ವೈವಾಹಿಕ ಅತ್ಯಾಚಾರ ತೀರ್ಪು ಅತೀವ ಸ್ತ್ರೀ ವಿರೋಧಿ ಮತ್ತು ಸಮಸ್ಯಾತ್ಮಕ: ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್

ನ್ಯಾಯಾಂಗ ಹೆಚ್ಚು ಲಿಂಗಸೂಕ್ಷ್ಮತೆ ಬೆಳೆಸಿಕೊಳ್ಳಲು ದೇಶದ ಮಹಿಳಾ ಚಳವಳಿ ಮತ್ತು ಪ್ರಗತಿಪರ ನ್ಯಾಯಶಾಸ್ತ್ರಜ್ಞರ ವಿಶೇಷ ಪ್ರಭಾವವಿದೆ ಎಂದು ಅವರು ಹೇಳಿದ್ದಾರೆ.
ವೈವಾಹಿಕ ಅತ್ಯಾಚಾರ ತೀರ್ಪು ಅತೀವ ಸ್ತ್ರೀ ವಿರೋಧಿ ಮತ್ತು ಸಮಸ್ಯಾತ್ಮಕ: ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್
A1

ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವುದರ ವಿರುದ್ಧ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಿ ಹರಿಶಂಕರ್ ಅವರು ನೀಡಿದ್ದ ತೀರ್ಪು ತೀವ್ರ ಸ್ತ್ರೀ ವಿರೋಧಿಯಾಗಿದ್ದು ಸಮಸ್ಯಾತ್ಮಕವಾಗಿದೆ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ʼಬಿಹೈಂಡ್‌ ದ ಬಾರ್‌ʼಗೆ ನೀಡಿದ ಸಂದರ್ಶನದಲ್ಲಿ ಅವರು ಯಾವುದೇ ನ್ಯಾಯಾಧೀಶರು ಮಹಿಳೆಯನ್ನು ಗಂಡನ ಆಸ್ತಿ ಎಂದು ಅರ್ಥೈಸಿಕೊಂಡು ಪ್ರಕರಣವನ್ನು ನಿರ್ಧರಿಸುವುದು ಸಮಸ್ಯಾತ್ಮಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹೆಂಡತಿಯಾದ ಮಾತ್ರಕ್ಕೆ ಸಮಾನತೆಯ ಹಕ್ಕನ್ನು ಮಹಿಳೆ ಸುಲಭವಾಗಿ ಕಳೆದುಕೊಳ್ಳುವುದಿಲ್ಲ ಎಂದ ಅವರು ತೀರ್ಪು ಬದಲಾಗಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದುವರೆದು ತೀರ್ಪಿನ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುತ್ತಾ, "ವಾಸ್ತವವಾಗಿ, (ಇದರಿಂದ) ಸಾಮಾನ್ಯ ಕಾನೂನಿನಲ್ಲಿ, ಮಹಿಳೆ ತನ್ನ ಕಾನೂನಾತ್ಮಕ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾಳೆ. ಆಕೆಯ ಅಸ್ಮಿತೆ ಗಂಡನೊಂದಿಗೆ ವಿಲೀನವಾಗಿಬಿಡುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರನ್ನು ನಾಗರಿಕರನ್ನಾಗಿ ಗುರುತಿಸುವ ಸಂವಿಧಾನಕ್ಕೆ ಇದು ಹೇಗೆ ಹೊಂದಾಣಿಕೆಯಾಗಬಲ್ಲದು? ಹೆಂಡತಿಯಾದಾಗ ನೀವು ಸಮಾನತೆಯ ಹಕ್ಕನ್ನು ಕಳೆದುಕೊಳ್ಳುತ್ತೀರಿ ಎಂದು ಹೇಳಲು ಸಾಧ್ಯವಿಲ್ಲ” ಎಂದು ವಿವರಿಸಿದ್ದಾರೆ.

ಆದರೂ ನ್ಯಾಯಾಂಗ ಲಿಂಗಸೂಕ್ಷ್ಮತೆ ಬೆಳೆಸಿಕೊಳ್ಳುವತ್ತ ದೇಶದ ಮಹಿಳಾ ಚಳವಳಿ ಮತ್ತು ಪ್ರಗತಿಪರ ನ್ಯಾಯಶಾಸ್ತ್ರಜ್ಞರ ವಿಶೇಷ ಪ್ರಭಾವವಿದೆ. ಮಾಡಬೇಕಾದ್ದು ಬಹಳಷ್ಟಿದ್ದರೂ ಭರವಸೆಯ ಕಿರಣಗಳು ಗೋಚರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

Also Read
ನ್ಯಾಯಾಂಗದ ಕಾರ್ಯವೈಖರಿ ಕುರಿತಂತೆ ಇಂದಿರಾ ಜೈಸಿಂಗ್ ಹಾಗೂ ನ್ಯಾ. ಸಿಖ್ರಿ ಹೇಳಿದ್ದೇನು?

ಹಿರಿಯ ನ್ಯಾಯವಾದಿ ಹುದ್ದೆ ಕುರಿತು:

“ವಕೀಲ ವೃತ್ತಿಯಲ್ಲಿರುವ 'ವಂಶ ಪಾರಂಪರ್ಯತೆ'ಯನ್ನು ಬದಲಿಸುವ ಸಲುವಾಗಿ ಸುಪ್ರೀಂ ಕೋರ್ಟ್‌ನಲ್ಲಿ ತಾನು ಅರ್ಜಿ ಸಲ್ಲಿಸಿದ್ದಾಗಿ ಅವರು ಹೇಳಿದರು."ವಕೀಲ ವೃತ್ತಿ ತುಂಬಾ ಶ್ರೇಣೀಕೃತವಾಗಿದೆ. ಅದೇ ರೀತಿ ನ್ಯಾಯಾಂಗ ಮತ್ತು ವೃತ್ತಿ ಎಂಬುದು ವಂಶಪಾರಂಪರ್ಯ ಉದ್ಯೋಗವಾಗಿ ಮಾರ್ಪಟ್ಟಿದೆ. ಜನರು ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ವಕೀಲ ವೃತ್ತಿಯಲ್ಲಿ ಕೂಡ ವಂಶ ಪಾರಂಪರ್ಯತೆ ಇದ್ದು ಇದನ್ನು ನನ್ನ ಜೀವನದುದ್ದಕ್ಕೂ ವಿರೋಧಿಸಲು ಬಯಸುವೆ” ಎಂದು ಅವರು ಹೇಳಿದರು.

ಹಿರಿಯ ನ್ಯಾಯವಾದಿ ಹುದ್ದೆಗೆ ಸಂದರ್ಶನ ನಡೆಸುವುದು ಹಾಗೂ ಇಂತಹ ನೇಮಕಾತಿಗಾಗಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಏಕ ರೀತಿಯ ಮಾನದಂಡ ಜಾರಿಗೆ ತರುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು "ವಕೀಲ ವರ್ಗವನ್ನು ಜನಸತ್ತಾತ್ಮಕವಾಗಿಸುವ ಯಾನ ಈಗ ಆರಂಭವಾಗಿದೆ" ಎಂದರು.

ಸವಲತ್ತುಗಳಿಲ್ಲದೇ ಬರುವ, ಮೊದಲ ತಲೆ ಮಾರಿನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮತ್ತು ಇತರ ಹಿಂದುಳಿದ ಸಮುದಾಯಗಳಿಗೆ ಸೇರಿದ ವಕೀಲರನ್ನು ಪ್ರೋತ್ಸಾಹಿಸಲು ಈ ವೃತ್ತಿ ಏನು ಮಾಡಿದೆ? ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com