ಕಳೆದ ಐದು ವರ್ಷಗಳಲ್ಲಿ, ಹೈಕೋರ್ಟ್‌ಗಳಿಗೆ ನೇಮಕಗೊಂಡ ನ್ಯಾಯಮೂರ್ತಿಗಳಲ್ಲಿ ಕೇವಲ ಶೇ.15ರಷ್ಟು ಮಂದಿ ಮಾತ್ರ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಹಾಗೂ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆ (ಡಿಒಜೆ) ಇತ್ತೀಚೆಗೆ ಸಂಸದೀಯ ಸಮಿತಿಗೆ ತಿಳಿಸಿದೆ.
ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ನ್ಯಾಯಾಂಗವೇ ಮೇಲುಗೈ ಸಾಧಿಸಿದ ಮೂರು ದಶಕಗಳ ನಂತರವೂ ಅದು ಎಲ್ಲರನ್ನೂ ಒಳಗೊಂಡಿಲ್ಲ ಮತ್ತು ಸಾಮಾಜಿಕವಾಗಿ ವೈವಿಧ್ಯತೆಯನ್ನು ಹೊಂದಿಲ್ಲ ಎಂದು ಇಲಾಖೆ ಗಮನಸೆಳೆದಿರುವ ವಿಚಾರವನ್ನು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಿಜೆಪಿಯ ಹಿರಿಯ ನಾಯಕ ಸುಶೀಲ್ ಮೋದಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗೆ ವಿವರವಾದ ವರದಿ ನೀಡುವಾಗ ಇಲಾಖೆ ಈ ವಿಚಾರ ತಿಳಿಸಿದೆ.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ಮಾಡುವ ಹೊಣೆಯನ್ನು ಕೊಲಿಜಿಯಂ ಹೊತ್ತುಕೊಂಡಿದೆ. ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಮಹಿಳಾ ವರ್ಗಕ್ಕೆ ಸೇರಿದ ಸೂಕ್ತ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡುವ ಮೂಲಕ ಸಾಮಾಜಿಕ ವೈವಿಧ್ಯತೆಯ ಸಮಸ್ಯೆ ಪರಿಹರಿಸುವ ಪ್ರಾಥಮಿಕ ಜವಾಬ್ದಾರಿ ಕೊಲಿಜಿಯಂ ಮೇಲಿದೆ
ಪ್ರಸ್ತುತ ವ್ಯವಸ್ಥೆಯಲ್ಲಿ, ಕೊಲಿಜಿಯಂ ಶಿಫಾರಸು ಮಾಡಿದ ವ್ಯಕ್ತಿಗಳನ್ನು ಮಾತ್ರ ಸರ್ಕಾರ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸಬಹುದು.
ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ನ್ಯಾಯಾಂಗ ಮೇಲುಗೈ ಸಾಧಿಸಿ ಮೂರು ದಶಕಗಳು ಕಳೆದಿವೆ. ಆದರೆ ಅದು ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಮಾಜಿಕವಾಗಿ ವೈವಿಧ್ಯತೆಯನ್ನು ತರುವ ಆಶಯವನ್ನು ಈಡೇರಿಸಿಲ್ಲ.
ನ್ಯಾಯಮೂರ್ತಿಗಳ ನೇಮಕಾತಿಗೆ ಶಿಫಾರಸು ಮಾಡುವಾಗ ಸಾಮಾಜಿಕ ವೈವಿಧ್ಯತೆಯ ಸಮಸ್ಯೆ ಪರಿಹರಿಸುವ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಮಹಿಳಾ ವರ್ಗಕ್ಕೆ ಸೇರಿದ ಸೂಕ್ತ ಅಭ್ಯರ್ಥಿಗಳ ಹೆಸರು ಪರಿಗಣಿಸುವಂತೆ ಸರ್ಕಾರ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತಿದೆ.
ವರದಿಗಳ ಪ್ರಕಾರ, 2018ರಿಂದ ಡಿಸೆಂಬರ್ 19, 2022ರವರೆಗೆ, ಒಟ್ಟು 537 ನ್ಯಾಯಮೂರ್ತಿಗಳನ್ನು ಹೈಕೋರ್ಟ್‌ಗಳಿಗೆ ನೇಮಿಸಲಾಗಿದೆ, ಅವರಲ್ಲಿ ಶೇ 1.3ರಷ್ಟು ಮಂದಿ ಪರಿಶಿಷ್ಟ ಪಂಗಡ, ಶೇ 2.8ರಷ್ಟು ಮಂದಿ ಪರಿಶಿಷ್ಟ ಜಾತಿ ಹಾಗೂ ಶೇ 11ರಷ್ಟು ಜನ ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದು ಅಲ್ಪಸಂಖ್ಯಾತ ಸಮುದಾಯದಿಂದ ಶೇ 2.6ರಷ್ಟು ಮಂದಿಯನ್ನು ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ.
"ಈ ಅವಧಿಯಲ್ಲಿ 20 ನ್ಯಾಯಮೂರ್ತಿಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಹಿನ್ನೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ" ಎಂದು ಇಲಾಖೆ ತಿಳಿಸಿದೆ.
ಸರ್ಕಾರದಿಂದಲೇ ನ್ಯಾಯಮೂರ್ತಿಗಳ ನೇಮಕಾತಿಗೆ ಅವಕಾಶ ಕಲ್ಪಿಸುವ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ (ಎನ್‌ಜೆಎಸಿ) ಕುರಿತಂತೆಯೂ ಉಲ್ಲೇಖಿಸಿರುವ ಇಲಾಖೆ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಮಹಿಳಾ ವರ್ಗದಿಂದ ನಾಮನಿರ್ದೇಶನಗೊಳ್ಳುವ ಒಬ್ಬರನ್ನು ಒಳಗೊಂಡಂತೆ ಪ್ರಖ್ಯಾತ ವ್ಯಕ್ತಿಗಳನ್ನು ಅದರ ಸದಸ್ಯರನ್ನಾಗಿ ಮಾಡುವಂತೆ ಪ್ರಸ್ತಾಪಿಸಲಾಗಿತ್ತು ಎಂದಿದೆ. ಆದರೆ ಎನ್‌ಜೆಎಸಿ ಎಂಬುದು ಅಸಾಂವಿಧಾನಿಕ ಹಾಗೂ ಅಸಿಂಧು ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಬಹಳ ಹಿಂದೆಯೇ ಘೋಷಿಸಿದೆ.