ದೆಹಲಿ ಲೆ. ಗವರ್ನರ್ ಹೂಡಿರುವ ಮಾನನಷ್ಟ ಮೊಕದ್ದಮೆ: ಹೈಕೋರ್ಟ್ ಮೆಟ್ಟಿಲೇರಿದ ಮೇಧಾ ಪಾಟ್ಕರ್

ಸುಮಾರು 25 ವರ್ಷಗಳ ಹಿಂದಿನ ಮಾನಹಾನಿ ಪ್ರಕರಣದಲ್ಲಿ ಮೇಧಾ ಪಾಟ್ಕರ್‌ ಅವರಿಗೆ ಐದು ತಿಂಗಳ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಲಾಗಿತ್ತು.
Medha Patkar and VK Saxena
Medha Patkar and VK Saxena facebook and x.com
Published on

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 2001ರಲ್ಲಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತಮಗೆ ಐದು ತಿಂಗಳ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ ವಿಧಿಸಿದ ಆದೇಶ ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ .

ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಾಲಿಂದರ್ ಕೌರ್ ಪ್ರಕರಣವನ್ನು ಮೇ 19ಕ್ಕೆ ಮುಂದೂಡಿದರು.

Also Read
ಮಾನಹಾನಿ ಪ್ರಕರಣ: ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ಗೆ 5 ತಿಂಗಳ ಸಜೆ ವಿಧಿಸಿದ ದೆಹಲಿ ನ್ಯಾಯಾಲಯ

ಸೆಷನ್ಸ್ ನ್ಯಾಯಾಧೀಶರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಶಿಕ್ಷೆ ಮತ್ತು ಶಿಕ್ಷೆಯ ವಿರುದ್ಧದ ಮೇಧಾ ಅವರ ಮೇಲ್ಮನವಿಯನ್ನು ವಜಾಗೊಳಿಸಿದ್ದಾರೆ. ಏಪ್ರಿಲ್ 8 ರಂದು ಶಿಕ್ಷೆ ವಿಧಿಸಲು ಪ್ರಕರಣವನ್ನು ಪಟ್ಟಿ ಮಾಡಿದ್ದು ಮೇಧಾ  ಅವರನ್ನು ಖುದ್ದಾಗಿ ಹಾಜರಾಗುವಂತೆ ಆದೇಶಿಸಿದ್ದಾರೆ ಎಂದು ಮೇಧಾ ಅವರ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು.

ಖುದ್ದು ಹಾಜರಾಗುವಂತೆ ಆದೇಶಿಸುವ ಅಧಿಕಾರ ಸೆಷನ್ಸ್‌ ನ್ಯಾಯಾಧೀಶರಿಗೆ ಇಲ್ಲ. ಮೇಧಾ ಅವರು ವರ್ಚುವಲ್‌ ವಿಚಾರಣೆಯ ಮೂಲಕ ಹಾಜರಾಗಲು ಅನುಮತಿ ಕೋರಿ ಅರ್ಜಿ ಸಲ್ಲಿಸುವುದಾಗಿ ಹೇಳಿದರು. 

ಆದರೆ ಅರ್ಜಿ ಅಕಾಲಿಕ ಎಂದ ನ್ಯಾ. ಕೌರ್‌ ವರ್ಚುವಲ್‌ ವಿಚಾರಣೆಯ ಮೂಲಕ ಹಾಜರಾತಿಗೆ ಅನುಮತಿ ಕೋರಿ ಸಲ್ಲಿಸುವ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಲಿದೆ ಎಂದರು.

ಪಾಟ್ಕರ್ ಅವರನ್ನು ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಶಾಲ್ ಸಿಂಗ್ ಅವರು ಏಪ್ರಿಲ್ 2ರಂದು ಎತ್ತಿಹಿಡಿದಿದ್ದರು.

Also Read
ಮಾನನಷ್ಟ ಮೊಕದ್ದಮೆ: ದೆಹಲಿ ಲೆ. ಗವರ್ನರ್‌ ಹೂಡಿದ್ದ ಪ್ರಕರಣದಲ್ಲಿ ಹೋರಾಟಗಾರ್ತಿ ಮೇಧಾ ಪಾಟ್ಕರ್ ದೋಷಿ ಎಂದ ನ್ಯಾಯಾಲಯ

ನರ್ಮದಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಮೇಧಾ ಅವರು ಸಂಘಟಿಸಿದ್ದ ನರ್ಮದಾ ಬಚಾವೋ ಆಂದೋಲನದ ವಿರುದ್ಧ ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್ ಸಂಘಟನೆಯ ಅಧ್ಯಕ್ಷರಾಗಿದ್ದ ಸಕ್ಸೇನಾ ಅವರು 2000ನೇ ಇಸವಿಯಲ್ಲಿ ಜಾಹೀರಾತು ಪ್ರಕಟಿಸಿದ್ದರು.

ಈ ಹಿನ್ನೆಲೆಯಲ್ಲಿ ಮೇಧಾ ಅವರು ಸಕ್ಸೇನಾ ಅವರ ವಿರುದ್ಧ ಪತ್ರಿಕಾ ಪ್ರಕಟಣೆ ನೀಡಿದ್ದರು. ಇದರಲ್ಲಿ ಮಾಡಲಾದ ಆರೊಪಗಳನ್ನು ಆಧರಿಸಿ ಸಕ್ಸೇನಾ 2001ರಲ್ಲಿ ಅಹಮದಾಬಾದ್‌ನ ನ್ಯಾಯಾಲಯದಲ್ಲಿ ಮೇಧಾ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದರು.

Kannada Bar & Bench
kannada.barandbench.com