
ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಧ್ಯಮ ವಿಚಾರಣೆ ಹಾಗೂ ಸಾರ್ವಜನಿಕವಾಗಿ ನೀಡುವ ಹೇಳಿಕೆಗಳು ನ್ಯಾಯಾಧೀಶರ ಮೇಲೆ ಒತ್ತಡ ಹೇರುವುದರಿಂದ ನ್ಯಾಯ ವಿತರಣಾ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಆತಂಕ ವ್ಯಕ್ತಪಡಿಸಿದ್ದಾರೆ.
ʼಭೀತಿ ಅಥವಾ ಪಕ್ಷಪಾತ ರಹಿತವಾಗಿ ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ನ್ಯಾಯಾಂಗದೆಡೆಗೆʼ ಎಂಬ ವಿಚಾರವಾಗಿ ಅಖಿಲ ಭಾರತ ವಕೀಲರ ಸಂಘ ಶನಿವಾರ ಆಯೋಜಿಸಿದ್ದ ವೆಬಿನಾರ್ನಲ್ಲಿ ಅವರು ಮಾತನಾಡಿದರು.
ಆರ್‌ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿರುವ ಹೇಳಿಕೆಗಳನ್ನು ನ್ಯಾಯಮೂರ್ತಿ ಓಕಾ ಈ ಸಂದರ್ಭದಲ್ಲಿ ಪರೋಕ್ಷವಾಗಿ ಉಲ್ಲೇಖಿಸಿದರು.
"ತನಿಖೆ ನಡೆಯುತ್ತಿರುವಾಗ ಆರೋಪಿಗಳನ್ನು ಗಲ್ಲಿಗೇರಿಸುವುದಾಗಿ ಮುಖ್ಯಮಂತ್ರಿಯೊಬ್ಬರು ಹೇಳಿಕೆ ನೀಡಿದ ಸಂದರ್ಭಗಳು ನಮ್ಮ ಮುಂದಿವೆ. ಇದು ನ್ಯಾಯಾಂಗ ಅಧಿಕಾರಿಗಳ ಮೇಲೆ ಒತ್ತಡ ಉಂಟುಮಾಡುತ್ತದೆ. ಪ್ರತೀಕಾರದ ಸಿದ್ಧಾಂತದ ಕಾರಣಕ್ಕಾಗಿ ಹೀಗಾಗುತ್ತದೆ. ಮರಣದಂಡನೆ ಬೇಕೇ ಬೇಡವೇ ಎಂಬುದನ್ನು ಸೆಷನ್ಸ್ ನ್ಯಾಯಾಧೀಶರು ನಿರ್ಧರಿಸಬೇಕೆ ವಿನಾ ಬೇರೆ ಯಾರೋ ಅಲ್ಲ”ಎಂದು ಅವರು ಹೇಳಿದರು.
ನ್ಯಾ. ಓಕಾ ಅವರ ಭಾಷಣದ ಪ್ರಮುಖಾಂಶಗಳು
ಪ್ರತಿಯೊಬ್ಬ ನಾಗರಿಕನೂ ತೀರ್ಪನ್ನು ಟೀಕಿಸಬಹುದು ಆದರೆ ಅಂತಹ ಟೀಕೆಗಳು ಕಾನೂನು ನೆಲೆಯಲ್ಲಿರಬೇಕು.
ನ್ಯಾಯಾಧೀಶರು ಸಾಮಾಜಿಕ ಮಾಧ್ಯಮ ಇಲ್ಲವೇ ಮಾಧ್ಯಮದ ಒತ್ತಡಕ್ಕೆ ಮಣಿದರೆ ಆಗ ಅವರು ನೀಡುವುದು ಕೇವಲ ನೈತಿಕ ದಂಡನೆಯಾಗುತ್ತದೆ.
ನ್ಯಾಯಾಂಗ ಅಧಿಕಾರಿಗಳ ವಿರುದ್ಧ ಕ್ಷುಲ್ಲಕ ದೂರು ನೀಡಲಾಗುತ್ತಿದೆ. ಅವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ನ್ಯಾಯಾಂಗ ಅಧಿಕಾರಿಗಳೂ ಮನುಷ್ಯರು. ದೂರುಗಳು ಪುನರಾವರ್ತಿತವಾದರೆ ಅದು ಅವರ ಮೇಲೆ ಪರಿಣಾಮ ಬೀರುತ್ತದೆ.
