು ಮೆರವಣಿಗೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಘಟನೆಯು ಮೇ 4ರಂದು ನಡೆದಿದ್ದು, ಉದ್ರಿಕ್ತರ ಗುಂಪು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ವರದಿಯಾಗಿತ್ತು.

Related Stories

No stories found.
Kannada Bar & Bench
kannada.barandbench.com