ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ವಿಳಂಬ ಧೋರಣೆಯನ್ನು ಎಂದಿಗೂ ಕ್ಷಮಿಸಲಾಗದು: ಮದ್ರಾಸ್ ಹೈಕೋರ್ಟ್

ವೈದ್ಯಕೀಯ ತುರ್ತುಪರಿಸ್ಥಿತಿಗಳನ್ನು ಎದುರಿಸುವ ಸಲುವಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆಂಬುಲೆನ್ಸ್ ಹೊಂದಿರಬೇಕು ಎಂದು ನ್ಯಾಯಾಲಯ ಪುನರುಚ್ಚರಿಸಿದೆ.
Ambulance
AmbulanceImage for representative purposes
Published on

ಪ್ರಸವಾನಂತರದ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ ಮಹಿಳೆಯೊಬ್ಬರಿಗೆ ಇತ್ತೀಚೆಗೆ ರೂ 5 ಲಕ್ಷ ಪರಿಹಾರ ನೀಡಿದ ಮದ್ರಾಸ್‌ ಹೈಕೋರ್ಟ್‌ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆಂಬುಲೆನ್ಸ್‌ ಹೊಂದಿರಬೇಕು ಎಂದು ಪುನರುಚ್ಚರಿಸಿದೆ.

ಈ ನಿಟ್ಟಿನಲ್ಲಿ ನ್ಯಾಯಮೂರ್ತಿ ಆನಂದ್‌ ವೆಂಕಟೇಶ್‌ ಅವರು ಪಿಬಿ ಖೇತ್‌ ಮಜ್ದೂರ್‌ ಸಮಿತಿ ಮತ್ತು ಪಶ್ಚಿಮ ಬಂಗಾಳ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪು ಹಾಗೂ ನಂತರ ತಂಗಪಂಡಿ ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳ ನಿರ್ದೇಶಕರ ನಡುವಣ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದರು.

ಜೀವ ಉಳಿಸುವ ವಿಚಾರದಲ್ಲಿ ಪ್ರತಿ ಕ್ಷಣವೂ ಲೆಕ್ಕಕ್ಕೆ ಬರುತ್ತದೆ ಮತ್ತು ಕೆಲವೇ ನಿಮಿಷಗಳಷ್ಟು ತಡವಾದರೂ ವ್ಯಕ್ತಿ ಸಾವನ್ನಪ್ಪಬಹುದು. ಆದ್ದರಿಂದ ಉಳಿದ ಪ್ರಕರಣಗಳಲ್ಲಿ ಮೃದು ಧೋರಣೆ ತಳೆದಂತೆ ವೈದ್ಯಕೀಯ ತುರ್ತುಪರಿಸ್ಥಿತಿ ಇದ್ದಾಗ ವಿಳಂಬವನ್ನು ಎಂದಿಗೂ ಕ್ಷಮಿಸಲಾಗದು. ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳನ್ನು ಸಾಗಿಸಲು ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಆಂಬುಲೆನ್ಸ್‌ ವ್ಯವಸ್ಥೆ ಹೊಂದಿರಬೇಕು ಎಂದು ಪೀಠ ತಿಳಿಸಿತು.

Also Read
ಲೈಂಗಿಕ ಮನೋಭಾವ ಬದಲಿಸುವ ವೈದ್ಯಕೀಯ ಯತ್ನ ನಿಷೇಧಿಸಿದ ಮದ್ರಾಸ್‌ ಹೈಕೋರ್ಟ್‌; ಶಾಲಾ, ಕಾಲೇಜು ಪಠ್ಯಕ್ರಮ ಬದಲಿಗೆ ಸಲಹೆ

ಕನ್ಯಾಕುಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾದ ಕೆಲವೇ ಗಂಟೆಗಳ ನಂತರ ಟಿ ರಾಜಗೋಪಾಲ್ ಎಂಬುವವರ ಪತ್ನಿ 2012ರ ಜೂನ್‌ನಲ್ಲಿ ನಿಧನರಾಗಿದ್ದರು. ಅವರಿಗೆ ರಕ್ತ ನೀಡಬೇಕಾಗಿದ್ದರಿಂದ ಅಸರಿಪಲ್ಲಂನ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲು ವೈದ್ಯರು ತಿಳಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ಆಂಬ್ಯುಲೆನ್ಸ್ ಸುಲಭವಾಗಿ ಲಭ್ಯ ಇರಲಿಲ್ಲ, 108 ಆಂಬ್ಯುಲೆನ್ಸ್ ಕರೆ ಮಾಡಿದಾಗ ಅದು ತಡವಾಗಿ ಬಂದಿತ್ತು. ಅವರನ್ನು ವೈದ್ಯಕೀಯ ಕಾಲೇಜಿಗೆ ಸೇರಿಸುವಷ್ಟರಲ್ಲಿ ಸಾಕಷ್ಟು ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಪ್ರಸವಾನಂತರದ ರಕ್ತಸ್ರಾವದಿಂದ ಮೃತಪಟ್ಟಿದ್ದರು.

ವೈದ್ಯರಿಂದ ನಿರ್ಲಕ್ಷ್ಯ ಉಂಟಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ನ್ಯಾ. ಆನಂದ್‌ ವೆಂಕಟೇಶ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್‌ ಇಲ್ಲದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರು. ಈ ಹಿನ್ನೆಲೆಯಲ್ಲಿ ಕಾರ್ಪಸ್‌ ಫಂಡ್‌ನಿಂದ ರೂ 5 ಲಕ್ಷ ಪರಿಹಾರ ಒದಗಿಸುವಂತೆ ಆದೇಶಿಸಿದರು.

Kannada Bar & Bench
kannada.barandbench.com