
ದೇವರು ಪೈಪೋಟಿ ಅಥವಾ ಪ್ರಾಬಲ್ಯ ಸಾಧಿಸುವ ಸಾಧನವಲ್ಲ. ವಿನಾಯಕ ಚತುರ್ಥಿ ವೇಳೆ ವಿಗ್ರಹ ಸ್ಥಾಪಿಸಲು ಕೋರಿ ಹಲವು ಅರ್ಜಿದಾರರು ಮನವಿ ಸಲ್ಲಿಸುವುದು ಶ್ರದ್ಧೆಯಿಂದಲ್ಲ ಬದಲಿಗೆ, ಪ್ರತಿಷ್ಠೆಯಿಂದ ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ತಿಳಿಸಿದೆ [ ಎಸ್ ಕುಮಾರ್ ಮತ್ತಿತರರು ಹಾಗೂ ಪೊಲೀಸ್ ಆಯುಕ್ತರು ಇನ್ನಿತರರ ನಡುವಣ ಪ್ರಕರಣ].
“ಕೆಲ ಪ್ರಕರಣಗಳಲ್ಲಿ ಅರ್ಜಿ ಸಲ್ಲಿಸುವುದರ ಹಿಂದಿನ ಪ್ರೇರಣೆಗಳನ್ನು ನ್ಯಾಯಾಲಯ ನಿರ್ಲಕ್ಷಿಸಲಾಗದು. ಇಂತಹ ಅರ್ಜಿಗಳಲ್ಲಿ ಬಹುತೇಕವು ನಿಜವಾದ ಧಾರ್ಮಿಕ ಉದ್ದೇಶಕ್ಕಿಂತ ಹೆಚ್ಚಾಗಿ ಅಹಂಕಾರದ ತಾಕಲಾಟ ಮತ್ತು ಹಣದ ಪ್ರಭಾವ ಸಾರುವ ಬಯಕೆಯಿಂದ ಸಲ್ಲಿಸಿದಂತೆ ಕಾಣುತ್ತವೆ. ವೈಯಕ್ತಿಕ ದ್ವೇಷ ಸಾಧಿಸಲು ಅಥವಾ ಸಾಮಾಜಿಕ ಪ್ರಾಬಲ್ಯ ಪ್ರದರ್ಶಿಸಲು ದೈವತ್ವ ಬಳಸಿಕೊಳ್ಳುವ ಅಭ್ಯಾಸವನ್ನು ನ್ಯಾಯಾಲಯ ಬಲವಾಗಿ ಖಂಡಿಸುತ್ತದೆ. ದೇವರು ಪೈಪೋಟಿಯ ಸಾಧನವಲ್ಲ ಬದಲಿಗೆ ಏಕತೆ, ಶಾಂತಿ ಹಾಗೂ ಆಧ್ಯಾತ್ಮಿಕ ಉನ್ನತಿಯ ಸಂಕೇತ " ಎಂದು ನ್ಯಾಯಮೂರ್ತಿ ಬಿ ಪುಗಳೇಂದಿ ಅವರಿದ್ದ ಪೀಠ ಹೇಳಿತು.
ಅಸಂಖ್ಯಾತ ಗಣೇಶನ ದೇವಸ್ಥಾನಗಳು ವರ್ಷವಿಡೀ ನಿರ್ಲಕ್ಷ್ಯಕ್ಕೆ ತುತ್ತಾದರೂ ವಿನಾಯಕ ಚತುರ್ಥಿ ಸಮಯದಲ್ಲಿ ದೈತ್ಯ ವಿಗ್ರಹ ಸ್ಥಾಪಿಸಲು ಭಾರೀ ಯತ್ನಗಳು ನಡೆಯುತ್ತವೆ. ಇಂತಹ ವಿರೋಧಾಭಾಸದ ಬಗ್ಗೆ ಭಕ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಜ ಭಕ್ತಿ ಇರುವುದು ಭವ್ಯತೆಯಲ್ಲಿ ಅಲ್ಲ ಬದಲಿಗೆ ಪೂಜಾ ಸ್ಥಳಗಳನ್ನು ನಿರಂತರವಾಗಿ ಗೌರವಿಸಿ, ನಿರ್ವಹಿಸುವುದರಲ್ಲಿ ಎಂದು ಅದು ತಿಳಿಸಿತು.
ಇದೇ ವೇಳೆ, ಸಾರ್ವಜನಿಕ ಶಾಂತಿ ಹಾಗೂ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹಬ್ಬವನ್ನು ಆಚರಿಸಬೇಕು. ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಪಾಲಿಸುವಂತೆ ಪೀಠ ಸೂಚನೆ ನೀಡಿದೆ.
ವಿಗ್ರಹ ಪ್ರತಿಷ್ಠಾಪನೆ ಕೋರಿ ಕಡೆಯ ಗಳಿಗೆಯಲ್ಲಿ ಅರ್ಜಿ ಸಲ್ಲಿಸುವುದರಿಂದ ಪರಿಸರ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಬಹಳ ಸಮಯ ಸಿಗುವುದಿಲ್ಲ ಎಂದು ಅದು ಹೇಳಿತು. ಜೊತೆಗೆ ಅರ್ಜಿಗಳನ್ನು ನಿಗದಿತ ರೀತಿಯಲ್ಲಿ ನಿರ್ವಹಿಸದ ಅಥವಾ ಆಯ್ದ ವರಿಗೆ ಮಾತ್ರ ಅನುಮತಿ ನೀಡಿದ ಅಧಿಕಾರಿಗಳನ್ನು ಟೀಕಿಸಿತು.
ವಿಗ್ರಹ ಸ್ಥಾಪಿಸಲು ಕೆಲವರಿಗೆ ಮಾತ್ರ ಅನುಮತಿ ನೀಡಿ ಇತರರಿಗೆ ನಿರಾಕರಿಸುವುದು ನ್ಯಾಯಯುತವಲ್ಲ. ಅದು ಅನಗತ್ಯ ಘರ್ಷಣೆಗೆ ಕಾರಣವಾಗಿ ಸಾರ್ವಜನಿಕರು ಸರ್ಕಾರದಲ್ಲಿ ಇರಿಸಿರುವ ವಿಶ್ವಾಸವನ್ನು ದುರ್ಬಲಗೊಳಿಸಬಹುದು. ಎಲ್ಲರ ಬಗ್ಗೆಯೂ ಒಂದೇ ರೀತಿಯ ತೀರ್ಮಾನ ಕೈಗೊಳ್ಳಬೇಕು ಎಂದಿತು.
ತಮಿಳುನಾಡು ಸರ್ಕಾರ 2018ರಲ್ಲಿ ನೀಡಿದ್ದ ಮಾರ್ಗಸೂಚಿ ಪ್ರಕಾರ, ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳಿಗೆ ಅನುಮತಿ ಇಲ್ಲ. ಪ್ರಮಾಣೀಕೃತ ಪರಿಸರ ಸ್ನೇಹಿ ಮೂರ್ತಿಗಳನ್ನಷ್ಟೇ ಕೆರೆ ಕಟ್ಟೆಗಳಲ್ಲಿ ವಿಸರ್ಜಿಸಬಹುದು; ಬೇರೆ ಬಗೆಯ ಮೂರ್ತಿಗಳನ್ನು ಕೃತಕ ಹೊಂಡಗಳಲ್ಲಿ ಮಾತ್ರವೇ ವಿಸರ್ಜಿಸಬೇಕು ಎಂದು ನ್ಯಾಯಾಲಯ ಆಗಸ್ಟ್ 26ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.
[ತೀರ್ಪಿನ ಪ್ರತಿ]