ನ್ಯಾ. ಹೃಷಿಕೇಶ್ ರಾಯ್ (ಶುಕ್ರವಾರ ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು) ಸಂದರ್ಶನವೊಂದರಲ್ಲಿ ನ್ಯಾಯಾಧೀಶರಿಗೆ ಏಕೆ ರಕ್ಷಣೆ ಅಗತ್ಯ ಎಂಬುದನ್ನು ಹೇಳಿದರು. ನ್ಯಾಯಾಧೀಶರು ನಿರ್ಭೀತವಾಗಿ, ನಿಸ್ಪಕ್ಷಪಾತವಾಗಿ ಕೆಲಸ ಮಾಡಬೇಕಾದರೆ ಅವರಿಗೆ ರಕ್ಷಣೆ ದೊರೆಯಬೇಕು.
ವಿಚಾರಣಾ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಾಧೀಶರಿಗೆ ಸಾಕಷ್ಟು ಕಾನೂನು ರಕ್ಷಣೆ ಇಲ್ಲ.
ನ್ಯಾಯಾಧೀಶರು ನಿರ್ಭೀತ, ನಿಸ್ಪಕ್ಷಪಾತವಾಗಿ ಕೆಲಸ ಮಾಡಲು ವಕೀಲ ಸಮುದಾಯದ ಬೆಳಬಲ ಅಗತ್ಯವಿದೆ. ಕೆಲ ನ್ಯಾಯಾಂಗ ಅಧಿಕಾರಿಗಳು ಅವ್ಯವಹಾರದಲ್ಲಿ ತೊಡಗಿದ್ದನ್ನೇ ಆಧಾರವಾಗಿಟ್ಟುಕೊಳ್ಳಲಾಗದು.
ಸಮನ್ಸ್‌ಗಳನ್ನು ತಲುಪಿಸುವಲ್ಲಿ ವಿಳಂಬ, ನ್ಯಾಯಾಧೀಶರಿಗೆ ವಕೀಲರ ಬೆಂಬಲದ ಕೊರತೆ, ಸುದೀರ್ಘ ಪಾಟಿ ಸವಾಲುಗಳು ನ್ಯಾಯಾಂಗವನ್ನು ಬಾಧಿಸುತ್ತಿವೆ.
ವಕೀಲ ಸಮುದಾಯ ನ್ಯಾಯಾಂಗ ಅಧಿಕಾರಿಗಳಂತೆ ಕಾರ್ಯನಿರ್ವಹಿಸದ ಹೊರತು, ನ್ಯಾಯದ ಗುಣಮಟ್ಟ ನಿರೀಕ್ಷಿಸಿದ ಮಟ್ಟಕ್ಕೆ ಏರುವುದಿಲ್ಲ.
ಜಿಲ್ಲೆ, ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಸಮಸ್ಯೆ ಇದೆ. ಆನ್‌ಲೈನ್ ಸೌಕರ್ಯ ಇರಲಿ ವಿದ್ಯುತ್ ಸೌಲಭ್ಯವೂ ಸರಿಯಾಗಿ ದೊರೆಯುವುದಿಲ್ಲ. ಮಹಿಳಾ ನ್ಯಾಯಾಧೀಶೆಯರಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ.
ಬಹುತೇಕ ಹೈಕೋರ್ಟ್‌ಗಳು ಸುಂದರ ಕಟ್ಟಡಗಳನ್ನು ಹೊಂದಿವೆ. ಆದರೆ ವಿಚಾರಣಾ ನ್ಯಾಯಾಲಯಗಳನ್ನು ನಿರ್ಲಕ್ಷಿಸಲಾಗಿದೆ.
ಮತ್ತೊಂದು ಉತ್ತಮ ಸಂಸ್ಥೆಯಷ್ಟೇ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಗೆ ಪರ್ಯಾಯವಾಗುತ್ತದೆ.