
ಬೀದಿ ನಾಯಿಗಳ ಪ್ರಕರಣದ ವಿಚಾರಣೆ ಮುಂದುವರಿಸಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುವ ಸಂಬಂಧ ತನ್ನ ರಿಜಿಸ್ಟ್ರಾರ್ ಜನರಲ್‌ಗೆ ಮೇಘಾಲಯ ಹೈಕೋರ್ಟ್ ನಿರ್ದೇಶನ ನೀಡಿದೆ [ಕೌಸ್ತಭ್ ಪಾಲ್ ಮತ್ತು ಮೇಘಾಲಯ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳನ್ನು ಎಲ್ಲಾ ಹೈಕೋರ್ಟ್‌ಗಳಿಂದ ತನಗೆ ವರ್ಗಾಯಿಸುವಂತೆ ಆಗಸ್ಟ್ 22ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಎಲ್ಲಾ ಬೀದಿನಾಯಿಗಳನ್ನು ತೆರವುಗೊಳಿಸುವಂತೆ ಮತ್ತು ಅವುಗಳನ್ನು ಆಶ್ರಯ ಕೇಂದ್ರಗಳಿಂದ ಬಿಡುಗಡೆ ಮಾಡದಂತೆ ತಾನು ಆಗಸ್ಟ್ 11ರಂದು ನೀಡಿದ್ದ ಆದೇಶವನ್ನು ಮಾರ್ಪಡಿಸಿ ಲಸಿಕೆ ಪಡೆದ ನಾಯಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅವಕಾಶವಿತ್ತಿತ್ತು. ಈ ವೇಳೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಸೇರಿಸುವ ಮೂಲಕ ವಿಚಾರಣೆ ಪ್ರಕ್ರಿಯೆಯ ವ್ಯಾಪ್ತಿಯನ್ನು ನ್ಯಾಯಾಲಯ ವಿಸ್ತರಿಸಿತ್ತು.
ಇತ್ತೀಚೆಗೆ ಬೀದಿ ನಾಯಿಗಳ ಕುರಿತಾದ ಪ್ರಕರಣದ ವಿಚಾರಣೆ ವೇಳೆ, ಬೀದಿ ನಾಯಿಗಳಿಗೆ ಸಂಬಂಧಿಸಿದ ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಎಲ್ಲಾ ಹೈಕೋರ್ಟ್‌ಗಳಿಂದ ತನಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿರುವುದನ್ನು ಮೇಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಐ ಪಿ ಮುಖರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ ಡಿಯೆಂಗ್‌ಡೋಹ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠದ ಗಮನಕ್ಕೆ ತರಲಾಯಿತು.
ಈ ಕುರಿತು ಆಗಸ್ಟ್ 20ರಂದು ಹೊರಡಿಸಿರುವ ಆದೇಶದಲ್ಲಿ ಮೇಘಾಲಯದಲ್ಲಿನ ʼದಾಳಿಕೋರ ನಾಯಿಗಳʼ ಸಮಸ್ಯೆ ವಿಭಿನ್ನವಾಗಿದ್ದು, ಅಪಾಯಕಾರಿ ಸ್ವರೂಪದ್ದಾಗಿದೆ ಎಂದು ಅದು ತಿಳಿಸಿದೆ.
"ಬಹಳಷ್ಟು ಬೀದಿ ನಾಯಿಗಳು ಕಚ್ಚುವ ನಾಯಿಗಳಾಗಿದ್ದು, ಅವು ತುಂಬಾ ಕ್ರೂರ ಸ್ವಭಾವದ್ದಾಗಿವೆ ಎಂದು ನಮಗೆ ನಿರ್ದಿಷ್ಟವಾಗಿ ತಿಳಿಸಲಾಗಿದೆ. ಹಾದಿ ಬೀದಿಗಳು ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ, ಅವು ಹಠಾತ್ತನೆ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಕೆಲವೊಮ್ಮೆ ಗಂಭೀರವಾಗಿ ಗಾಯಗೊಳಿಸಿವೆ" ಎಂದು ಹೈಕೋರ್ಟ್ ವಿಭಾಗೀಯ ಪೀಠ ಹೇಳಿತ್ತು.
ಅವುಗಳನ್ನು ಹಿಡಿದು ಲಸಿಕೆ ಹಾಕಿ ಚಿಕಿತ್ಸೆ ನೀಡಬೇಕು. ಆಶ್ರಯ ಕೇಂದ್ರಗಳಲ್ಲಿ ಅವುಗಳ ಮೇಲೆ ನಿಗಾ ಇರಿಸಬೇಕು. ಅವುಗಳಿಂದ ಅಪಾಯವಿಲ್ಲ ಎಂದು ಅರಿತ ಬಳಿಕವೇ ಮುಕ್ತಗೊಳಿಸಬೇಕು ಎಂದು ತಾನು ಈ ಹಿಂದೆ ನೀಡಿದ್ದ ನಿರ್ದೇಶನವನ್ನು ಹೈಕೋರ್ಟ್ ವಿಚಾರಣೆ ವೇಳೆ ನೆನಪಿಸಿದೆ.
ಮೇಘಾಲಯ ಹೈಕೋರ್ಟ್ 2024ರಿಂದ ಬೀದಿ ನಾಯಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿದೆ.
ಇಂತಹ ನಾಯಿಗಳನ್ನು ಅವು ಅಪಾಯಕಾರಿಗಳಲ್ಲ ಎಂದು ಖಚಿತಪಡಿಸಿಕೊಳ್ಳದೆ ಬಿಡುಗಡೆ ಮಾಡುವುದರಿಂದ ಸಾರ್ವಜನಿಕ ಸುರಕ್ಷತೆಗೆ ಗಂಭೀರ ಬೆದರಿಕೆ ಉಂಟಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ಹೀಗಾಗಿ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತನ್ನಲ್ಲಿಯೇ ಉಳಿಸಿಕೊಂಡು ವಿಚಾರನೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಔಪಚಾರಿಕವಾಗಿ ಅರ್ಜಿ ಸಲ್ಲಿಸಬೇಕು ಮತ್ತು ಅಲ್ಲಿಂದ ಸೂಕ್ತ ನಿರ್ದೇಶನಗಳನ್ನು ಪಡೆಯಬೇಕು ಎಂದು ರಿಜಿಸ್ಟ್ರಾರ್ ಜನರಲ್ ಅವರಿಗೆ ಪೀಠ ಸೂಚಿಸಿದೆ.
[ತೀರ್ಪಿನ ಪ್ರತಿ]