ಮಾವೊವಾದಿ ಕೃತಿಗಳನ್ನು ಹೊಂದಿರುವುದು, ಧರಣಿಗಳಲ್ಲಿ ಭಾಗವಹಿಸುವುದು ಯುಎಪಿಎ ಅಡಿ ಅಪರಾಧವಲ್ಲ: ಎನ್‌ಐಎ ನ್ಯಾಯಾಲಯ

“ಸುಧಾರಣೆಗೆ ಇದೊಂದು ಅವಕಾಶವಾಗಬೇಕೆ ವಿನಾ ನಿಷೇಧಿತ ಭಯೋತ್ಪಾದನಾ ಸಂಸ್ಥೆಯ ಜೊತೆ ಬಾಂಧವ್ಯ ವೃದ್ಧಿಸಿಕೊಳ್ಳಲು ಈ ಅವಕಾಶ ಬಳಸಿಕೊಳ್ಳಬಾರದು” ಎಂದು ಜಾಮೀನು ಮಂಜೂರು ಮಾಡುವ ವೇಳೆ ವಿಶೇಷ ನ್ಯಾಯಾಲಯದ ನ್ಯಾಯಧೀಶರು ಹೇಳಿದ್ದಾರೆ.
Protests (Representative Image)
Protests (Representative Image)
Published on

ನಿಷೇಧಿತ ಮಾವೋವಾದಿ ಉಗ್ರಗಾಮಿ ಸಂಘಟನೆಯಾದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ಜೊತೆ ಗುರುತಿಸಿಕೊಂಡಿರುವುದು ಮತ್ತು ಅವರಿಗೆ ಬೆಂಬಲ ನೀಡುವುದರ ಜೊತೆಗೆ ಅದರ ಕಾರ್ಯಚಟುವಟಿಕೆ ವಿಸ್ತರಿಸುವ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ-1967 (ಯುಎಪಿಎ) ಮತ್ತು ಭಾರತೀಯ ತಂಡ ಸಂಹಿತೆ ಅಡಿ ಬಂಧಿತರಾಗಿದ್ದ ಅಲ್ಲನ್ ಶೋಯಿಬ್ ಮತ್ತು ಥ್ವಾಹಾ ಫಸಲ್ ಅವರಿಗೆ ಕೊಚ್ಚಿಯ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ವಿರುದ್ಧ ಯುಎಪಿಎ ಕಾಯಿದೆಯ ಸೆಕ್ಷನ್ 38, 39 ಮತ್ತು ಐಪಿಸಿ ಸೆಕ್ಷನ್ 120B ಅಡಿ ಪ್ರಕರಣ ದಾಖಲಿಸಲಾಗಿದೆ.

ಭಾರತದ ಒಕ್ಕೂಟದಿಂದ ವಿಮುಖವಾಗುವ ಕಾಶ್ಮೀರದ ಪ್ರತ್ಯೇಕತೆಗೆ ಸಂಬಂಧಿಸಿದ ಬ್ಯಾನರ್ ಹೊಂದಿದ ಆರೋಪದ ಮೇಲೆ ಸೆಕ್ಷನ್ 13ರ (ಕಾನೂನು ಬಾಹಿರ ಚಟುವಟಿಕೆಗಳಿಗೆ ಶಿಕ್ಷೆ) ಅಡಿ ಹೆಚ್ಚುವರಿಯಾಗಿ ಥ್ವಾಹಾ ಫಸಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಳೆದ ನವೆಂಬರ್‌ನಲ್ಲಿ ಅನುಮಾನಾಸ್ಪದವಾಗಿ ಮೂರನೇ ವ್ಯಕ್ತಿಯ ಜೊತೆ ಚರ್ಚಿಸುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಈ ಇಬ್ಬರ ಪೈಕಿ ಒಬ್ಬರು ಕಾನೂನು, ಇನ್ನೊಬ್ಬರು ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದಾರೆ. ಪೊಲೀಸರನ್ನು ನೋಡುತ್ತಿದ್ದಂತೆ ಮೂರನೇ ವ್ಯಕ್ತಿ ಪಲಾಯನಗೈದಿದ್ದರು. ಆರೋಪಿಗಳ ಮನೆಯಲ್ಲಿ ಶೋಧನೆ ನಡೆಸಿದಾಗ ಮಾವೋವಾದಿ ಸಿದ್ಧಾಂತಕ್ಕೆ ಸಂಬಂಧಿಸಿದ ಪುಸ್ತಕಗಳು, ಸಾಮಾಜಿಕ ಮತ್ತು ರಾಜಕೀಯ ವಿಚಾರಗಳನ್ನೊಳಗೊಂಡ ಕುರ್ದ್‌ ಸಮುದಾಯದ ಮೇಲೆ ಟರ್ಕಿ ಕದನ, ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸಿದ್ಧಪಡಿಸಲಾದ ಮಾಧವ ಗಾಡ್ಗೀಳ್ ಸಮಿತಿಯ ವರದಿ, ಜಮ್ಮು ಮತ್ತು ಕಾಶ್ಮೀರ, ಕೇಂದ್ರ ಸರ್ಕಾರ ಮತ್ತು ಯುಎಪಿಎ ಬಗೆಗಿನ ಕರಪತ್ರ, ಲೇಖನ ಪತ್ತೆಯಾಗಿದ್ದವು.

ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಲಾಗಿರುವ ದಾಖಲೆಗಳು ಮೇಲ್ನೋಟಕ್ಕೆ ಪ್ರಮುಖವಾದುವಲ್ಲ ಎಂದಿರುವ ಎನ್‌ಐಎ ವಿಶೇಷ ನ್ಯಾಯಾಧೀಶ ಅನಿಲ್ ಕೆ. ಭಾಸ್ಕರ್ ಅವರು ಹೀಗೆ ಹೇಳಿದ್ದಾರೆ.

“ಮಾವೋವಾದಿ ಬರಹಗಳನ್ನು ಹೊಂದಿದ್ದ ಮಾತ್ರಕ್ಕೆ, ಸರ್ಕಾರ ವಿರುದ್ಧದ ಧರಣಿಯಲ್ಲಿ ಪಾಲ್ಗೊಂಡಿದ್ದ ಕಾರಣಕ್ಕೆ ಅಥವಾ ಖಚಿತ ರಾಜಕೀಯ ನಂಬಿಕೆಗಳನ್ನು ಹೊಂದಿರುವ ಕಾರಣಕ್ಕೆ ವ್ಯಕ್ತಿಯೊಬ್ಬ ಉಗ್ರವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದರ್ಥವಲ್ಲ.”
ಎನ್‌ಐಎ ವಿಶೇಷ ನ್ಯಾಯಾಲಯ, ಕೊಚ್ಚಿ

“ಪ್ರತಿಭಟನೆಯ ಹಕ್ಕೂ ಸಂವಿಧಾನದತ್ತವಾಗಿ ದೊರೆತಿದೆ. ಸರ್ಕಾರದ ನೀತಿ-ನಿರ್ಧಾರಗಳ ಬಗೆಗಿನ ಪ್ರತಿಭಟನೆಯು ಕೆಟ್ಟ ಕಾರಣಕ್ಕಾದರೂ ಅದನ್ನು ದೇಶದ್ರೋಹಿ ಚಟುವಟಿಕೆ ಅಥವಾ ಪ್ರತ್ಯೇಕತೆಗೆ ಬೆಂಬಲ ಎಂದು ಭಾವಿಸಬಾರದು” ಎಂದು ನ್ಯಾ. ಭಾಸ್ಕರ್ ಹೇಳಿದ್ದಾರೆ.

