ಅವಮಾನಿಸುವ ಉದ್ದೇಶವಿಲ್ಲದೇ ಜಾತಿ ಹೆಸರು ಬಳಕೆ ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಅಪರಾಧವಲ್ಲ: ಹೈಕೋರ್ಟ್‌

ಘಟನೆ ನಡೆದಾಗ ದೂರಿನಲ್ಲಿ ಜಾತಿ ನಿಂದನೆ ವಿಚಾರ ಪ್ರಸ್ತಾಪವಾಗಿಲ್ಲ. ದೂರುದಾರರೂ ದೂರಿನಲ್ಲಿ ಆ ಬಗ್ಗೆ ಹೇಳಿಲ್ಲ. ಅಪಹರಣ, ಮಾರಕಾಸ್ತ್ರಗಳಿಂದ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರಿನಲ್ಲಿ ಆರೋಪಿಸಲಾಗಿದೆ.
ಅವಮಾನಿಸುವ ಉದ್ದೇಶವಿಲ್ಲದೇ ಜಾತಿ ಹೆಸರು ಬಳಕೆ ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಅಪರಾಧವಲ್ಲ: ಹೈಕೋರ್ಟ್‌

ಉದ್ದೇಶಪೂರ್ವಕವಾಗಿ ಅಥವಾ ಅವಮಾನಿಸಲೆಂದೇ ಜಾತಿ ನಿಂದನೆ ಮಾಡಿದರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿ ಅಪರಾಧವಾಗುತ್ತದೆಯೇ ಹೊರತು, ಸುಮ್ಮನೆ ಜಾತಿ ಉಲ್ಲೇಖಿಸಿದರೆ ಅಪರಾಧವಾಗದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಕೋರಿ ಆನೇಕಲ್‌ನ ಸೂರ್ಯನಗರದ ನಿವಾಸಿ ವಿ ಶೈಲೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

ಅರ್ಜಿದಾರನ ವಿರುದ್ಧದ ಎಸ್‌ಸಿ/ಎಸ್‌ಟಿ ಕಾಯಿದೆ ಅಡಿಯ ಆರೋಪಗಳು ಹಾಗೂ ಈ ಸಂಬಂಧ ಸತ್ರ ನ್ಯಾಯಾಲಯವು ತೆಗೆದುಕೊಂಡಿದ್ದ ಸಂಜ್ಞೇ ರದ್ದುಪಡಿಸಿರುವ ನ್ಯಾಯಾಲಯವು ಮಾರಕಾಸ್ತ್ರಗಳಿಂದ ಹಲ್ಲೆ, ಅಪಹರಣ, ಉದ್ದೇಶಪೂರ್ವಕ ಅಪಮಾನ ಹಾಗೂ ಬೆದರಿಕೆ ಆರೋಪಗಳ ಅಡಿಯ ವಿರುದ್ಧದ ಪ್ರಕರಣ ಮುಂದುವರಿಸಲು ಅನುಮತಿಸಿದೆ.

