ಪ್ರಬಲ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬುಡಕಟ್ಟು ಹಾಗೂ ಬುಡಕಟ್ಟೇತರ ವರ್ಗಗಳ ನಡುವೆ ಉಂಟಾದ ಸಂಘರ್ಷದಿಂದಾಗಿ ರಣಾಂಗಣವಾಗಿ ಮಾರ್ಪಟ್ಟಿದ್ದ ಮಣಿಪುರದಲ್ಲಿ ಮೇ 3ರಿಂದ ಹೇರಲಾಗಿದ್ದ ಅನಿರ್ದಿಷ್ಟಾವಧಿ ಅಂತರ್ಜಾಲ ಸಂಪರ್ಕ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಪರಿಸ್ಥಿತಿ ತಿಳಿಯಾಗಿದ್ದರೂ ತ್ವೇಷಮಯ ವಾತಾವರಣ ನಿಯಂತ್ರಣಕ್ಕೆ ಬಂದಿದ್ದರೂ ರಾಜ್ಯಾದ್ಯಂತ ಅಂತರ್ಜಾಲ ನಿಷೇಧಿಸುವ ಆದೇಶವನ್ನು ಮಣಿಪುರ ಸರ್ಕಾರ ಪದೇ ಪದೇ ಹೊರಡಿಸುತ್ತಿದೆ ಎಂದು ಅರ್ಜಿದಾರರಾದ ವಕೀಲ ಚೋಂಗ್ಥಮ್ ವಿಕ್ಟರ್ ಸಿಂಗ್ ಮತ್ತು ಉದ್ಯಮಿ ಮಾಯೆಂಗ್‌ಬಾಮ್ ಜೇಮ್ಸ್ ಆರೋಪಿಸಿದ್ದಾರೆ.
ಮೈತೇಯಿ ಸಮುದಾಯವನ್ನು ತ್ವರಿತವಾಗಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವಂತೆ ಈ ವರ್ಷದ ಮಾರ್ಚ್‌ನಲ್ಲಿ, ಮಣಿಪುರ ಹೈಕೋರ್ಟ್ ನ್ಯಾಯಮೂರ್ತಿ ಎಂ ವಿ ಮುರಳೀಧರನ್ ಅವರು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದರು. ಇದು ವ್ಯಾಪಕ ಘರ್ಷಣೆಗೆ ಕಾರಣವಾಗಿ ಜೀವಹಾನಿ ಸಂಭವಿಸಿತ್ತು. ನ್ಯಾ. ಮುರಳೀಧರನ್ ಅವರ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ರಿಟ್ ಮೇಲ್ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠ ನೋಟಿಸ್ ನೀಡಿದ್ದು ನಾಳೆ (ಜೂನ್ 6) ವಿಚಾರಣೆ ನಡೆಯಲಿದೆ. ಅಂತರ್ಜಾಲ ಅಮಾನತಿನಲ್ಲಿಡುವ ಆದೇಶವನ್ನು ರಾಜ್ಯ ಸರ್ಕಾರ ಮೇ 26ರಂದು ಹೊರಡಿಸಿತ್ತು.
ಅರ್ಜಿಯ ಪ್ರಮುಖಾಂಶಗಳು
ಅಂತರ್ಜಾಲ ಸ್ಥಗಿತಗೊಳಿಸಿರುವುದರಿಂದ ರಾಜ್ಯದ ನಿವಾಸಿಗಳು ಭಯ, ಆತಂಕ, ಅಸಹಾಯಕತೆ ಮತ್ತು ಹತಾಶೆಯ ಭಾವನೆಗಳನ್ನು ಅನುಭವಿಸಿದ್ದಾರೆ ಮಾತ್ರವಲ್ಲ ತಮ್ಮ ಪ್ರೀತಿಪಾತ್ರರು ಅಥವಾ ಕಚೇರಿ ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವೈಯಕ್ತಿಕ, ವೃತ್ತಿಪರ, ಮತ್ತು ಸಾಮಾಜಿಕ ಸಂಬಂಧಗಳು ಬಸವಳಿಯುವಂತೆ ಆಗಿತ್ತು.
ಮಕ್ಕಳನ್ನು ಶಾಲೆಗೆ ಕಳುಹಿಸಲು, ಬ್ಯಾಂಕ್ ಖಾತೆ ಬಳಸಲು, ಹಣ ಪಾವತಿ ಅಥವಾ ಸಂದಾಯಕ್ಕೆ, ಅಗತ್ಯ ಸಾಮಗ್ರಿ ಮತ್ತು ಔಷಧ ಇತ್ಯಾದಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನಿಷೇಧದಿಂದಾಗಿ ಜೀವನ ಮತ್ತು ಜೀವನೋಪಾಯ ಸ್ಥಗಿತಗೊಂಡಿದೆ.
ವಾಕ್ ಸ್ವಾತಂತ್ರ್ಯ ಮತ್ತು ವ್ಯಾಪಾರ ಮತ್ತು ಉದ್ಯೋಗವನ್ನು ಮುಂದುವರಿಸುವ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಜನರಿಗೆ ಅವಕಾಶ ನೀಡದೆ ಇರುವುದರಿಂದ ಆದೇಶಗಳು ತಾರತಮ್ಯ ಎಸಗುತ್ತಿವೆ.
ಅಂತರ್ಜಾಲ ನಿಷೇಧದಿಂದ ಕಾನೂನುಬದ್ಧ ಗುರಿ ಈಡೇರುವುದಿಲ್ಲ ಈಗಿನ ಪರಿಸ್ಥಿತಿ ಗಮನಿಸಿದರೆ ಕಾನೂನು ಮತ್ತು ಸುವ್ಯವಸ್ಥೆಯ ಉದ್ದೇಶದೊಂದಿಗೆ ನಿಷೇಧ ನೇರ ಸಂಬಂಧ ಹೊಂದಿಲ್ಲ.
ಅಂತರ್ಜಾಲ ನಿಷೇಧ ಕುರಿತಾದ ಅಧಿಸೂಚನೆಗಳನ್ನು ಯಾವುದೇ ವೆಬ್‌ಸೈಟ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿಲ್ಲ. ಹೀಗಾಗಿ, ನಿವಾಸಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅಥವಾ ನಿಷೇಧ ಪ್ರಶ್ನಿಸಲು ಸಾಧ್ಯವಾಗಲಿಲ್ಲ.
ಆದ್ದರಿಂದ, ಎಲ್ಲಾ ಜಿಲ್ಲೆಗಳಲ್ಲಿ ಅಂತರ್ಜಾಲ ಸೇವೆ ಮತ್ತೆ ಆರಂಭಿಸಬೇಕು. ಹಾಗೂ ಅಂತರ್ಜಾಲ ಅಮಾನತು ಆದೇಶಗಳನ್ನು ಮತ್ತು ಪರಿಶೀಲನಾ ಸಮಿತಿಯ ಸಂಶೋಧನೆಗಳನ್ನು ಪ್ರಕಟಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು.