ಬೀದಿ ನಾಯಿ ತೆರವು ವಿವಾದ: ಲಸಿಕೆ ಪಡೆದ ನಾಯಿಗಳ ಬಿಡುಗಡೆಗೆ ಸುಪ್ರೀಂ ಅವಕಾಶ; ಸಾರ್ವಜನಿಕವಾಗಿ ಆಹಾರ ನೀಡುವಂತಿಲ್ಲ

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಸೇರಿಸುವ ಮೂಲಕ ವಿಚಾರಣೆ ಪ್ರಕ್ರಿಯೆಯ ವ್ಯಾಪ್ತಿಯನ್ನು ನ್ಯಾಯಾಲಯ ವಿಸ್ತರಿಸಿತು.
Supreme Court, Stray Dog
Supreme Court, Stray Dog
Published on

ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಎಲ್ಲಾ ಬೀದಿನಾಯಿಗಳನ್ನು ತೆರವುಗೊಳಿಸುವಂತೆ ಮತ್ತು ಅವುಗಳನ್ನು ಆಶ್ರಯ ಕೇಂದ್ರಗಳಿಂದ ಬಿಡುಗಡೆ ಮಾಡದಂತೆ ತಾನು ಆಗಸ್ಟ್‌ 11ರಂದು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಮಾರ್ಪಡಿಸಿದೆ.

ನಾಯಿಗಳಿಗೆ ಜಂತುಹುಳು ನಿವಾರಣೆ ಮತ್ತು ಲಸಿಕೆ ಹಾಕಿದ ನಂತರ ಅವುಗಳನ್ನು ಶ್ವಾನ ಆಶ್ರಯ ಕೇಂದ್ರದಿಂದ ಬಿಡುಗಡೆ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ , ಸಂದೀಪ್ ಮೆಹ್ತಾ ಹಾಗೂ ಎನ್ ವಿ ಅಂಜಾರಿಯಾ ಅವರಿದ್ದ ಪೀಠ ಹೇಳಿದ್ದು ಶ್ವಾನ ಕೇಂದ್ರದಲ್ಲಿಯೇ ಇರಿಸಿಕೊಳ್ಳಬೇಕು ಎಂಬ ಆದೇಶವನ್ನು ಮಾರ್ಪಡಿಸಿದೆ.

Also Read
ಬೀದಿ ನಾಯಿ ತೆರವು ವಿವಾದ: ಆದೇಶ ಕಾಯ್ದಿರಿಸಿದ ಸುಪ್ರೀಂ; ಸದ್ಯಕ್ಕಿಲ್ಲ ತಡೆಯಾಜ್ಞೆ

ಆದರೆ, ಆಕ್ರಮಣಕಾರಿ ನಡವಳಿಕೆ ಅಥವಾ ರೇಬಿಸ್ ಸೋಂಕಿಗೆ ತುತ್ತಾದ ನಾಯಿಗಳನ್ನು ಶ್ವಾನ ಆಶ್ರಯಗಳಿಂದ ಸಾರ್ವಜನಿಕ ಸ್ಥಳಗಳಿಗೆ ಬಿಡಬಾರದು ಎಂದು ತ್ರಿಸದಸ್ಯ ಪೀಠ ಸ್ಪಷ್ಟಪಡಿಸಿದೆ.

ಇದಲ್ಲದೆ, ನಾಯಿಗಳಿಗೆ ಸಾರ್ವಜನಿಕವಾಗಿ ಆಹಾರ ನೀಡಲು ಅನುಮತಿ ಇಲ್ಲ  ಜೊತೆಗೆ ಆಹಾರ ನೀಡುವುದಕ್ಕಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪುರಸಭೆಯ ಸಂಸ್ಥೆಗಳ ಕೆಲಸಕ್ಕೆ ಅಡ್ಡಿಪಡಿಸದಂತೆ ಪ್ರಾಣಿ ಹಕ್ಕು ಕಾರ್ಯಕರ್ತರಿಗೆ ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿದ್ದ ನಿರ್ದೇಶನಗಳು ಚಾಲ್ತಿಯಲ್ಲಿರುತ್ತವೆ ಎಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ.

ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿರುವ ಶ್ವಾನ ಪ್ರಿಯರು ಅಥವಾ ಸರ್ಕಾರೇತರ ಸಂಸ್ಥೆಗಳು ತಮ್ಮ ಅರ್ಜಿಯ ವಿಚಾರಣೆಗಾಗಿ ಕ್ರಮವಾಗಿ ₹25,000 ಮತ್ತು ₹2 ಲಕ್ಷ ಠೇವಣಿ ಇಡಬೇಕು. ಇಲ್ಲದಿದ್ದರೆ ಅಂತಹವರು ವಿಚಾರಣೆಯಲ್ಲಿ ಭಾಗಿಯಾಗುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಸೇರಿಸುವ ಮೂಲಕ ವಿಚಾರಣೆ ಪ್ರಕ್ರಿಯೆಯ ವ್ಯಾಪ್ತಿಯನ್ನು ನ್ಯಾಯಾಲಯ ವಿಸ್ತರಿಸಿತು. ಮೊದಲು ಪ್ರಕರಣ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಪ್ರಕರಣವನ್ನು ವಿವರವಾಗಿ ಆಲಿಸಿದ ನಂತರ ರಾಷ್ಟ್ರೀಯ ನೀತಿಯನ್ನು ರೂಪಿಸುವುದಾಗಿ ನ್ಯಾಯಾಲಯ ಹೇಳಿದೆ. ಈ ನಿಟ್ಟಿನಲ್ಲಿ, ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಎಲ್ಲಾ ರೀತಿಯ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ತನಗೆ ವರ್ಗಾಯಿಸಿಕೊಂಡಿದೆ.

ಆದೇಶದ ಪ್ರಮುಖಾಂಶಗಳು

  • ನಾಯಿಗಳಿಗೆ ಜಂತುಹುಳು ನಿವಾರಣೆ ಮತ್ತು ಲಸಿಕೆ ಹಾಕಿದ ನಂತರ ಅವುಗಳನ್ನು ಶ್ವಾನ  ಕೇಂದ್ರದಿಂದ ಬಿಡುಗಡೆ ಮಾಡಬೇಕು. 

  • ರೇಬೀಸ್ ಸೋಂಕಿಗೆ ಒಳಗಾದ ಅಥವಾ ಆಕ್ರಮಣಕಾರಿ ನಡವಳಿಕೆ ತೋರುವ ನಾಯಿಗಳನ್ನು ಬಿಡುಗಡೆ ಮಾಡಬಾರದು;

  • ಆಹಾರ ನೀಡುವ ಸ್ಥಳ ರೂಪಿಸಬೇಕು; ಬೀದಿಗಳಲ್ಲಿ ಆಹಾರ ನೀಡಲು ಅವಕಾಶವಿಲ್ಲ;

  • ಬೀದಿಗಳಲ್ಲಿ ನಾಯಿಗಳಿಗೆ ಆಹಾರ ನೀಡುತ್ತಿರುವುದು ಕಂಡುಬಂದರೆ, ಕ್ರಮ ಕೈಗೊಳ್ಳಬೇಕು;

  • ನಿಯಮ ಉಲ್ಲಂಘಿಸಿದರೆ ಅದನ್ನು  ವರದಿ ಮಾಡಲು ಪ್ರತಿಯೊಂದು ಪುರಸಭೆ ಕೂಡ ಸಹಾಯವಾಣಿ ತೆರೆಯಬೇಕು.

  • ಪ್ರಾಣಿ ಹಕ್ಕು ಹೋರಾಟಗಾರರು ಅಡ್ಡಿಪಡಿಸುವಂತಿಲ್ಲ;

  • ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿರುವ ಶ್ವಾನ ಪ್ರಿಯರು ಅಥವಾ ಸರ್ಕಾರೇತರ ಸಂಸ್ಥೆಗಳು ತಮ್ಮ ಅರ್ಜಿಯ ವಿಚಾರಣೆಗಾಗಿ ಕ್ರಮವಾಗಿ ₹25,000 ಮತ್ತು ₹2 ಲಕ್ಷ ಠೇವಣಿ ಇಡಬೇಕು. ಇಲ್ಲದಿದ್ದರೆ ಅಂತಹವರು ವಿಚಾರಣೆಯಲ್ಲಿ ಭಾಗಿಯಾಗುವಂತಿಲ್ಲ

  • ದತ್ತು ಪಡೆದ ನಾಯಿಯನ್ನು ಬೀದಿಗಳಿಗೆ ಬಿಡುವಂತಿಲ್ಲ;

  • ಎಲ್ಲಾ ರಾಜ್ಯಗಳ ವಾದಗಳನ್ನು ಆಲಿಸಿದ ನಂತರ ರಾಷ್ಟ್ರೀಯ ನೀತಿಯನ್ನು ರೂಪಿಸಲಾಗುವುದು.

ಇಡೀ ದೆಹಲಿಯನ್ನು ಬೀದಿನಾಯಿಗಳಿಂದ ಮುಕ್ತಗೊಳಿಸುವಂತೆ ದೆಹಲಿ ಸರ್ಕಾರ, ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಹಾಗೂ ನವದೆಹಲಿ ಮಹಾನಗರ ಪಾಲಿಕೆಗಳಿಗೆ (ಎನ್‌ಡಿಎಂಸಿ) ಸುಪ್ರೀಂ ಕೋರ್ಟ್‌ ಆಗಸ್ಟ್‌ 11ರಂದು ಆದೇಶಿಸಿತ್ತು. ಈ ವಿಚಾರದ ಕುರಿತು ದೇಶಾದ್ಯಂತ ಪರ- ವಿರೋಧದ ಚರ್ಚೆಗಳು ನಡೆದಿದ್ದವು.

Kannada Bar & Bench
kannada.barandbench.com