ತುಮಕೂರಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಆನೆ ʼಲಕ್ಷ್ಮಿʼಗೆ ತುರ್ತಾಗಿ ವೈದ್ಯಕೀಯ ಚಿಕಿತ್ಸೆ ನೀಡುವುದರ ಜೊತೆಗೆ ಅದನ್ನು ವಶಕ್ಕೆ ಪಡೆದು, ಆನೆ ಶಿಬಿರಕ್ಕೆ ರವಾನಿಸುವಂತೆ ಅರಣ್ಯ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿರುವ ಮನವಿಗೆ ಸಂಬಂಧಿಸಿದಂತೆ ಮಠದ ಆಡಳಿತಾಧಿಕಾರಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ರಾಜ್ಯ ಸರ್ಕಾರಕ್ಕೆ ಮುಂದಿನ ವಿಚಾರಣೆ ವೇಳೆಗೆ ಆಕ್ಷೇಪಣೆ ಸಲ್ಲಿಸಲು ಪೀಠವು ನಿರ್ದೇಶಿಸಿದೆ.
ಪೀಪಲ್ ಫಾರ್ ಅನಿಮಲ್ಸ್ ಮೈಸೂರು ಮತ್ತು ಊರ್ಮಿ ಭಟ್ಟಾಚಾರ್ಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ಪರ ವಕೀಲ ಅಲ್ವಿನ್ ಸೆಬಾಸ್ಟಿಯನ್ ಅವರು “ತಕ್ಷಣ ಆನೆಯವನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆಗೆ ನಿರ್ದೇಶಿಸಬೇಕು” ಎಂದು ಕೋರಿದರು. ಇದಕ್ಕೆ ಒಪ್ಪದ ಪೀಠವು ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಮತ್ತು ಮಠವು ನೋಟಿಸ್‌ಗೆ ಪ್ರತಿಕ್ರಿಯಿಸಬೇಕು. ಆನಂತರ ಈ ಸಂಬಂಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿತು.
ಮಠದ ಸುಪರ್ದಿನಲ್ಲಿರುವ ʼಲಕ್ಷ್ಮಿʼ ಆನೆಯನ್ನು ನಿರ್ದಯವಾಗಿ ಥಳಿಸಲಾಗುತ್ತಿದ್ದು, ಅದನ್ನು ತುಮಕೂರು ಜಿಲ್ಲೆಯಾದ್ಯಂತ ಭಿಕ್ಷಾಟನೆಗೆ ದೂಡಲಾಗಿದೆ. ಕಾನೂನು ಪ್ರಕ್ರಿಯೆಗೆ ವಿರುದ್ಧವಾಗಿ ಅದನ್ನು ಗಡಿ ಭಾಗದಲ್ಲಿ ಸುತ್ತಾಡಿಸಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
1992ರಲ್ಲಿ ಲಕ್ಷ್ಮಿಯು ಅರಣ್ಯ ಶಿಬಿರದಲ್ಲಿ ಜನಿಸಿತ್ತು. ಅದರ ಕಸ್ಟಡಿಯನ್ನು 1994ರ ಮಾರ್ಚ್ 28ರಂದು ಆಂಧ್ರಪ್ರದೇಶದ ಅನಂತಪುರದಲ್ಲಿರುವ ಮಠಕ್ಕೆ ನೀಡಲಾಗಿತ್ತು. ಆದರೆ, ಆನೆಯನ್ನು ಅನಂತಪುರಕ್ಕೆ ಕೊಂಡೊಯ್ಯದ ಪೀಠವು ತನ್ನ ಶಾಖಾಮಠವಾದ ತುಮಕೂರಿನ ನೊಣವಿನಕರೆ ಮಠದಲ್ಲಿ ಉಳಿಸಿತ್ತು. ಯುವಕರ ತಂಡವು ಲಕ್ಷ್ಮಿಯನ್ನು ಭಿಕ್ಷಾಟನೆ ಹೊರಗೆ ಕರೆದು ತರುತ್ತಿದ್ದು ಅವರಿಗೆ ಮಾವುತನ ತರಬೇತಿ ನೀಡಲಾಗಿಲ್ಲ ಎಂದು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಯಾವಾಗಲಾದರೊಮ್ಮೆ ರಾಜ್ಯದ ವ್ಯಾಪ್ತಿಯಲ್ಲಿ ಲಕ್ಷ್ಮಿಯನ್ನು ಹೊರಗೆ ಕರೆದೊಯ್ಯಬಹುದಾಗಿದೆ. ಇದು ವಿಸ್ತೃತವಾದ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ಸರ್ಕಾರ ಹೇಳಿತ್ತು. ಹೀಗಿದ್ದರೂ ಲಕ್ಷ್ಮಿಯನ್ನು ಬಾಡಿಗೆ ನೀಡುವುದು, ಭಿಕ್ಷಾಟನೆಗೆ ಒಡ್ಡುವುದು, ರಾಜ್ಯದಾದ್ಯಂತ ಸುತ್ತಾಡಿಸುವುದನ್ನು ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
2008ರ ಆದೇಶಕ್ಕೆ ವಿರುದ್ಧವಾಗಿ ಬೆಂಗಳೂರಿನಲ್ಲಿ ರಾಜಕಾರಣಿಯೊಬ್ಬರಿಗೆ ಆಶೀರ್ವದಿಸಲು ತುಮಕೂರಿನಿಂದ ಸಿಲಿಕಾನ್ ಸಿಟಿಯ ಮೆರಿಡಿಯನ್ ಹೋಟೆಲ್‌ಗೆ ಲಕ್ಷ್ಮಿಯನ್ನು ಕರೆತರಲಾಗಿತ್ತು. ಈ ಹಿನ್ನೆಲೆಯಲ್ಲಿ 2008ರ ಜುಲೈನಲ್ಲಿ ಲಕ್ಷ್ಮಿಯನ್ನು ವಶಕ್ಕೆ ಪಡೆದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿಟ್ಟು, ಮಾವುತನ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿತ್ತು.
ಈ ಸಂದರ್ಭದಲ್ಲಿ ಲಕ್ಷ್ಮಿಯು ಕಿಡ್ನಿ, ಮೂತ್ರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಇದೆಲ್ಲದರ ನಡುವೆಯೂ ಕೇವಲ 28 ದಿನಗಳ ಬಳಿಕ ಮಠದ ಸ್ವಾಮೀಜಿಯವರ ಆಶ್ವಾಸನೆಯ ಹಿನ್ನೆಲೆಯಲ್ಲಿ ಮತ್ತೆ ಅರಣ್ಯ ಇಲಾಖೆಯು ಆನೆಯನ್ನು ಮಠಕ್ಕೆ ನೀಡಿತ್ತು. ಇಷ್ಟಾಗ್ಯೂ, ಲಕ್ಷ್ಮಿಗೆ ಕಿರುಕುಳ ನೀಡಲಾಗುತ್ತಿದ್ದು, ಅದನ್ನು ಭಿಕ್ಷಾಟನೆಗೆ ದೂಡಲಾಗಿದೆ. ದೂರದ ಪ್ರದೇಶಗಳಲ್ಲಿ ನಡೆಯುವ ಸಮಾರಂಭಗಳಿಗೆ ಅದನ್ನು ಕರೆದೊಯ್ಯಲಾಗುತ್ತಿದೆ. ಆ ಮೂಲಕ 2006 ಮತ್ತು 2008ರಲ್ಲಿ ಅರಣ್ಯ ಇಲಾಖೆ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಎರಡು ದಶಕಗಳಿಂದ ಲಕ್ಷ್ಮಿಯ ಮೇಲೆ ಮಠದ ಆಡಳಿತವು ದೌರ್ಜನ್ಯ ಎಸಗಿದೆ. ವಿವಿಧ ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ ಅದನ್ನು ಬಾಡಿಗೆಗೆ ನೀಡಲಾಗುತ್ತಿದೆ. ಹೀಗಾಗಿ, ಪ್ರತಿವಾದಿಯಾಗಿರುವ ಮಠ/ದೇವಸ್ಥಾನವು ಲಕ್ಷ್ಮಿಯ ಮಾಲೀಕತ್ವಕ್ಕೆ ಅನರ್ಹವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.