ಜಾತಿ ನಿಂದನೆ ಮಾಡುವ ಅಥವಾ ಅಪಮಾನ ಮಾಡುವ ಉದ್ದೇಶವಿರದೆ ಕೇವಲ ಸಂತ್ರಸ್ತನ ಜಾತಿ ಹೆಸರನ್ನು ಉಲ್ಲೇಖಿಸಿ, ನಿಂದಿಸಿದ ತಕ್ಷಣ ಅದು ಅಪರಾಧವಾಗುವುದಿಲ್ಲ. ವ್ಯಕ್ತಿಯನ್ನು ನಿಂದಿಸುವ ಉದ್ದೇಶಕ್ಕೆ ಜಾತಿಯ ಹೆಸರು ಬಳಸಿದರೆ ಮಾತ್ರ ಅದು ಅಪರಾಧವಾಗುತ್ತದೆ. ಈ ಪ್ರಕರಣದಲ್ಲಿ ಘಟನೆ ನಡೆದ ತಕ್ಷಣ ನೀಡಿದ ದೂರಿನಲ್ಲಿ ಜಾತಿ ನಿಂದನೆ ವಿಚಾರವೇ ಪ್ರಸ್ತಾಪವಾಗಿಲ್ಲ. ದೂರುದಾರರೂ ಸಹ ದೂರಿನಲ್ಲಿ ಆ ಬಗ್ಗೆ ಹೇಳಿಲ್ಲ. ಅಪಹರಣ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಾಗೂ ಜೀವ ಬೆದರಿಕೆ ಹಾಕಿರುವ ಬಗ್ಗೆಯಷ್ಟೇ ದೂರಿನಲ್ಲಿ ಆರೋಪಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಜಗಳ ನಡೆದಾಗ ಎರಡೂ ಕಡೆಯವರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ದೂರುದಾರರ ಪುತ್ರನ ಜಾತಿಯ ಹೆಸರನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ಆತ ಉದ್ದೇಶಪೂರ್ವಕವಾಗಿ ಅಥವಾ ಅಪಮಾನ ಮಾಡಲೆಂದೇ ಜಾತಿ ನಿಂದನೆ ಮಾಡಿದ್ದಾನೆ ಎನ್ನುವುದಕ್ಕೆ ಯಾವುದೇ ವಿವರಗಳಿಲ್ಲ. ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅಪಮಾನಿಸಿ ಉದ್ದೇಶಪೂರ್ವಕವಾಗಿ ಆತನ ಜಾತಿ ಹಿಡಿದು ನಿಂದಿಸಿದರೆ ಮಾತ್ರ ಕಾಯಿದೆ ಅನ್ವಯವಾಗುತ್ತದೆ. ಪ್ರಕರಣದ ಆರೋಪಪಟ್ಟಿ ಮತ್ತು ಸಾಕ್ಷಿಗಳ ಹೇಳಿಕೆಯಲ್ಲಿ ಎಲ್ಲೂ ಏಕೆ ಜಾತಿ ನಿಂದನೆ ಮಾಡಲಾಯಿತು, ಹೇಗೆ ಮಾಡಲಾಯಿತು ಎಂಬ ಬಗ್ಗೆ ಯಾವುದೇ ವಿವರಗಳಿಲ್ಲ. ಆದ್ದರಿಂದ, ಅರ್ಜಿದಾರನ ವಿರುದ್ಧದ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯ ಪ್ರಕರಣ ಊರ್ಜಿತವಾಗದು ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.

Also Read
ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವರ್ಗದ ಶೇ.15ರಷ್ಟು ನ್ಯಾಯಮೂರ್ತಿಗಳು ಮಾತ್ರ ಹೈಕೋರ್ಟ್‌ಗಳಿಗೆ ನೇಮಕ: ಕಾನೂನು ಸಚಿವಾಲಯ

ಪ್ರಕರಣದ ಹಿನ್ನೆಲೆ: ಜಯಮ್ಮ ಎಂಬುವರು 2020ರ ಜೂನ್‌ 14ರಂದು ಸೂರ್ಯನಗರ ಠಾಣೆ ಪೊಲೀಸರಿಗೆ ದೂರು ನೀಡಿ, ತನ್ನ ಮಗ ಮತ್ತು ಆತನ ಸ್ನೇಹಿತರು ಕ್ರಿಕೆಟ್ ಆಡುತ್ತಿದ್ದಾಗ ಎರಡು ತಂಡಗಳ ನಡುವೆ ಜಗಳ ನಡೆದಿದೆ. ಇದೇ ಕಾರಣಕ್ಕೆ ತನ್ನ ಮಗನನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸರು ಎಫ್‌ಐಆರ್‌ ದಾಖಲಿಸಿ, ತನಿಖೆ ಆರಂಭಿಸಿದ್ದರು. ಈ ವೇಳೆ ದೂರುದಾರರ ಮಗನನ್ನು ಜಾತಿಯ ಹೆಸರು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿತ್ತು.

ಆಗ ಪೊಲೀಸರು, ಆರೋಪಿಗಳ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅಡಿಯ ಆರೋಪಗಳನ್ನೂ ಸೇರಿಸಿದ್ದರು. ತನಿಖೆ ಮುಂದುವರಿಸಿ ಶೈಲೇಶ್ ಮತ್ತಿತರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 323, 324, 365, 506 ಮತ್ತು 149ರಡಿ ಹಾಗೂ ಎಸ್‌ಸಿ, ಎಸ್‌ಟಿ ಕಾಯಿದೆಯ ಸೆಕ್ಷನ್ 3(1)(ಆರ್) ಹಾಗೂ (ಎಸ್)ಅಡಿ ಆರೋಪಪಟ್ಟಿ ಸಲ್ಲಿಸಿದ್ದರು. ಸತ್ರ ನ್ಯಾಯಾಲಯವು ಪ್ರಕರಣದ ಸಂಜ್ಞೇಯ ತೆಗೆದುಕೊಂಡು ವಿಚಾರಣೆ ಕೈಗೆತ್ತಿಕೊಂಡಿತ್ತು. ಇದರಿಂದ, ಆರೋಪಿ ಶೈಲೇಶ್ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. 

Related Stories

No stories found.
Kannada Bar & Bench
kannada.barandbench.com