ಮರಾಠಾ ಮೀಸಲಾತಿ ಪ್ರಕರಣ: ಮೀಸಲಾತಿಯ ಬಳಿಯೇ ಏಕೆ ನಿಲ್ಲುತ್ತೀರಿ? ಜನರನ್ನು ಮೇಲೆತ್ತುವ ಕೆಲಸ ಮಾಡಿ-ಸುಪ್ರೀಂ ಕೋರ್ಟ್‌

“ಜನರನ್ನು ಮೇಲೆತ್ತುವ ಕೆಲಸಗಳನ್ನು ಏಕೆ ಮಾಡಬಾರದು. ಶಿಕ್ಷಣಕ್ಕೆ ಏಕೆ ಹೆಚ್ಚಿನ ಮಹತ್ವನೀಡಬಾರದು, ಹೆಚ್ಚೆಚ್ಚು ಸಂಸ್ಥೆಗಳನ್ನು ತೆರೆಯಿರಿ. ಎಲ್ಲೋ ಒಂದು ಕಡೆ ಇದು ಮೀಸಲಾತಿಯನ್ನು ಮೀರಬೇಕು” ಎಂದು ನ್ಯಾಯಮೂರ್ತಿ ರವೀಂದ್ರ ಭಟ್‌ ಹೇಳಿದ್ದಾರೆ.
Supreme Court
Supreme Court

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು (ಎಸ್‌ಇಬಿಸಿ) ಮೇಲೆತ್ತುವ ಕೆಲಸಗಳು ಮೀಸಲಾತಿಯನ್ನು ಮೀರಬೇಕು. ಶೈಕ್ಷಣಿಕ ಸಂಸ್ಥೆಗಳ ಸಂಖ್ಯೆ ಹೆಚ್ಚಿಸುವುದು, ಸೀಟುಗಳ ಸಂಖ್ಯೆ ಹೆಚ್ಚಿಸುವ ವಿಧಾನಗಳನ್ನು ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ (ಜೈಶ್ರೀ ಲಕ್ಷ್ಮಣರಾವ್‌ ಪಾಟೀಲ್‌ ವರ್ಸಸ್‌ ಮುಖ್ಯಮಂತ್ರಿ).

ಮರಾಠಾ ಮೀಸಲಾತಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಎಲ್‌ ನಾಗೇಶ್ವರ ರಾವ್‌, ಎಸ್‌ ಅಬ್ದುಲ್‌ ನಜೀರ್‌, ಹೇಮಂತ್‌ ಗುಪ್ತ ಮತ್ತು ಎಸ್‌ ರವೀಂದ್ರ ಭಟ್‌ ಅವರಿದ್ದ ಸಾಂವಿಧಾನಿಕ ಪೀಠವು ಮೇಲಿನ ವಿಚಾರಗಳನ್ನು ಪ್ರಸ್ತಾಪಿಸಿದೆ.

“ಮೀಸಲಾತಿಯ ಸುತ್ತಲೇ ಏಕೆ ಚರ್ಚೆ ನಡೆಸುತ್ತೀರಿ? ಇನ್ನಿತರ ಕೆಲಸಗಳನ್ನು ಏಕೆ ಮಾಡಬಾರದು. ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದರ ಜೊತೆಗೆ ಹೆಚ್ಚಿನ ಸಂಸ್ಥೆಗಳನ್ನು ಏಕೆ ಆರಂಭಿಸಬಾರದು. ಎಲ್ಲೋ ಒಂದು ಕಡೆ ಇದು ಮೀಸಲಾತಿಯನ್ನೂ ಮೀರಿದ್ದಾಗಿರಬೇಕು. ಜನರನ್ನು ಮೇಲೆತ್ತುವುದು ಎಂದರೆ ಮೀಸಲಾತಿ ಮಾತ್ರವಲ್ಲ. ಅದು ಇನ್ನೂ ಹೆಚ್ಚಿನದ್ದಾಗಿದೆ” ಎಂದು ನ್ಯಾಯಮೂರ್ತಿ ರವೀಂದ್ರ ಭಟ್‌ ಹೇಳಿದರು.

ಜಾತಿ ಕಾರಣದಿಂದ ಮಾತ್ರ ಪ್ರವೇಶದ ಕೊರತೆಯಾಗುವುದಿಲ್ಲ ಸೀಟುಗಳ ಮಿತಿಯಿಂದಲೂ ಅದು ಸಮಸ್ಯೆಯಾಗುತ್ತದೆ. ಅದನ್ನು ಪರಿಹರಿಸಬೇಕಿದೆ ಎಂದು ಅವರು ಹೇಳಿದ್ದಾರೆ. “ಹೆಚ್ಚಿನ ಸೀಟುಗಳು ಅಥವಾ ಸಂಸ್ಥೆಗಳು ಇಲ್ಲ ಎಂಬುದನ್ನು ಮನಗಾಣಬೇಕು. ಎಲ್ಲರೂ ಪ್ರವೇಶ ಪಡೆಯಬೇಕು ಆದರೆ, ಅಲ್ಲಿ ಅಷ್ಟು ಸೀಟುಗಳೇ ಇಲ್ಲ” ಎಂದರು.