“ಪರರಿಗಾಗುವ ಅನ್ಯಾಯ, ಮಾನವ ಹಕ್ಕುಗಳ ಉಲ್ಲಂಘನೆಯು ನೇರವಾಗಿ ವ್ಯಕ್ತಿಯೊಬ್ಬರಿಗೆ ಸಂಬಂಧಪಟ್ಟಿಲ್ಲವಾದರೂ ಆ ವ್ಯಕ್ತಿಯನ್ನು ಘಾಸಿಗೊಳಿಸುತ್ತವೆ. ಗೊಂದಲಕಾರಿ ವಿಚಾರಗಳು ತಲೆಗೆಬಂದು ವ್ಯಕ್ತಿಯು ಬಂಡೇಳಬಹುದು. ಇದರಿಂದ ಭಾವನಾತ್ಮಕ ಉದ್ವೇಗ, ಒತ್ತಡ ಮತ್ತು ಆಯಾಸವಾಗುತ್ತದೆ… ಪ್ರಶ್ನಾರ್ಹವಾದ ಬರವಣಿಗೆ… ನಿರ್ದಿಷ್ಟ ಕಾರ್ಯಕ್ರಮ ಅಥವಾ ಅನುಭವಕ್ಕೆ ಸಂಬಂಧಿಸಿದ್ದಲ್ಲ. ಇದು ಭವಿಷ್ಯದಲ್ಲಿ ನಡೆಯುವ ದಾಳಿಯ ನೀಲನಕ್ಷೆ ಎಂದೆನಿಸುವುದಿಲ್ಲ. ಜನರ ಕ್ರಾಂತಿಗೆ ಸಂಬಂಧಿಸಿದ ಮಾವೋವಾದಿ ಸಿದ್ಧಾಂತದ ಸಾಮಾನ್ಯ ನೋಟ ಎಂದೆನಿಸುತ್ತದೆ. ಇದಲ್ಲೆಕ್ಕಿಂತಲೂ ಅವರು ಬರೆದಿಟ್ಟುಕೊಂಡಿರುವ ಟಿಪ್ಪಣಿಗಳು ಮಾವೋವಾದಿ ಸಿದ್ಧಾಂತದ ಕಡೆಗಿನ ಒಲವನ್ನು ತೋರಿಸುತ್ತದೆ. ಪ್ರಚೋದನಾಕಾರಿ ವಿಚಾರಗಳು, ಅಪರಾಧ ಕೃತ್ಯ ನಡೆಸುವುದರೆಡೆಗಿನ ಸಿದ್ಧತೆ ಎಂದಲ್ಲ" ಎಂದು ನ್ಯಾ. ಭಾಸ್ಕರ್ ವಿವರಣೆ ನೀಡಿದ್ದಾರೆ.
“ಸುಧಾರಣೆಗೆ ಇದನ್ನು ಅವಕಾಶವನ್ನಾಗಿ ಮಾಡಿಕೊಳ್ಳಬೇಕೆ ವಿನಾ ನಿಷೇಧಿತ ಉಗ್ರವಾದಿ ಸಂಘಟನೆಯ ಜೊತೆ ಮತ್ತಷ್ಟು ಬಾಂಧವ್ಯ ವೃದ್ಧಿಸಿಕೊಳ್ಳಲು ಅಲ್ಲ”
ನ್ಯಾ. ಅನಿಲ್ ಭಾಸ್ಕರ್, ಎನ್‌ಐಎ ವಿಶೇಷ ನ್ಯಾಯಾಲಯ

“ಪ್ರಜಾಸತ್ತಾತ್ಮಕವಾಗಿ ಅಥವಾ ಕಾನೂನಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಹಿಂಸಾತ್ಮಕವಾಗಿ ಹೊರಗಟ್ಟುವ ಹಾದಿ ಹಿಡಿಯಲಾಗದು. ಜನರು ಬಯಸಿದರೂ… ಅಂಥ ವಿಷಯಗಳಿಗೆ ಸಹಾಯ ಮಾಡಲು ಪ್ರಚೋದಿಸಬಾರದು” ಎಂದು ನ್ಯಾಯಾಲಯ ಹೇಳಿತು.

Also Read
ಕೇರಳ ಸಾಮಾಜಿಕ ಆರ್ಥಿಕ ಜಾತಿ ಸಮೀಕ್ಷೆ: ಸರ್ಕಾರ ನಿದ್ರಿಸುವಂತಿಲ್ಲ ಎಂದ ಹೈಕೋರ್ಟ್

ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಸದರಿ ಪ್ರಕರಣ ಇಂದು ಅಲ್ಲಿ ವಿಚಾರಣೆಗೆ ಒಳಪಡುವ ಸಾಧ್ಯತೆ ಇದೆ. ಆರೋಪಿಗಳಾದ ಅಲ್ಲನ್ ಶೋಯಿಬ್ ಮತ್ತು ಥ್ವಾಹಾ ಫಸಲ್ ಅವರನ್ನು ವಕೀಲರಾದ ಐಸಾಕ್ ಸಂಜಯ್ ಮತ್ತು ತುಷಾರ್ ನಿರ್ಮಲೆ ಸಾರಥಿ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com