ಮಣಿಪುರ ಬೆತ್ತಲೆ ಮೆರವಣಿಗೆ: ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಆ ಕೆಲಸ ನ್ಯಾಯಾಲಯವೇ ಮಾಡುತ್ತದೆ ಎಂದು ಗುಡುಗಿದ ಸುಪ್ರೀಂ

ಬೆತ್ತಲೆ ಮೆರವಣಿಗೆ ಕಂಡು ನ್ಯಾಯಾಲಯ ವಿಚಲಿತಗೊಂಡಿದ್ದು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯವೇ ಅಖಾಡಕ್ಕಿಳಿಯುತ್ತದೆ ಎಂಬುದಾಗಿ ಸಿಜೆಐ ಎಚ್ಚರಿಕೆ ನೀಡಿದ್ದಾರೆ.
Manipur violence and supreme court
Manipur violence and supreme court

ಮಹತ್ವದ ಬೆಳವಣಿಗೆಯೊಂದರಲ್ಲಿ ಕುಕಿ ಬುಡಕಟ್ಟಿಗೆ ಸೇರಿದ ಇಬ್ಬರು ಮಣಿಪುರಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದೆ.

ಬೆತ್ತಲೆ ಮೆರವಣಿಗೆ ಘಟನೆಯಿಂದ ನ್ಯಾಯಾಲಯ ವಿಚಲಿತಗೊಂಡಿದ್ದು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯವೇ ಕ್ರಮಕ್ಕೆ ಮುಂದಾಗಲಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಗುಡುಗಿದ್ದಾರೆ.

Also Read
ಮಣಿಪುರ ಹಿಂಸಾಚಾರ: ಸೇನೆಗೆ ಯಾವುದೇ ನಿರ್ದೇಶನ ನೀಡುವುದಿಲ್ಲ, 72 ವರ್ಷಗಳ ಇತಿಹಾಸದಲ್ಲಿ ಹಾಗೆ ಮಾಡಿಲ್ಲ ಎಂದ ಸುಪ್ರೀಂ

ಇದನ್ನು ಸುಮ್ಮನೆ ಒಪ್ಪಲಾಗದು. ಕೋಮುಗಲಭೆ ಪೀಡಿತ ಪ್ರದೇಶದಲ್ಲಿ ಮಹಿಳೆಯರನ್ನು ಸಾಧನವಾಗಿ ಬಳಸುವುದು ಹೇಯ ಸಾಂವಿಧಾನಿಕ ನಿಂದನೆ. ವಿಡಿಯೋಗಳಿಂದ ತೀವ್ರ ವಿಚಲಿತರಾಗಿದ್ದೇವೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಆ ಕೆಲಸ ನಾವು ಮಾಡುತ್ತೇವೆ ಎಂದು ಸಿಜೆಐ ಹೇಳಿದ್ದಾರೆ.

ಅಪರಾಧಿಗಳನ್ನು ಬಂಧಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಯನ್ನು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ಪೀಠ ಕೇಳಿತು.

Also Read
ಮಣಿಪುರ ಹಿಂಸಾಚಾರ: ವಿಷಯ ಗಂಭೀರವಾಗಿದೆ ಎಂದ ಸುಪ್ರೀಂ; ಸೇನೆ ನಿಯೋಜನೆ ಕೋರಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಕಾರ

“ಅಂತಹ ಹಿಂಸಾಚಾರಕ್ಕೆ ಕಾರಣರಾದ ಅಪರಾಧಿಗಳನ್ನು ಬಂಧಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು. ಮಾಧ್ಯಮಗಳಲ್ಲಿ ಬಿಂಬಿತವಾಗಿರುವ ದೃಶ್ಯಗಳಲ್ಲಿ ಮಹಿಳೆಯರನ್ನು ದೌರ್ಜನ್ಯದ ಅಸ್ತ್ರವಾಗಿ ಬಳಸಿಕೊಂಡಿರುವುದು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆ ಮತ್ತು ಮಾನವ ಬದುಕಿಗೆ ಮಾಡಿದ ಧಕ್ಕೆ” ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಘಟನೆಯನ್ನು ಖಂಡಿಸಿದರು."ಇದು ಸ್ವೀಕಾರಾರ್ಹವಲ್ಲ. ನ್ಯಾಯಮೂರ್ತಿಗಳ ಮಾತಿಗೆ ಸಹಮತವಿದೆ" ಎಂದು ಅವರು ಹೇಳಿದರು. ಬಳಿಕ ನ್ಯಾಯಾಲಯ ಜುಲೈ 28ರಂದು ಪ್ರಕರಣ ಪಟ್ಟಿ ಮಾಡುವಂತೆ ಸೂಚಿಸಿತು.

ಕೆಲ ತಿಂಗಳುಗಳ ಹಿಂದೆ ಮಣಿಪುರ ಹೈಕೋರ್ಟ್‌ ಮೈತೇಯಿ ಸಮುದಾಯಕ್ಕೆ ತ್ವರಿತವಾಗಿ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವಂತೆ ಆದೇಶ ನೀಡಿತ್ತು. ಆ ಬಳಿಕ ಬುಡಕಟ್ಟು ಮತ್ತು ಬುಡಕಟ್ಟೇತರ ಸಮುದಾಯಗಳ ನಡುವೆ ಘರ್ಷಣೆ ನಡೆಯಿತು. ಅಂದಿನಿಂದಲೂ ಮಣಿಪುರ ಹೊತ್ತಿ ಉರಿಯುತ್ತಿದ್ದು  ಹಲವು ಸಾವು- ನೋವು, ಅತ್ಯಾಚಾರದ ಪ್ರಕರಣಗಳು ವರದಿಯಾಗಿವೆ. ಭತ್ತದ ಗದ್ದೆಗೆ ಕರೆದೊಯ್ದು ಪುರುಷರ ಗುಂಪೊಂದು ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಿತ್ತು. ಘಟನೆ ಮೇ 4ರಂದು ನಡೆದಿತ್ತು ಎಂದು ವರದಿಯಾಗಿದೆ.

Related Stories

No stories found.
Kannada Bar & Bench
kannada.barandbench.com