ರಾಜ್ಯಗಳಿಂದ ರಾಜ್ಯಗಳಿಗೆ ಹಾಗೂ ಕೆಲವು ರಾಜ್ಯಗಳ ಒಳಗೇ ಹಿಂದುಳಿಯುವಿಕೆಯ ಪ್ರಮಾಣ ಭಿನ್ನವಾಗಿದೆ. ಇಡೀ ದೇಶಕ್ಕೆ ಶೇ. 50 ಮೀಸಲಾತಿ ಅನ್ವಯಿಸುವುದು ಸಾಮಾಜಿಕ ವಾಸ್ತವಗಳನ್ನು ಪರಿಗಣಿಸಿ ಮಾಡಿರುವಂಥದ್ದಲ್ಲ ಎಂದು ವಾದಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರ ವಾದಕ್ಕೆ ಪ್ರತಿಯಾಗಿ ನ್ಯಾ. ರವೀಂದ್ರ ಭಟ್‌ ಅವರು ಮೇಲಿನಂತೆ ಹೇಳಿದರು.

ಎಸ್‌ಇಬಿಸಿ ಸಮುದಾಯಗಳನ್ನು ಮೇಲೆತ್ತುವ ವಿಚಾರದಲ್ಲಿ ಮೀಸಲಾತಿಯನ್ನು ಹೊರತುಪಡಿಸಿ ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ ಎನ್ನುವುದಕ್ಕೆ ಸಹಮತ ವ್ಯಕ್ತಪಡಿಸಿದ ಸಿಬಲ್‌ ಅವರು ಮುಂದುವರೆದು, ಆದರೆ ಇದು ಕಾರ್ಯಾಂಗದ ವ್ಯಾಪ್ತಿಗೆ ಒಳಪಡುತ್ತದೆ. ಇದನ್ನು ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಿಟ್ಟುಕೊಡಬೇಕು ಎಂದರು.

1992ರಲ್ಲಿ ಶೇ. 50 ಮೀಸಲಾತಿ ನಿಗದಿಗೊಳಿಸುವ ಇಂದಿರಾ ಸಾಹ್ನಿ ವರ್ಸಸ್‌ ಭಾರತ ಸರ್ಕಾರ ಕುರಿತಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಮೇಲೆ ಹೇಳಲಾದ ಪ್ರಶ್ನೆಯನ್ನು (ಶೇ. 50 ಮೀಸಲಾತಿ) ಪರಿಗಣಿಸಿಲ್ಲ ಎಂಬುದರತ್ತ ಸಿಬಲ್‌ ತಮ್ಮ ವಾದದ ಸಂದರ್ಭದಲ್ಲಿ ಬೆರಳು ಮಾಡಿದರು. “ಮಂಡಲ್‌ ಆಯೋಗದ ವರದಿಯ ಕುರಿತು ಇಂದಿರಾ ಸಾಹ್ನಿ ಪ್ರಕರಣಕ್ಕೆ ಸಂಬಂಧವಿಲ್ಲ. ಸರ್ಕಾರದ ಆದೇಶದ ಸಿಂಧುತ್ವವನ್ನು ನಿರ್ಧರಿಸಲಷ್ಟೇ ಕೋರಲಾಗಿತ್ತೇ ಹೊರತು, ಶೇ. 50 ಮೀಸಲಾತಿ ಮಿತಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಪ್ರಶ್ನೆಯನ್ನು ರೂಪಿಸಿ ಅದನ್ನು ನಿರ್ಧರಿಸಲಾಗಿರಲಿಲ್ಲ” ಎಂದು ಅವರು ಹೇಳಿದರು.

ಸಿಬಲ್‌ ಅವರ ವಾದವು ಬಹುಮುಖ್ಯವಾಗಿ, 'ಇಂದಿರಾ ಸಾಹ್ನಿ ವರ್ಸಸ್‌ ಭಾರತ ಸರ್ಕಾರ'ದ ಪ್ರಕರಣದಲ್ಲಿ ಶೇ. 50 ಮೀಸಲಾತಿ ಮಿತಿಯನ್ನು ರೂಪಿಸಲಾಯಿತು ಎಂದು ನಂಬಲಾಗಿದೆ. ಆದರೆ, ಅಸಲಿಗೆ ಅಂತಹ ಯಾವುದೇ ಪ್ರಶ್ನೆಯನ್ನೇ ನ್ಯಾಯಾಲಯವು ಪರಿಗಣಿಸಿರಲಿಲ್ಲ ಎನ್ನುವುದಾಗಿತ್ತು.

