
ಶತಕೋಟಿ ಡಾಲರ್ ಮೌಲ್ಯದ ಸ್ಟಾರ್ಟ್‌ಅಪ್ ಉದ್ಯಮ ರಿಪ್ಲಿಂಗ್ ಸಹ-ಸಂಸ್ಥಾಪಕ ಪ್ರಸನ್ನ ಶಂಕರ್ ಮತ್ತು ಅವರ ಪತ್ನಿ ದಿವ್ಯಾ ಶಶಿಧರ್ ನಡುವಿನ ವೈವಾಹಿಕ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ದಿವ್ಯಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ.
ದಿವ್ಯಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ನಾಗಮುತ್ತು, ಶಂಕರ್ ಅವರು ತಮ್ಮ ಕಕ್ಷಿದಾರರ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಲಾಗಿದೆ ಎಂದು ವಾದಿಸಿದರು.
“ಪತಿ (ಪ್ರಸನ್ನ) ಕಳಿಸಿರುವ ಸಂದೇಶಗಳಲ್ಲಿ ಆಕೆಯನ್ನು (ಪತ್ನಿಯನ್ನು) ವೇಶ್ಯೆ ಎಂದು ಕರೆಯಲಾಗಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಇಬ್ಬರ ಮೇಲೂ ನಿರ್ಬಂಧವಿರಲಿ” ಎಂದು ಅವರು ಹೇಳಿದರು.
ಇದಕ್ಕೆ ನ್ಯಾ. ಸುಂದರೇಶ್ "ಹೌದು, ಹೌದು ನಾವು ಗಮನಿಸಿದೆವು...ಇದು ಮಧ್ಯಸ್ಥಿಕೆಗೆ ವಹಿಸಬೇಕಾದ ವಿಷಯ." ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ನ್ಯಾ. ಬಿಂದಾಲ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ವೈವಾಹಿಕ ವ್ಯಾಜ್ಯ ನಡೆಯುತ್ತಿರುವಾಗಲೇ, ತಮ್ಮ ಮಗನನ್ನು ಅಪಹರಿಸಿ ದೇಶದಿಂದ ಹೊರಗೆ ಕರೆದೊಯ್ಯುವ ಯತ್ನ ನಡೆಸಲಾಗುತ್ತಿದೆ ಎಂದು ಪ್ರಸನ್ನ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈಚೆಗೆ ಅಳಲು ತೋಡಿಕೊಂಡಿದ್ದು ವೈರಲ್ ಆಗಿತ್ತು.
ತನ್ನ ಪರಿತ್ಯಕ್ತ ಪತ್ನಿ ಸುಳ್ಳು ಅಪಹರಣ ದೂರು ದಾಖಲಿಸಿರುವುದರಿಂದ ತಮಿಳುನಾಡು ಪೊಲೀಸರು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಮತ್ತು ಮಗನನ್ನು ತನ್ನಿಂದ ದೂರವಿಡಲು ಯತ್ನಿಸುತ್ತಿದ್ದಾರೆ ಎಂದು ಶಂಕರನಾರಾಯಣನ್ ಆರೋಪಿಸಿದ್ದರು.
ಅಂತೆಯೇ ಶಂಕರ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಕಿರುಕುಳ ನೀಡದಂತೆ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
ದಿವ್ಯಾ ಅವರು ತಮ್ಮ ಪತಿಯ ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮ ಮಗ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಲಷ್ಟೇ ಅಪಹರಣ ದೂರು ದಾಖಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.