

ಸಿಬಿಐ ತನಿಖೆಯಲ್ಲಿ ಲೋಪ ಕಂಡುಬಂದಿದೆ ಎಂದು ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಸಿಬಿಐಗೆ ಸೂಚಿಸಿದೆ.
ಇದೇ ವೇಳೆ ಪ್ರಕರಣಗಳ ತನಿಖೆಯನ್ನು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುವ ಹೊಣೆಯನ್ನು ಗುವಾಹಟಿ ಮತ್ತು ಮಣಿಪುರ ಹೈಕೋರ್ಟ್‌ಗಳಿಗೆ ಒಪ್ಪಿಸುವ ಕುರಿತು ಸುಪ್ರೀಂ ಕೋರ್ಟ್ ಚರ್ಚಿಸಿತು.
ಮೇಲ್ವಿಚಾರಣಾ ಸಮಿತಿ ಇಂತಹ ವಿಚಾರಣೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಮರ್ಥವೇ ಎಂದು ಅನುಮಾನ ವ್ಯಕ್ತಪಡಿಸಿದ ಸಿಜೆಐ ಸೂರ್ಯಕಾಂತ್ ಮತ್ತು ನ್ಯಾ. ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಈ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸುವಂತೆ ಸೂಚಿಸಿತು.
ಮಣಿಪುರ ಹೈಕೋರ್ಟ್ ಮತ್ತು ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಪರಸ್ಪರ ಸಂಯೋಜನೆಯ ಮೂಲಕ ಮೇಲ್ವಿಚಾರಣಾ ವ್ಯವಸ್ಥೆಯನ್ನು ರೂಪಿಸಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
2023ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮಣಿಪುರ ಹಿಂಸಾಚಾರ ಪ್ರಕರಣಗಳ ವಿಚಾರಣೆ ಅಸ್ಸಾಂನಲ್ಲಿ ನಡೆಯುತ್ತಿದೆ. ಪ್ರಕರಣದ ಪಕ್ಷಕಾರರು ಮಣಿಪುರದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅವಕಾಶ ನೀಡಲಾಗಿದೆ.
ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವಂತೆ 2023ರ ಏಪ್ರಿಲ್‌ನಲ್ಲಿ ಮಣಿಪುರ ಹೈಕೋರ್ಟ್ ಸೂಚಿಸಿದ ಬಳಿಕ ಮೈತೇಯಿ ಮತ್ತು ಕುಕಿ ಜನಸಮುದಾಯಗಳ ನಡುವೆ ಹಿಂಸಾಚಾರ ತಾರಕಕ್ಕೇರಿತ್ತು. 2024ರಲ್ಲಿ ಮಣಿಪುರ ಹೈಕೋರ್ಟ್ ತಾನು ನೀಡಿದ್ದ ಆದೇಶ ಹಿಂಪಡೆದಿತ್ತು.
ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಿರುವ ವಿಚಾರವನ್ನು ಸಿಬಿಐ ಸಂತ್ರಸ್ತರಿಗೆ ತಿಳಿಸಿಲ್ಲ. ಅಲ್ಲದೆ ಆರೋಪಿಗಳು ಸಿಬಿಐ ಎದುರು ತನಿಖೆಗೆ ಹಾಜರಾಗಿಲ್ಲ ಎಂದು ಇಂದಿನ ವಿಚಾರಣೆ ವೇಳೆ ಅರ್ಜಿದಾರರ ಆತಂಕವನ್ನು ವಕೀಲೆ ವೃಂದಾ ಗ್ರೋವರ್ ನ್ಯಾಯಾಲಯದ ಮುಂದಿಟ್ಟರು.
ಆತಂಕಗಳನ್ನು ತಳ್ಳಿಹಾಕಲಾಗದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು. ಸಿಬಿಐ ಈ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು. ಬಾಧಿತರ ಹಕ್ಕುಗಳಿಗೆ ಧಕ್ಕೆಯಾಗಬಾರದು ಎಂದರು. ಇದೇ ವೇಳೆ ಮಣಿಪುರದಲ್ಲಿ ಶಾಂತಿ ನೆಲೆಸಿರುವ ವಿಚಾರವನ್ನು ಪ್ರಸ್ತಾಪಿಸಿದ ಅವರು ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್‌ಗಳಿಗೆ ವಹಿಸಿದರೆ ಅವು ಉತ್ತಮವಾಗಿ ನೋಡಿಕೊಳ್ಳಬಹುದು ಎಂಬ ಅಭಿಪ್ರಾಯಕ್ಕೂ ಬೆಂಬಲ ಸೂಚಿಸಿದರು.
ಪ್ರಕರಣಗಳ ಮೇಲ್ವಿಚಾರಣೆ ಮತ್ತು ಬಾಧಿತರ ಪುನರ್ವಸತಿ ಕುರಿತಾಗಿ ನೇಮಕಗೊಂಡ ಎರಡು ಸಮಿತಿಗಳು ಸಲ್ಲಿಸಿದ 27 ವರದಿಗಳು ಸಂತ್ರಸ್ತ ಪಕ್ಷಕಾರರಿಗೆ ಲಭಿಸಿಲ್ಲ. ಎಲ್ಲಾ ಪಕ್ಷಕಾರರಿಗೆ ವರದಿ ಲಭ್ಯವಾಗಬೇಕು. ಎಂದು ಕುಕಿ ಸಮುದಾಯ ಒಳಗೊಂಡ ಆದಿವಾಸಿ ವೇದಿಕೆಯ ಪರವಾಗಿ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ತಿಳಿಸಿದರು.
ಬಳಿಕ ನ್ಯಾಯಾಲಯ, ʼಬಾಧಿತರಿಗೆ ಉಚಿತ ಕಾನೂನು ನೆರವು ಒದಗಿಸಬೇಕು. ವರದಿಗಳಲ್ಲಿ ಸಂವೇದನಶೀಲ ವಿಷಯಗಳಿರಬಹುದು; ಆದ್ದರಿಂದ ಅವನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲದಿರಬಹುದುʼ ಎಂದು ಅಭಿಪ್ರಾಯಪಟ್ಟಿತು.