“ದತ್ತಾಂಶ, ಅಂಕಿ-ಸಂಖ್ಯೆ ಇಲ್ಲದೇ ನೀವು ಶೇಕಡಾವಾರು ಮೀಸಲಾತಿಯನ್ನು ನಿಗದಿಗೊಳಿಸಲಾಗದು. ಇಂದಿರಾ ಸಾಹ್ನಿ ವಿಚಾರದಲ್ಲಿ ಯಾವುದೇ ದತ್ತಾಂಶ ಇರಲಿಲ್ಲ. ರಾಜ್ಯಗಳ ಪಟ್ಟಿಯಿಂದ ಹೆಚ್ಚಿನ ಜಾತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು” ಎಂದರು.

Also Read
[ಮರಾಠಾ ಮೀಸಲಾತಿ ಪ್ರಕರಣ] ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಯಲಿದೆ? ಸುಪ್ರೀಂ ಕೋರ್ಟ್‌ ಪ್ರಶ್ನೆ

ಮಂಡಲ್‌ ಆಯೋಗದ ಶಿಫಾರಸ್ಸಿನ ಕುರಿತು ದೇಶಾದ್ಯಂತ ವ್ಯಾಪಕ ವಿರೋಧ, ಹೋರಾಟಗಳು ನಡೆಯುತ್ತಿದ್ದ ಕ್ಲಿಷ್ಟ ಸಂದರ್ಭದಲ್ಲಿ ಇಂದಿರಾ ಸಾಹ್ನಿ ತೀರ್ಪು ಹೊರಬಿದ್ದಿತ್ತು. ಇದು ನ್ಯಾಯಿಕ ಕ್ರಿಯೆಯಾಗಿರಲಿಲ್ಲ ಬದಲಿಗೆ ಗೊಂದಲಕ್ಕೆ ತೆರೆ ಎಳೆಯುವ ಸಮತೋಲನ ಕ್ರಿಯೆಯಾಗಿತ್ತು” ಎಂದು ಸಿಬಲ್‌ ಹೇಳಿದರು.

ತಮ್ಮ ವಾದವನ್ನು ವಿಸ್ತರಿಸುತ್ತಾ, “ಕೇಂದ್ರೀಯ ವಿದ್ಯಾಲಯಗಳು ಏಕೆ ಇವೆ. ಇವು ನೂರಕ್ಕೆ ನೂರರಷ್ಟು ಸರ್ಕಾರಿ ಅಧಿಕಾರಿ, ಸಿಬ್ಬಂದಿಯ ಮಕ್ಕಳಿಗೆಂದೇ ಮೀಸಲಾಗಿವೆ. ಇದರಲ್ಲಿ ತಪ್ಪೇನೂ ಇಲ್ಲ. ಅಂತೆಯೇ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳು ಹೆಣ್ಣು ಮಕ್ಕಳಿಗೆ ಮತ್ತು ಅವರ ಸುಧಾರಣೆಗಾಗಿ ಇವೆ. ಇದರಲ್ಲಿಯೂ ಯಾವುದೇ ತಪ್ಪಿಲ್ಲ” ಎಂದರು. ಆ ಮೂಲಕ ಶೇ. 50 ಮಿತಿ ಎನ್ನುವುದು ಕಡ್ಡಾಯ ನಿಮಯವಲ್ಲ ಎಂದರು.

ಇದರ ಜೊತೆಗೆ ವಿಭಿನ್ನ ದೇಶಗಳಲ್ಲಿ ಉನ್ನತ ಶಿಕ್ಷಣ ಕೈಗೊಳ್ಳಲು ಮುಂದಾಗುವ ನೋಂದಣಿ ಸರಾಸರಿಯ ಬಗ್ಗೆಯೂ ಸಿಬಲ್‌ ಮಾಹಿತಿ ನೀಡಿದರು. ಜಿಇಆರ್ ಎನ್ನುವುದು ಉನ್ನತ ಶಿಕ್ಷಣಕ್ಕಾಗಿ ದಾಖಲಾಗುವ 18 ರಿಂದ 23 ವರ್ಷದೊಳಗಿನ ಜನಸಂಖ್ಯೆಯ ಅನುಪಾತವಾಗಿದೆ. ಅಮೆರಿಕದಲ್ಲಿ ಅದು ಶೇ. 88 ಇದ್ದರೆ ಭಾರತದಲ್ಲಿ ಈ ಪ್ರಮಾಣ ಶೇ. 27.4 ಮಾತ್ರ ಎಂದರು. ಯಾವುದೇ ಒಂದು ದೇಶದ ಅಭಿವೃದ್ಧಿಯು ಜಿಡಿಪಿ ಅಥವಾ ಒಟ್ಟು ಕೈಗಾರಿಕಾ ಉತ್ಪನ್ನದ ಮೇಲೆ ಅವಲಂಬಿತವಾಗಿರುವುದಿಲ್ಲ. ಅದು ಜಿಇಆರ್‌ ಮೇಲೆ ಅವಲಂಬಿತವಾಗಿದೆ ಎಂದರು.

Kannada Bar & Bench
kannada.barandbench.com