ಮೇಘಾಲಯದ ಮಣ್ಣು ಮತ್ತು ಜಲ ಸಂರಕ್ಷಣಾ ನಿರ್ದೇಶನಾಲಯಕ್ಕೆ ಅನುಚಿತ ರೀತಿಯಲ್ಲಿ ಚಾಲಕರನ್ನು ನೇಮಿಸಿರುವ ಸಂಬಂಧ ಮೇಘಾಲಯ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ₹ 3 ಲಕ್ಷ ದಂಡ ವಿಧಿಸಿದೆ.
ಸರ್ಕಾರಿ ಉದ್ಯೋಗಗಳಿಗೆ ನಡೆಯುವ ನೇಮಕಾತಿ ಕುರಿತು ವೈಯಕ್ತಿಕ ಒಲವು ಮತ್ತು ಸ್ವಜನಪಕ್ಷಪಾತ ಪಾತ್ರ ವಹಿಸಬಾರದು ಎಂದ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ ಡಿಯೆಂಗ್ಡೋ ಅವರನ್ನೊಳಗೊಂಡ ಪೀಠ ಸಂದರ್ಶನಗಳಂತಹ ವ್ಯಕ್ತಿನಿಷ್ಠ ಮೌಲ್ಯಮಾಪನ ಪ್ರಕ್ರಿಯೆ ವಿಚಾರದಲ್ಲಿ ದೇಶದಲ್ಲಿ ಅಸ್ತಿತ್ವದಲ್ಲಿರುವ ಅಂಕಲ್ ಸಂಸ್ಕೃತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
"ಭಾರತೀಯ ಮನಸ್ಸು ಹೇಗಿದೆ ಎಂದರೆ ಮೌಲ್ಯಮಾಪನದ ವ್ಯಕ್ತಿನಿಷ್ಠ (ಸಂದರ್ಶನ ಇತ್ಯಾದಿ) ಭಾಗವು ಹೆಚ್ಚಾಗಿ, ಸ್ವಜನಪಕ್ಷಪಾತ ಅಥವಾ ತಥಾಕಥಿತ ಅಂಕಲ್ ಸಂಸ್ಕೃತಿ ಇಲ್ಲವೇ ಹೆಚ್ಚು ಸಮ್ಮತಿದಾಯಕವಲ್ಲದ ಬಾಹ್ಯ ಪರಿಗಣನೆಗಳಿಂದ ಕಳಂಕಿತ ಅಥವಾ ಪ್ರಭಾವಿತವಾಗಿದೆ ಇಲ್ಲವೇ ಅವುಗಳಿಂದ ಮಾರ್ಗದರ್ಶನ ಪಡೆಯುತ್ತಿದೆ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.
ಚಾಲನಾ ಕೌಶಲ್ಯಕ್ಕೆ ಸಂಬಂಧಿಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ಅರ್ಜಿದಾರರು ಸಂದರ್ಶನದಲ್ಲಿ ಕಡಿಮೆ ಅಂಕಗಳಿಸಿ ಅನರ್ಹರಾಗಿದ್ದರು. ಇದು ಅವರನ್ನು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿತ್ತು.
ವಸ್ತುನಿಷ್ಠತೆಯ ಎಲ್ಲಾ ಅಂಶಗಳನ್ನು ಗಾಳಿಗೆ ತೂರಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಲಯ ಆಯ್ಕೆ ಪ್ರಕ್ರಿಯೆಯನ್ನು ಅಮಾನ್ಯಗೊಳಿಸಿತು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೂ ಅದು ಆಕ್ಷೇಪ ಸೂಚಿಸಿತು.
ಆದರೆ ಸಂದರ್ಶನ ನಡೆದು ಹಲವು ತಿಂಗಳುಗಳು ಕಳೆದಿರುವುದರಿಂದ ಈಗ ಅರ್ಜಿದಾರರು ಬಯಸಿದಂತೆ ನೇಮಕಾತಿ ಸಾಧ್ಯವಿಲ್ಲ ಎಂದ ನ್ಯಾಯಾಲಯ ಭವಿಷ್ಯದಲ್ಲಿ ನಡೆಯುವ ನೇಮಕಾತಿ ವೇಳೆ ಅರ್ಜಿದಾರರನ್ನು ಅನುಕೂಲಕರ ರೀತಿಯಲ್ಲಿ ಪರಿಗಣಿಸಬೇಕು ಎಂದಿತು. ಅಲ್ಲದೆ ಸರ್ಕಾರಿ ಹುದ್ದೆಗಳಿಗೆ ಅಥವಾ ರಾಜ್ಯ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸುವಾಗ ಮೇಲ್ಮನವಿದಾರರಿಗೆ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆ ಮಾಡುವಂತೆಯೂ ಅದು ಸೂಚಿಸಿತು.
ಮತ್ತೊಂದೆಡೆ ಸೂಕ್ತ ಸ್ಥಾನ ಪಡೆಯುವ ಅವಕಾಶವನ್ನು ಜೀವಮಾನವಿಡೀ ಕಳೆದುಕೊಂಡ ಅರ್ಜಿದಾರರಿಗೆ ರಾಜ್ಯ ಸರ್ಕಾರ ₹ 3 ಲಕ್ಷ ಹಣವನ್ನು ದಂಡದ ರೂಪದಲ್ಲಿ ನೀಡಬೇಕು ಎಂದು ಕೂಡ ಸೂಚಿಸಿತು. ಸಾಮಾನ್ಯ ನಿಯಮಾವಳಿಗಳನ್ನು ಪಾಲಿಸದೆ ಸಂದರ್ಶನ ನಡೆಸಿದವರು ಮತ್ತು ಪ್ರಕ್ರಿಯೆಯನ್ನು ಹೈಜಾಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕರಣವನ್ನು ವಿಚಕ್ಷಣಾಧಿಕಾರಿಗಳ ಗಮನಕ್ಕೆ ತರುವಂತೆ ಪ್ರತಿವಾದಿಗಳಿಗೆ ನ್ಯಾಯಾಲಯ ಸೂಚಿಸಿತು.
ಉದ್ಯೋಗಕ್ಕೆ ಉತ್ತಮ ವ್ಯಕ್ತಿಯನ್ನು ಹುಡುಕುವಲ್ಲಿ ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿಫಲವಾಗಿದ್ದು ನೇಮಕಾತಿ ಪ್ರಕ್ರಿಯೆ ಎಂದಿಗೂ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಈ ದೋಷಪೂರಿತ ಕಸರತ್ತು ರಾಜ್ಯ ಸರ್ಕಾರಕ್ಕೆ ಮಾದರಿಯಾಗಬೇಕು ಎಂದು ಪೀಠ ಇದೇ ವೇಳೆ ಕುಟುಕಿತು.